ಪಟ್ಟಣದಲ್ಲಿ ಮೊದಲು ವಿದ್ಯುತ್ ಸಂಪರ್ಕ ಪಡೆದ ದೇವಾಲಯ; ಹೃದಯ ಭಾಗದಲ್ಲಿರುವ ಹನುಮನ ಕುರಿತ ಅಚ್ಚರಿಯ ಸಂಗತಿಗಳು
By GS Bharath Gudibande
ಗುಡಿಬಂಡೆ: ಇಲ್ಲಿನ ಶ್ರೀ ಬಾಲಾಂಜನೇಯ ಸ್ವಾಮಿ ಕಷ್ಟದಲ್ಲಿರುವ ಭಕ್ತಾಧಿಗಳು ಹಾಗೂ ಆಪತ್ತಿನಲ್ಲಿರುವ ಮಕ್ಕಳನ್ನು ಕಾಯುವ ದೈವವಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಬೇಡಿಕೊಂಡರೆ ಎಲ್ಲ ಕಾರ್ಯಗಳು ಸಿದ್ಧಿಸಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಬಾಲಾಂಜನೇಯ ಸ್ವಾಮಿ ದೇಗುಲದಲ್ಲಿ ಪ್ರತೀ ಶನಿವಾರ ವಿಶೇಷ ಪೂಜೆ, ಇತ್ಯಾದಿ ಕೈಂಕರ್ಯಗಳು ನಡೆಯುತ್ತವೆ. ತೆಂಗಿನ ಕಾಯಿ ಇಟ್ಟು ಸಂಕಲ್ಪ ಮಾಡಿಕೊಂಡು ಶ್ರೀ ಬಾಲಾಂಜನೇಯ ಸ್ವಾಮಿಯನ್ನು ಜಪಿಸಿ, ಅಭಿಷೇಕ ಮಾಡಿಸಿದರೆ ಕಾರ್ಯ ಸಿದ್ಧಿಸಿ ಜಯವಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಐತಿಹಾಸಿಕ ದೇವಾಲಯ
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಈ ದೇವಾಲಯ ಸ್ಥಳೀಯರಿಗೆ ಮಾತ್ರವಲ್ಲದೆ, ಇಡೀ ತಾಲೂಕಿನ ಎಲ್ಲ ಜನರ ಶ್ರದ್ಧಾ ಕೇಂದ್ರವಾಗಿದೆ.
ಶತಮಾನಗಳ ಹಿಂದೆ ಗುಡಿಬಂಡೆಯನ್ನು ಆಳಿದ ಪಾಳೇಗಾರರ ಕಾಲದಲ್ಲಿ ಈ ಪ್ರಾಂತ್ಯವು ಸಂಪೂರ್ಣ ಅರಣ್ಯದಿಂದ ಆವರಿಸಿತ್ತು. ಜನರು ಈ ಭಾಗದಲ್ಲಿ ಸಂಚರಿಸಲು ತುಂಬಾ ಭಯಪಡುತ್ತಿದ್ದರಂತೆ. ಕ್ರೂರ ಮೃಗಗಳು ಇದ್ದವಂತೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಳೇಗಾರರು ಅಲ್ಲಿ ವೃತ್ತಾಕಾರಾದ ಜಾಗ, ರಸ್ತೆ ಮಾಡಿ ಶ್ರೀ ಬಾಲಾಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ, ಜನರಿಗೆ ಧೈರ್ಯ ತುಂಬಿದ್ದರಂತೆ. ಆಗಿನಿಂದಲೇ ದೇವರಿಗೆ ವಿಶೇಷ ಪೂಜೆ ನಡೆಯುತ್ತಂತೆ.
ಹೀಗೆ ನೂರಾರು ವರ್ಷಗಳಿಂದ ಗುಡಿಬಂಡೆ ಜನರ ಪಾಲಿನ ಆರಾಧ್ಯ ದೈವವಾಗಿರುವ ಶ್ರೀ ಬಾಲಾಂಜನೇಯ ಸ್ವಾಮಿ, ಭಕ್ತರ ಪಾಲಿಗೆ ಕಾಮಧೇನುವಾಗಿ ಅವರ ಕಷ್ಟಗಳನ್ನು ದೂರ ಮಾಡುತ್ತಾ ಪೊರೆಯುತ್ತಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ.
ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯವು ಬಹಳ ಪ್ರಸಿದ್ದಿಯನ್ನು ಪಡೆದಿದ್ದು ಪಟ್ಟಣಕ್ಕೆ ಬರುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಈ ದೇವಾಲಯದ ಸುತ್ತ ಒಂದು ಪ್ರದಕ್ಷಿಣಿ ಹಾಕಿ ನಂತರ ಬಸ್ ನಿಲ್ದಾಣಕ್ಕೆ ಹೋಗುತ್ತವೆ. ಇದು ಗುಡಿಬಂಡೆ ಪಟ್ಟಣದಲ್ಲಿ ಬಸ್ ಸಂಚಾರ ಆರಂಭವಾದಾಗಿನಿಂದ ನಡೆದುಕೊಂಡು ಬರುತ್ತಿರುವ ಪರಂಪರೆ.
ಇನ್ನೇನು ವಿಶೇಷಗಳಿವೆ?
ಸುಮಾರು 20 ವರ್ಷಗಳ ಹಿಂದೆ ಶ್ರೀರಾಮನವಮಿ ಹಬ್ಬದ ಸಂದರ್ಭದಲ್ಲಿ ಶ್ರೀ ಬಾಲಾಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಸಾವಿರಾರು ಭಕ್ತಾಧಿಗಳಿಗೆ ಟೀವಿ ಪರದೆಯಲ್ಲಿ ಎನ್.ಟಿ.ರಾಮಾರಾವ್ ನಟಿಸಿರುವ ತೆಲುಗಿನ ʼಲವಕುಶʼ ಸಿನಿಮಾವನ್ನು ತೊರಿಸುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ಬರುತ್ತಿದ್ದ ಲಾರಿಗೆ ಬ್ರೇಕ್ ಹಿಡಿಯದೆ ಜೋರಾಗಿ ಬಂದು ದೇವಾಲಯ ಹಾಗೂ ಭಕ್ತಾಧಿಗಳನ್ನು ತಪ್ಪಿಸಿ ಪಕ್ಕದ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಆದರೆ ಯಾರಿಗೂ ಯಾವುದೇ ಪ್ರಾಣಾಪಾಯವಾಗಲಿಲ್ಲ. ಎಲ್ಲರನ್ನೂ ಶ್ರೀ ಬಾಲಾಂಜನೇಯ ಸ್ವಾಮಿ ರಕ್ಷಿಸಿದ್ದಾನೆಂದು ಇಲ್ಲಿನ ಜನರ ನಂಬಿಕೆ.
ಅಂದಿನಿಂದ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿ ಕಷ್ಟಗಳು ದೂರವಾಗುತ್ತವೆ, ಮನೆಯತ್ತ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಚಿಕ್ಕ ಮಕ್ಕಳು ಚಂಡಿ ಹಿಡಿದರೆ ಈ ದೇವಸ್ಥಾನಕ್ಕೆ ಬೇಟಿ ನೀಡಿ ದರ್ಶನ ಪಡೆದುಕೊಳ್ಳುವುದರಿಂದ ಮಕ್ಕಳಲ್ಲಿರುವ ತೊಂದರೆ ಹಾಗೂ ಕಷ್ಟಗಳಿಗೆ ಶ್ರೀ ಬಾಲಾಂಜನೇಯ ಸ್ವಾಮಿಯ ಅಭಯ ಸಿಗುತ್ತದೆ. ಈ ಬಾಲಾಂಜನೇಯನನ್ನು ಪ್ರಾರ್ಥಿಸುವುದರಿಂದ ಮಕ್ಕಳಿಗೆ ದೈರ್ಯ ಬರುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಪ್ರತಿನಿತ್ಯ ಇಲ್ಲಿನ ಜನ ನೂರಾರು ಸಂಖ್ಯೆಯಲ್ಲಿ ಬಂದು ಪೂಜೆ ಮಾಡಿಸುತ್ತಾರೆ.
ವಿಶೇಷ ಪೂಜೆಗಳು
ಶ್ರೀ ಬಾಲಾಂಜನೇಯ ಸ್ವಾಮಿ ಸನ್ನಿಧಾನದಲ್ಲಿ ಪ್ರತೀ ವರ್ಷ ಹನುಮ ಜಯಂತಿ ವಿಜೃಂಭಣೆಯಿಂದ ನಡೆಯುತ್ತದೆ. ಶ್ರೀ ರಾಮನವಮಿ, ಶಿವರಾತ್ರಿ, ಕೊನೆಯ ಕಾರ್ತಿಕ ಸೋಮವಾರದ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪ್ರವಚನ, ಭಜನೆಗಳು ನಡೆಯುತ್ತವೆ. ನೂರಾರು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಇನ್ನು; ಪ್ರತಿದಿನ ಪೂಜೆ, ಪ್ರತೀ ಶನಿವಾರ ವಿಶೇಷ ಪೂಜೆ, ಹುಣ್ಣಿಮೆಯಂದು ವಿಶೇಷ ಪೂಜೆಗಳು ಇರುತ್ತವೆ.
ಉಳಿದಂತೆ ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ. ಭಕ್ತಾಧಿಗಳೇ ದೇವಸ್ಥಾನದ ಅಭಿವೃದ್ದಿಯನ್ನು ಮಾಡಿದ್ದು, ಪಟ್ಟಣದ ಜನರು ಅಗತ್ಯ ಸಂದರ್ಭಗಳಲ್ಲಿ ದೇಗುಲಕ್ಕೆ ಕಾಣಿಕೆಗಳನ್ನು ಸಮರ್ಪಿಸುತ್ತಿದ್ದಾರೆ.
ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುತ್ತಾ ಭಕ್ತರ ಆರಾಧ್ಯದೈವವಾಗಿರುವ ಶ್ರೀ ಬಾಲಾಂಜನೇಯ ಸ್ವಾಮಿ ದರ್ಶನಕ್ಕೆ ಶನಿವಾರ, ಹುಣ್ಣಿಮೆ ಹಾಗೂ ಅಮಾವಾಸ್ಯೆ ದಿನಗಳಲ್ಲಿ ಹೆಚ್ಚು ಭಕ್ತರು ಆಗಮಿಸುತ್ತಾರೆ. ಭಗವಂತನ ದರ್ಶನದಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ ಭಕ್ತರು ಖುಷಿಯಾಗಿದ್ದಾರೆ ಎಂದು ಅರ್ಚಕರು ಹೇಳುತ್ತಾರೆ.
ದೇವಸ್ಥಾನದ ಅರ್ಚಕ ರಾಮಕೃಷ್ಣಪ್ಪ
ಶತಮಾನಗಳ ಹಿಂದೆ ಪಾಳೇಗಾರರ ಸಂದರ್ಭದಲ್ಲಿ ಶ್ರೀ ಬಾಲಾಂಜನೇಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಗುಡಿಬಂಡೆ ವಿದ್ಯುತ್ ಸಂಪರ್ಕ ನೀಡಿದಾಗ ಮೊದಲು ಸಂಪರ್ಕ ನೀಡಿದ್ದೇ ಈ ದೇಗುಲಕ್ಕೆ. ಇಂದಿಗೂ ಸಹ ಸ್ಥಳೀಯ ಮಂಡಲ ಪಂಚಾಯಿತಿಯಿಂದಲೇ ವಿದ್ಯುತ್ ಪಾವತಿ ಮಾಡುತ್ತಾರೆ. ಸಿಂಗಲಾಚಾರ್ ಎಂಬ ತಹಶೀಲ್ದಾರ್ ಒಬ್ಬರ ಅರಿಕೆ ಈಡೇರಿರುವುದರಿಂದ ಅವರು ಶ್ರೀ ಬಾಲಾಂಜನೇಯ ಸ್ವಾಮಿ ದೇವರಿಗೆ ಮುಖವಾಡ ಮಾಡಿಸಿದ್ದಾರೆ. ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿ ದೇವಾಸ್ಥಾನವನ್ನು ಅಭಿವೃದ್ದಿಪಡಿಸಬೇಕು ಎಂಬುದು ನಮ್ಮ ಮನವಿಯಾಗಿದೆ.
ರಾಮಕೃಷ್ಣಪ್ಪ, ದೇವಸ್ಥಾನದ ಅರ್ಚಕ
ನನಗೆ ಶ್ರೀ ಬಾಲಾಂಜನೇಯ ಸ್ವಾಮಿ ದೇವರ ಬಗ್ಗೆ ಅಪಾರ ನಂಬಿಕೆ ಇದೆ. ಇಲ್ಲಿ ನಡೆಯುವ ಭಜನೆಯಲ್ಲಿ 20 ನಿಮಿಷಗಳ ಕಾಲ ಭಾಗಹಿಸುತ್ತಿದ್ದಾಗ ನನಗೆ ತುಂಬಾ ಧೈರ್ಯ ಬಂತು. ನನ್ನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ನಾನೀಗ ಸಂತೋಷದಿಂದ ಇದ್ದೇನೆ.
ಎನ್.ಎಸ್.ಅರುಣ್ ಕುಮಾರ್, ಭಕ್ತ, ಗುಡಿಬಂಡೆ