ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ
ವಾಷಿಂಗ್ಟನ್: ಭಯೋತ್ಪಾದನೆಯನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವ ದೇಶಗಳು ತಮಗೂ ಅದು ದೊಡ್ಡ ಬೆದರಿಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕಿಸ್ತಾನ, ಚೀನಾ ದೇಶಗಳಿಗೆ ಕುಟುಕಿದ್ದಾರೆ.
ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಭಾಷಣ ಮಾಡಿದ ಅವರು, ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿರುವ ನೆರೆ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಅತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗತ್ತು ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುತ್ತಿದೆ. ಅಫ್ಘಾನಿಸ್ತಾನವನ್ನು ಭಯೋತ್ಪಾದನೆ ಹರಡಲು ಮತ್ತು ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕಿದೆ. ಅಪ್ಘಾನ್ ಸೂಕ್ಷ್ಮ ಪರಿಸ್ಥಿತಿಯ ಲಾಭ ಪಡೆಯಲು ಮತ್ತು ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಯಾವುದೇ ದೇಶವು ಯತ್ನಿಸದಂತೆ ನಾವು ಖಾತರಿಪಡಿಸಿಕೊಳ್ಳಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಮೋದಿ ಭಾಷಣದ ಮುಖ್ಯಾಂಶಗಳು
- ವೈವಿಧ್ಯತೆಯೇ ಭಾರತದ ಪ್ರಜಾಪ್ರಭುತ್ವದ ಹೆಗ್ಗುರುತು.
- ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಭಾರತವು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 75 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.
- ಅಭಿವೃದ್ಧಿಯು ಎಲ್ಲರನ್ನೂ ಒಳಗೊಂಡಿರಬೇಕು ಮತ್ತು ಸಾರ್ವತ್ರಿಕವಾಗಿ ಎಲ್ಲರನ್ನು ಪೋಷಿಸುವಂತಿರಬೇಕು. ಅಂತ್ಯೋದಯ ತತ್ವವನ್ನು ಗಮನದಲ್ಲಿಟ್ಟುಕೊಂಡು ಭಾರತವು ಇಂದು ಸಮಗ್ರ ಮತ್ತು ಸಮಾನತೆಯ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ.
- ಭಾರತವು ವಿಶ್ವದ ಮೊತ್ತ ಮೊದಲ ಡಿಎನ್ಎ ಆಧಾರಿತ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.
- ಕೋವಿಡ್ ವಿರುದ್ಧ ಮೂಗಿನ ಮೂಲಕ ನೀಡಬಹುದಾದ ಲಸಿಕೆಯೂ ಅಭಿವೃದ್ಧಿ ಹಂತದಲ್ಲಿದೆ.
- ಭಾರತ ಬೆಳವಣಿಗೆಯಾದಾಗ ಜಗತ್ತು ಬೆಳೆಯುತ್ತದೆ. ಭಾರತ ಸುಧಾರಣೆಯಾದಾಗ ಜಗತ್ತೂ ಬದಲಾಗುತ್ತದೆ.
- ಭಾರತವು ಕೋಟ್ಯಂತರ ನಿರಾಶ್ರತರನ್ನು ಮನೆ ಮಾಲೀಕರನ್ನಾಗುವಂತೆ ಮಾಡಿದೆ.
- ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದನೆ ಹರಡಲು ಮತ್ತು ಉಗ್ರ ಚಟುವಟಿಕೆಗಳಿಗೆ ಬಳಸದಂತೆ ಖಾತರಿಪಡಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ.
- ನಮ್ಮ ಸಾಗರಗಳು ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿನ ಜೀವನಾಡಿಯಾಗಿವೆ. ಅವುಗಳನ್ನು ರಕ್ಷಿಸಬೇಕಿದೆ.
- ನಮ್ಮೆಲ್ಲರ ಪ್ರಯತ್ನದಿಂದಾಗಿ ನಾವು ಜಗತ್ತನ್ನು ಪ್ರತಿಯೊಬ್ಬರಿಗೂ ಇನ್ನಷ್ಟು ಉತ್ತಮ ತಾಣವನ್ನಾಗಿ ಮಾಡಬಹುದು.
- ವಿಶ್ವಸಂಸ್ಥೆಯು ಪ್ರಸ್ತುತತೆಯನ್ನು ಉಳಿಸಿಕೊಳ್ಳಬೇಕಾದರೆ, ಅದು ಅದರ ಪರಿಣಾಮಕಾರಿತ್ವವನ್ನು ಸುಧಾರಿಸಬೇಕು, ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕು.