ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಹೀನ ಕೃತ್ಯ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಘಟನೆ ಮಾಸುವ ಮುನ್ನವೇ ಇನ್ನೊಬ್ಬ ಯುವತಿಯೋರ್ವಳ ಮೇಲೆ ವ್ಯಕ್ತಿಯೊಬ್ಬ ಹಾಡಹಗಲೇ ಹಲ್ಲೆ ನಡೆಸಿ, ಅತ್ಯಾಚಾರಕ್ಕೆತ್ನಿಸಿದ ಕಿರಾತಕ ಘಟನೆ ನಡೆದಿದೆ.
ವಿಷಯ ತಿಳಿದು ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನಲ್ಲಿ ಕಳೆದ ವಾರ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಇಡೀ ರಾಜ್ಯದಲ್ಲಿ ಕಂಪನ ಸೃಷ್ಟಿಸಿತ್ತು. ಈಗ ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿರುವುದು ಮೈಸೂರಿಗರನ್ನು ಬೆಚ್ಚಿ ಬೀಳಿಸಿದೆ.
ನಗರದ ಆರ್.ಎಸ್.ನಾಯ್ಡು ನಗರದಲ್ಲಿ ಇರುವ ಹೋಲಿಕ್ರಾಸ್ʼನಲ್ಲಿ ಈ ಘಟನೆ ನಡೆದಿದ್ದು, ಮನೆಯ ಒಳಗಡೆ ನುಗ್ಗಿದ ಅಪರಿಚಿತ ವ್ಯಕ್ತಿ ಯುವತಿಯ ಕೈಗಳನ್ನು ಹಿಡಿದು ಎಳೆದಾಡಿ, ಚಾಕುವಿನಿಂದ ಚುಚ್ಚಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಯವತಿ ಜೋರಾಗಿ ಕಿರುಚಿಕೊಂಡ ಬಳಿಕ ಸಾರ್ವಜನಿಕರು ಬರುತ್ತಿದ್ದಂತೆ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದನಾದರೂ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಎನ್.ಆರ್.ಠಾಣೆಯ ಇನಸ್ಪೆಕ್ಟರ್ ಅಜರುದ್ದೀನ್, ಸಬ್ ಇನಸ್ಪೆಕ್ಟರ್ ಜಯಕೀರ್ತಿ, ಡಿಸಿಪಿ ಪ್ರದೀಪ್ ಗುಂಟಿ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.