ಮುದ್ದೇನಹಳ್ಳಿಯಲ್ಲಿ ಸೇವೆಯ ಮೂಲಕ ದೈವ ಸಾಕ್ಷಾತ್ಕಾರವಾಗಿದೆ ಎಂದು ಸಿಎಂ
ಚಿಕ್ಕಬಳ್ಳಾಪುರ: ಭಗವಾನ್ ಸತ್ಯಸಾಯಿ ಬಾಬಾ ಅವರ ಸಾನ್ನಿಧ್ಯದಲ್ಲಿಯೇ ತಾವು ಮಾಂಸಾಹಾರವನ್ನು ತ್ಯಜಿಸಿದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯನ್ನು ಹಾಗೂ ಮಕ್ಕಳ ಐಸಿಯು ಘಟಕವನ್ನು ಲೋಕಾರ್ಪಣೆ ಮಾತನಾಡಿದ ಅವರು, ಸತ್ಯಸಾಯಿ ಬಾಬಾ ಅವರ ದರ್ಶನ ಹಾಗೂ ಅವರ ಸಾನ್ನಿಧ್ಯದಲ್ಲಿ ಕಳೆದ ಕೆಲ ಭಕ್ತಿಯ ಅನುಭೂತಿಗಳನ್ನು ಬಿಚ್ಚಿಟ್ಟರು.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಸತ್ಯಸಾಯಿ ಆಶ್ರಮಕ್ಕೆ ನಾನು 1998ರಲ್ಲಿ ಒಂದು ದಿನ ನಾನು ಭೇಟಿ ನೀಡಿದ್ದೆ. ಆಗ ಬಾಬಾ ಅವರು ಅಲ್ಲಿಗೆ ಬಂದಿದ್ದರು. ಅಂದು ಬಾಬಾ ಅವರ ದರ್ಶನ ಪಡೆದ ನಾನು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಆ ಸಭೆಯಲ್ಲೇ ಇದ್ದೆ. ಆ ಸಭೆಯಲ್ಲಿ ಬಾಬಾ ಅವರ ವಿದೇಶಿ ಭಕ್ತರೊಬ್ಬರು ದೇಹಕ್ಕೆ ಸಸ್ಯಹಾರ ಅಥವಾ ಮಾಂಸಹಾರಗಳಲ್ಲಿ ಯಾವುದು ಒಳ್ಳೆಯದು ಎಂಬ ಬಗ್ಗೆ ಮಾತನಾಡಿದರು. ಅವರ ಬಳಿ ಅದಕ್ಕೆ ಸಂಬಂಧಿಸಿದ ಒಂದು ಪುಸ್ತಕ ಇತ್ತು. ಅವರು ಆರೋಗ್ಯ ಮತ್ತು ವೈಜ್ಞಾನಿಕ ದೃಷ್ಟಿಯಲ್ಲಿ ಇವೆರಡೂ ಆಹಾರ ಪದ್ಧತಿಗಳ ಸಾಧಕ ಬಾಧಕಗಳನ್ನು ವಿವರಿಸಿದರು. ಅವರ ಮಾತುಗಳು ನನ್ನ ಮೇಲೆ ಗಾಢ ಪ್ರಭಾವ ಬೀರಿದವು. ನಾನು ಮಾಂಸಹಾರ ಸೇವನೆಯನ್ನು ಆ ಕ್ಷಣಕ್ಕೇ ತ್ಯಜಿಸಿದೆ ಎಂದು ಬೊಮ್ಮಾಯಿ ಅವರು ಹೇಳಿದರು.
ಬಾಬಾ ಅವರಲ್ಲಿ ನಮ್ಮ ಮನೆಮನಗಳಲ್ಲಿ ಬಹಳ ಶ್ರದ್ಧಾಭಕ್ತಿ ಇದೆ. ನಾವು ನಂಬಿ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದೆವು. ನಾನು ಸತ್ಯಸಾಯಿ ಬಾಬಾ ಅವರನ್ನು ನಂಬಿದ್ದೆ. ಆ ನಂಬಿಕೆ ಹುಸಿಯಾಗಲಿಲ್ಲ. ಆನಾರೋಗ್ಯಕ್ಕೆ ಒಳಗಾಗಿದ್ದ ನಮ್ಮ ತಾಯಿಗೆ ಒಳ್ಳೆಯದಾಯಿತು.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಅನೇಕರು ಹೇಳುತ್ತಿದ್ದರು, ನಾನೂ ಕೇಳಿದ್ದೇನೆ, ಆ ಅನುಭೂತಿಯನ್ನು ಸ್ವತಃ ಅನುಭವಿಸಿದ್ದೇನೆ. ಬಾಬಾ ಅವರು ಶ್ರೀಕೃಷ್ಣನ ಪ್ರತಿನಿಧಿಯಾಗಿ ಭೂಮಿಗೆ ಬಂದವರು. ಅವರು ಇದ್ದ ಕಾಲದಲ್ಲೇ ನಾವೆಲ್ಲ ಇದ್ದೆವು ಎನ್ನುವುದಕ್ಕಿಂತ ದೊಡ್ಡ ಭಾಗ್ಯ ಬೇರೆ ಇಲ್ಲ ಎಂಬುದು ನನ್ನ ಭಾವನೆ ಎಂದು ಸಿಎಂ ನುಡಿದರು.
ಮುದ್ದೇನಹಳ್ಳಿಯಲ್ಲಿ ಭಗವಂತನ ಸಾಕ್ಷಾತ್ಕಾರ
ಸೇವೆಯ ಸಾಕಾರವೇ ದಿವ್ಯ ಸಾಕ್ಷಾತ್ಕಾರ, ಇಂಥಹ ಅವಿರತ ಸೇವೆಗೈಯುವ ಮೂಲಕ ಮುದ್ದೇನಹಳ್ಳಿಯ ಸತ್ಯಸಾಯಿಬಾಬಾ ಅವರ ಮಾನವ ಸೇವೆ ಮಾಧವ ಸೇವೆ ಎಂಬ ಸಂದೇಶದಂತೆ ಸೇವಾ ಕಾರ್ಯಕೈಗೊಂಡಿರುವ ಇಲ್ಲಿನ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಭಗವಂತ ಕಣ್ಣಿಗೆ ಕಾಣುವುದಿಲ್ಲ ಎನ್ನುತ್ತಾರೆ. ಆದರೆ ಮುದ್ದೇನಹಳ್ಳಿಯಲ್ಲಿ ಜನಸೇವೆ ಮಾಡುವ ಮೂಲಕ ಸಾಕ್ಷಾತ್ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಮಾನವ ಸೇವೆ ಮಾಧವ ಸೇವೆ ಎಂಬುದು ಬಾಬಾರವರ ಸಂದೇಶ. ಅದರ ದೈವೀರೂಪದ ಸಾಕಾರ ಮುದ್ದೇನಹಳ್ಳಿಯಲ್ಲಿ ಕಾಣಬಹುದು, ಬೇರೆಬೇರೆ ಕಾಲದಲ್ಲಿ ಅವತರಿಸಿದ ಮಹಾತ್ಮರ ಸಾಲಿನಲ್ಲಿ ಭಗವಾನ್ ಬಾಬಾರವರು ಒಬ್ಬರಾಗಿದ್ದಾರೆ. ಗುರುವಿನಲ್ಲಿ ಬೆರೆತು ಸಮ್ಮಿಳಿತವಾಗುವುದೇ ಭಕ್ತಿ. ಇಲ್ಲಿನ ಸಕಾರಾತ್ಮಕವಾದ ಕಾರ್ಯಚಟುವಟಿಕೆಯು ಮಾನವಕುಲಕ್ಕೆ ವರದಾನವಾಗಿ ಸಿಗುತಿದೆ ಆ ಸೇವೆ ಎಲ್ಲರಿಗೂ ಸಲ್ಲುವಂತಾಗಲಿ ಎಂದರು ಮಖ್ಯಮಂತ್ರಿ.
300 ಹಾಸಿಗೆಗಳ ಅತ್ಯಾಧುನಿಕ ಸರ್ವಸುಸಜ್ಜಿತ ಈ ಆಸ್ಪತ್ರೆಯು ಪ್ರಸ್ತುತ 125 ಆಮ್ಲಜನಕ ಪೂರಣ ಹಾಸಿಗೆಗಳು ಮತ್ತು 25 ತೀವ್ರ ನಿಗಾಘಟಕಗಳನ್ನು ಹೊಂದಿದ್ದು, ಮಕ್ಕಳು ಮತ್ತು ನವಜಾತ ಶಿಶು ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹಾಗೂ ಕೋವಿಡ್ ಮೂರನೇ ಅಲೆಯ ಸಂಭಾವ್ಯ ಹೊಡೆತವನ್ನು ಎದುರಿಸಲು ಸಶಕ್ತವಾಗಿದ್ದು, ಕ್ರಮೇಣ ಮೇಲ್ದರ್ಜೆಗೆ ಏರಲಿರುವ ಯೋಜನೆ ರೂಪಿಸಿರುವ ಆಡಳಿತ ಮಂಡಳಿ ಇದೊಂದು ಸಮಾಜದ ಜನಪರ ಕಾಳಜಿಗೆ ಜ್ವಲಂತ ಸಾಕ್ಷಿ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವಿಸ್ತೃತ ವಿಭಾಗದ ಶ್ರೀ ಸತ್ಯಸಾಯಿ ರಾಜೇಶ್ವರಿ ಬ್ಲಾಕ್ʼಗೆ ಭೂಮಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೆರವೇರಿಸಿದರು.
ಸತ್ಯಸಾಯಿ ಗ್ರಾಮದ ಪ್ರಶಾಂತಿ ಬಾಲಮಂದಿರದ ಸದ್ಗುರು ಮಧುಸೂದನ್ ಸಾಯಿ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ, “ಸಮಾಜ, ಸರಕಾರ ಮತ್ತು ಸಂಘಸಂಸ್ಥೆಗಳು ಒಂದಾದಾಗ ಮಹತ್ವದ ಕಾರ್ಯ ಸಂಭವಿಸುತ್ತದೆ. ಮುಂಬರುವ ದಿನಗಳಲ್ಲಿ ಮುದ್ದೇನಹಳ್ಳಿಯಲ್ಲಿ ವೈದ್ಯಕೀಯ ವಿದ್ಯಾಲಯವು ಕಾರ್ಯಾಚರಿಸಲಿದೆ” ಎಂದು ನುಡಿದರು.
ಪ್ರೇಮಾಮೃತಂ ಸಭಾ ಭವನದಲ್ಲಿ ನಡೆದ ಸಭಾ ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ. ಎನ್ ಬಚ್ಚೇಗೌಡ, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ. ಎನ್. ನರಸಿಂಹ ಮೂರ್ತಿ, ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ. ಶ್ರೀನಿವಾಸ್ ಸೇರಿ ಇನ್ನಿತರೆ ಗಣ್ಯರು ಇದ್ದರು.