ವರಿಷ್ಠರ ಟಾಸ್ಕ್ ಗೆದ್ದವರಿಗೆ ಮಾತ್ರ ಟಿಕೆಟ್; ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ರೆಡ್ಡಿ ಹೇಳಿಕೆ
by Ra Na Gopala Reddy Bagepalli
ಬಾಗೇಪಲ್ಲಿ: ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆ ನಂತರ ಬಾಗೇಪಲ್ಲಿ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ರೆಡ್ಡಿ ಹೇಳಿದ್ದಾರೆ.
ಈ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಲಿದ್ದಾರೆಂದು ಅವರು ಹೇಳಿದ್ದು, ಈ ಬಗ್ಗೆ ಉಂಟಾಗಿರುವ ಎಲ್ಲ ಗೊಂದಲಗಳಿಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದರು.
ಉತ್ತಮ ಮಳೆಯಿಂದ ತುಂಬಿರುವ ಚಿತ್ರಾವತಿ ಅಣೆಕಟ್ಟೆಗೆ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕು ಜೆಡಿಎಸ್ ಘಟಕಗಳ ವತಿಯಿಂದ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದರು ಅವರು.
ಪಕ್ಷದ ವರಿಷ್ಠರು ಸಂಭವನೀಯ ಅಭ್ಯರ್ಥಿಗಳಿಗೆ ಒಂದು ಟಾಸ್ಕ್ ನೀಡಿದ್ದಾರೆ. ರಾಜ್ಯಾದ್ಯಾಂತ ಘೋಷಣೆ ಮಾಡಿರುವ ಸಂಭವನೀಯ ಅಭ್ಯರ್ಥಿಗಳ ಸಾಧನೆಯನ್ನು ಪರಿಗಣಿಸಿ ಪಟ್ಟಿಯನ್ನು ಅಂತಿಮ ಮಾಡಲಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಬೆರೆಯುವ ಹಾಗೂ ಸಂಘಟನೆಗೆ ಒತ್ತು ನೀಡುವವರಿಗೆ ಮಾತ್ರ ಪಕ್ಷದ ಟಿಕೆಟ್ ಸಿಗುತ್ತದೆ. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷವನ್ನು ನೆನಪಿಸಿಕೊಳ್ಳುವರಿಗೆ ಜೆಡಿಎಸ್ ಟಿಕೆಟ್ ಸಿಗಲು ಸಾಧ್ಯವಿಲ್ಲ ಎಂದರು ಅವರು.
ಜೆಡಿಎಸ್ ಶಕ್ತಿ ಕೇಂದ್ರ ಬಿಡದಿಯಲ್ಲಿದೆ. ಜನತಾಪರ್ವ ಕಾರ್ಯಕ್ರಮದಲ್ಲಿ ಪಕ್ಷವು ಮಿಷನ್ 123 ಗುರಿಯೊಂದಿಗೆ 100 ದಿನಗಳಲ್ಲಿ ಸಂಭವನೀಯ ಅಭ್ಯರ್ಥಿಗಳು ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾದರೆ ಮಾತ್ರ ಅವರಿಗೆ ಟಿಕೆಟ್ ನೀಡುತ್ತಾರೆ. ಇಲ್ಲದಿದ್ದರೆ ಹೊಸಬರಿಗೆ ಮಣೆ ಹಾಕುತ್ತಾರೆ ಎಂದು ರಾಜಶೇಖರರೆಡ್ಡಿ ತಿಳಿಸಿದರು.
ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಮಹಮ್ಮದ್ ನೂರುಲ್ಲಾ ಮಾತನಾಡಿ; ಹಣ ಕೊಟ್ಟು ಕಾರ್ಯಕರ್ತರನ್ನು ಕರೆ ತರುವವರಿಗೆ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಮನ್ನಣೆ ನೀಡುವುದಿಲ್ಲ. ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವವರಿಗೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲೆ ಪಕ್ಷದ ನೆನಪು ಬರುತ್ತದೆ. ಇಷ್ಟ ಬಂದಾಗ ಪಕ್ಷಕ್ಕೆ ಬರುವವರಿಗೆ ವರಿಷ್ಠರು ಟಿಕೆಟ್ ನೀಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಸೂರ್ಯ ನಾರಾಯಣರೆಡ್ಡಿ, ಉಪಧ್ಯಕ್ಷ ಪಟೇಲ್ ವೆಂಕಟರೆಡ್ಡಿ, ಕಾರ್ಯದರ್ಶಿ ಜಯಪ್ರಕಾಶ್ ರೆಡ್ಡಿ, ಗುಡಿಬಂಡೆ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ, ಉಪಾಧ್ಯಕ್ಷ ವರ್ಲಕೊಂಡ ರವೀಂದ್ರನಾಥ್, ಕುಮಾರಪಡೆ ಜಿಲ್ಲಾಧ್ಯಕ್ಷ ನಾಗರಾಜು, ಮಹಿಳಾ ಘಟಕದ ಉಪಾಧ್ಯಕ್ಷೆ ಶಿಲ್ಪಾ ಗಂಗುಲಪ್ಪ ಮತ್ತಿತರರು ಇದ್ದರು.