ಸಿಎಂ ಭೇಟಿ ಬಿಬಿ ರಸ್ತೆಗೆ ಸೀಮಿತ!; ಮತ್ತೊಮ್ಮೆ ಜಿಲ್ಲೆಗೆ ಅಪಮಾನ ಮಾಡಿದ ಬೊಮ್ಮಾಯಿ!!
ಕಾಟಾಚಾರಕ್ಕೆ ಬಂದುಹೋದ ಕಾಮನ್‌ಮ್ಯಾನ್!
by M Krishnappa Chikkaballapura
ಚಿಕ್ಕಬಳ್ಳಾಪುರ: ಮುಖ್ಯಮಂತ್ರಿಯಾದ ನಂತರ ಜಿಲ್ಲೆಗೆ ಮೊದಲ ಸಲ ಭೇಟಿ ನೀಡಿದ್ದಾಗ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ಭೇಟಿ ಬಂದಿದ್ದ ವೇಳೆ ಪಕ್ಕದಲ್ಲೇ ಇದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಸಮಾಧಿಯತ್ತ ಕಣ್ಣೆತ್ತಿಯೂ ನೋಡದೇ ಬೆಂಗಳೂರು ಕಡೆ ಕಾರು ಹತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮತ್ತೆ ಜಿಲ್ಲೆಗೆ ಕಾಟಾಚಾರದ ಭೇಟಿ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸ್ವತಃ ಎಂಜಿನೀಯರ್ ಆದ ಮುಖ್ಯಮಂತ್ರಿಗಳು ಅಂದು ಮುದ್ದೇನಹಳ್ಳಿಯಲ್ಲಿ ಸರ್ ಎಂವಿ ಅವರ ಸಮಾಧಿಗೆ ಗೌರವ ಸಲ್ಲಿಸದೇ ಜಿಲ್ಲೆಯ ಜನರ ಭಾವನೆಗಳಿಗೆ ಧಕ್ಕೆ ಮಾಡಿದ್ದಂತೆ, ಭಾನುವಾರವು ಅವರು ಮಳೆ, ನೆರೆ ಅನಾಹುತ ವೀಕ್ಷಿಸಲು ಚಿಕ್ಕಬಳ್ಳಾಪುರಕ್ಕೆ ಬಂದ್ದಿರಲ್ಲದೆ ಸ್ವತಃ ತಾವು ಎಂಜಿನಿಯರ್ ಎನ್ನುವುದನ್ನು ಮರೆತು ಕಳಪೆ ಕಾಮಗಾರಿಯೊಂದನ್ನಷ್ಟೇ ವೀಕ್ಷಣೆ ಮಾಡಿ ಹೋದ ಪ್ರಸಂಗ ನಡೆಯಿತು. ಈ ಘಟನೆ ಕೂಡ ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ 45 ದಿನಗಳಿಂದ ಧಾರಾಕಾರ ಮಳೆಯಿಂದ ಅಯೋಮಯ ಸ್ಥಿತಿ ತಲುಪಿದೆ ಚಿಕ್ಕಬಳ್ಳಾಪುರ ಜಿಲ್ಲೆ, ಜನಜೀವನ ಅಸ್ತವ್ಯಸ್ಥವಾಗಿದೆ, ರೈತರು ಸರ್ವಸ್ವ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ರಣಮಳೆಯಿಂದ ಜನರ ಪಾಡು ಹೈರಾಣಾಗಿದ್ದರೂ, ಮುಖ್ಯಮಂತ್ರಿಗಳು ಮಾತ್ರ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲೂಕುಗಳಿಗೆ ಕಾಟಾಚಾರದ ಭೇಟಿ ನೀಡಿ ಪರಿಶೀಲನೆ ಶಾಸ್ತ್ರ ಮುಗಿಸಿದ್ದಾರೆ.
ಕಂದವಾರ ಕೆರೆಯ ಮೂರು ರಾಜಕಾಲುವೆಗಳ ಒತ್ತುವರಿಯಿಂದ ಸಿಂಗಾಪುರ ಆಗಬೇಕಿದ್ದ ಚಿಕ್ಕಬಳ್ಳಾಪುರ ಈಗ ಚರಂಡಿಯಾಗಿದ್ದು, ಈ ಚರಂಡಿ ಸ್ಥಿತಿಯನ್ನೇ ವೀಕ್ಷಣೆ ಮಾಡಲು ಮುಖ್ಯಮಂತ್ರಿಗಳು ಮೀಸಲಿಟ್ಟ ಸಮಯ ಕೇವಲ 20 ನಿಮಿಷ!
ಸಂಜೆ ಸುಮಾರು 5.15ಕ್ಕೆ ಚಿಕ್ಕಬಳ್ಳಾಪುರಕ್ಕೆ ಬಂದ ಮುಖ್ಯಮಂತ್ರಿಗಳು ಸರಿಯಾಗಿ 15ರಿಂದ 20 ನಿಮಿಷ ಅಲ್ಲಿದ್ದರಲ್ಲದೆ, ನಂತರ ಶಿಡ್ಲಘಟ್ಟದ ಕಡೆ ಹೊರಟರು. ಈ ಇಪ್ಪತ್ತು ನಿಮಿಷಗಳಲ್ಲಿ ಮಾಧ್ಯಮಗಳ ಜತೆ ಮಾತನಾಡುವುದಕ್ಕೆ ಹತ್ತು ನಿಮಿಷ, ಸಚಿವರು ಹೇಳಿದ್ದನ್ನು ಕೇಳಲು ಐದು ನಿಮಿಷ, ಜಿಲ್ಲಾಧಿಕಾರಿಗಳು ಮೊದಲೇ ಮಾಡಿಟ್ಟುಕೊಂಡಿದ್ದ ಪೂರ್ವಭಾವಿ ಲೆಕ್ಕ ಆಲಿಸಲು ಐದು ನಿಮಿಷ ಆಯಿತು. ಇನ್ನು ಮಳೆಯಿಂದ ಮನೆಗಳನ್ನು ಕಳೆದುಕೊಂಡ, ಬದುಕು ಬರ್ಬಾದ್ ಮಾಡಿಕೊಂಡ ಹಾಗೂ ಬೆಳೆಗಳನ್ನು ನಷ್ಟ ಮಾಡಿಕೊಂಡು ಬೀದಿಪಾಲಾದ ರೈತರ ಸಂಕಷ್ಟ ಕೇಳಲು ಅವರು ಕೊನೆಯ ಪಕ್ಷ ಒಂದು ನಿಮಿಷವನ್ನೂ ವ್ಯಯ ಮಾಡಲಿಲ್ಲ.
ಮುಖ್ಯಮಂತ್ರಿಗಳು ಚರಂಡಿಯನ್ನು ವೀಕ್ಷಿಸಿ ತಮ್ಮ ಸುತ್ತ ಇದ್ದ ಅಧಿಕಾರಶಾಹಿ, ಬೆಂಬಲಿಗರು, ಮಂತ್ರಿ ಮಹೋದಯರ ಜತೆ ಮಿಂಚಿನಂತೆ ಮಾಯವಾದರು. ಮುಖ್ಯಮಂತ್ರಿಗಳ ಜತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ನೋಡಿದ್ದ ರಾಜಕಾಲುವೆಯನ್ನೇ ಸಿಎಂಗೆ ತೋರಿಸಿದ ಸಚಿವರು!
ಶನಿವಾರ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು; ಬಿಬಿ ರಸ್ತೆಯಲ್ಲಿ ಗಣ್ಯರು, ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಚಿಕ್ಕಬಳ್ಳಾಪುರ ಚರಂಡಿ ಆಗಲು ಕಾರಣರಾಗಿದ್ದ ಅದೇ ಅಪಾಯಕಾರಿ ರಾಜಕಾಲುವೆಯನ್ನು ಹಾಗೂ ತಮ್ಮ ಸಂಬಂಧಿಕರೊಬ್ಬರು ಮಾಡುತ್ತಿರುವ ಕಾಮಗಾರಿಯನ್ನು ಮುಖ್ಯಮಂತ್ರಿಗಳಿಗೆ ದರ್ಶನ ಮಾಡಿಸಿದರು! ಅಲ್ಲಿ ಸಚಿವರು ನೀಡಿದ ಮಾಹಿತಿಯನ್ನಷ್ಟೇ ಸಿಎಂ ಆಲಿಸಿದರು. ರಾಜಕಾಲುವೆಗಳು ಸರಿಯಾದ ನಿರ್ವಹಣೆ ಇಲ್ಲದ ಕಾರಣಕ್ಕೆ ಮಳೆ ನೀರು ಸಿಟಿಗೆ ನುಗ್ಗಿದೆ ಎಂದು ಅವರು ವಿವರಣೆ ನೀಡಿದರು.
ಅದೇ ವೇಳೆ ಮನವಿಗಳನ್ನು ನೀಡಲು ನೂರಾರು ಸಾರ್ವಜನಿಕರು ಸಿಎಂ ಅವರಿಗಾಗಿ ಕಾದು ನಿಂತಿದ್ದರು. ಆದರೆ, ಅವರಾರು ಮುಖ್ಯಮಂತ್ರಿಗಳ ಹತ್ತಿರಕ್ಕೂ ಸುಳಿಯದಂತೆ ಮೊದಲೇ ಎಚ್ಚರಿಕೆ ವಹಿಸಲಾಗಿತ್ತು. ಅಲ್ಲದೆ; ಸಿಎಂ ಭೇಟಿ ನೆಪದಲ್ಲಿ ಮಾಡಲಾಗಿದ್ದ ಭದ್ರತೆ ಕಾರಣವೊಡ್ಡಿ ಮಳೆ ಸಂತ್ರಸ್ತರನ್ನು ಬೊಮ್ಮಾಯಿ ಮುಂದೆ ಹೋಗದಂತೆ ತಡೆಯಲಾಯಿತು.
ಇಷ್ಟನ್ನು ಹೊರತುಪಡಿಸಿದರೆ ಇಡೀ ನಗರ ಕಳೆದ ನಲತ್ತೈದು ದಿನಗಳಿಂದ ಅನುಭವಿಸಿದ ನರಕಯಾತನೆ, ಜಲ ದಿಗ್ಬಂಧನದಿಂದ ತತ್ತರಿಸಿದ ಯಾವುದೇ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ ನೀಡಲಿಲ್ಲ. ಅವರು ವೀಕ್ಷಣೆ ಮಾಡಿದ ರಾಜಕಾಳುವೆಯ ಪಕ್ಕದಲ್ಲೇ ಮಳೆ ನೀರಿನಿಂದ ಮುಳುಗಡೆಯಾಗಿದ್ದ ಕನಿಷ್ಠ ಒಂದು ಮನೆಗಾಗಲಿ ಅಥವಾ ಕೆರೆಗಳಂತಾಗಿದ್ದ ಒಂದು ತೋಟಕ್ಕಾದರೂ ಅವರು ಭೇಟಿ ಕೊಡುವ ಮನಸ್ಸು ಮಾಡಲಿಲ್ಲ.
ಮುಖ್ಯಮಂತ್ರಿಗಳ ವರ್ತನೆಯಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ತಮ್ಮ ಮನವಿಗಳನ್ನಂತು ಸಚಿವರೂ ಕೇಳುವುದಿಲ್ಲ, ಹಾಗೆಯೇ ಮುಖ್ಯಮಂತ್ರಿಯೂ ಆಲಿಸಲಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಸಚಿವರು, ಅಧಿಕಾರಿಗಳು, ಮಾಧ್ಯಮಗಳಷ್ಟೇ ಮುಖ್ಯಮಂತ್ರಿ ಕಣ್ಣೀಗೆ ಬಿದ್ದವೇ ವಿನಾ, ನಮ್ಮ ನೋವು ದುಃಖಗಳು ಬೀಳಲಿಲ್ಲ ಎಂದು ಜನ ಅಲವತ್ತುಕೊಂಡರು. ಕಾಮನ್ ಮ್ಯಾನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಕಾಟಾಚಾರಕ್ಕೆ ಬಂದು ಹೋದರು ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿ ನಾಯಕರೊಬ್ಬರೇ ಸಿಕೆನ್ಯೂಸ್ ನೌ ಮುಂದೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ತಾಲೂಕಿನ ಆನೆಮಡುಗು ಹಾಗೂ ಬಂಧರುಘಟ್ಟಕ್ಕೆ ತೆರಳಿದ ಮುಖ್ಯಮಂತ್ರಿ ಅಲ್ಲಿಯೂ ಕೆಲ ನಿಮಿಷಗಳಷ್ಟೇ ಇದ್ದರು. ಜಿಲ್ಲಾ ಕೇಂದ್ರದಿಂದ ಅಲ್ಲಿಗೆ ತಲುಪುವಷ್ಟೊತ್ತಿಗೆ ನಸು ಕತ್ತಲಾದ್ದರಿಂದ ಸಿಎಂ ಭೇಟಿ ಕೇವಲ ಲೆಕ್ಕಕ್ಕಷ್ಟೇ ಆಗಿ ಅದೊಂದು ಕಾಟಾಚಾರದ ಕಸರತ್ತಾಯಿತು.
ಎರಡು ದಿನಗಳ ಹಿಂದೆ ಚಿತ್ರಾವತಿ ನದಿ ಉಕ್ಕಿದ ಪರಿಣಾಮ ಬಾಗೇಪಲ್ಲಿ ಪಟ್ಟಣ ಜಲಾವೃತವಾಗಿತ್ತು. ಜತೆಗೆ; ಕುಶಾವತಿ ನದಿಯ ನೆರೆಯಿಂದ ಅಮಾನಿಭೈರ ಸಾಗರ ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿದ್ದೂ ಸೇರಿ ನಾಲ್ಕೂ ದಿಕ್ಕುಗಳಿಂದ ಸಂಪರ್ಕ ಕಳೆದುಕೊಂಡಿದ್ದ ಗುಡಿಬಂಡೆಗೂ ಮುಖ್ಯಮಂತ್ರಿ ಭೇಟಿ ನೀಡಲಿಲ್ಲ. ಅವರ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಗುಡಿಬಂಡೆ ಕೆರೆಗೆ ಭೇಟಿ ನೀಡುವುದೂ ಇತ್ತು. ಜತೆಗೆ; ಗೌರಿಬಿದನೂರು, ಚಿಂತಾಮಣಿ ತಾಲೂಕುಗಳಿಗೆ ಭೇಟಿ ನೀಡದಿರುವುದು ಹಾಗೂ ನೆರೆ ವೀಕ್ಷಣೆ ನಂತರ ಜಿಲ್ಲಾ ಕೇಂದ್ರದಲ್ಲಿ ಪರಿಶೀಲನಾ ಸಭೆ ನಡೆಸದಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವಿಧಾನ ಪರಿಷತ್ ಚುನಾವಣೆಗಾಗಿ ಜನಸ್ವರಾಜ್ಯ ಯಾತ್ರೆ ನಡೆಸುತ್ತಿರುವ ಮುಖ್ಯಮಂತ್ರಿ ಮತ್ತು ಸಚಿವರಿಗೆ ಸಂಕಷ್ಟದಲ್ಲಿರುವ ಜನ ಪಾಡು ಕಾಣಿಸುತ್ತಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ.
ರಾಜಕಾಲುವೆ ಒತ್ತುವರಿಯಿಂದ ಬಿಬಿ ರಸ್ತೆಗೆ ಹೊಂದಿಕೊಂಡಿರುವ ಸುಹಾಸ್ ಮೊಟಾರ್ ಶೋ ರೂಂಗೆ ನೀರು ನುಗ್ಗಿದೆ. ಈ ಬಗ್ಗೆ ಶೋ ರೂಂ ಮಾಲೀಕ ನಾರಾಯಣ ರೆಡ್ಡಿ ಅವರು ಮುಖ್ಯಮಂತ್ರಿಗೆ ಮನವಿ ನೀಡಲು ಬಂದರು. ಆದರೆ ಅಬೇಧ್ಯ ಖಾಕಿ ಕೋಟೆ ಅವರನ್ನು ತಡೆಯಿತು. ಈ ಬಗ್ಗೆ ಅವರು ಹೇಳಿದ್ದಿಷ್ಟು;
ಕಂದವಾರ ಕೆರೆ ತುಂಬಿ ರಾಜಕಾಲುವೆ ಇಲ್ಲದ ಕಾರಣ ನಮ್ಮ ಶೋ ರೂಂಗೆ ನೀರು ನುಗಿ ಲಕ್ಷಾಂತರ ರೂ. ಬೆಲೆಯ ಬೈಕ್ʼಗಳಿಗೆ ಹಾನಿಯಾಗಿದೆ. ರಾಜಕಾಲುವೆ ಒತ್ತುವರಿಯಿಂದಾಗಿ ಈ ಪ್ರಮಾಣದ ಹಾನಿ ಸಂಭವಿಸಿದೆ. ಆ ರಾಜಕಾಲುವೆ ಮೆಲೆಯೇ ಪ್ರಭಾವಿಗಳು ಕಟ್ಟಡ ನಿರ್ಮಿಸಿದ್ದು ಈ ಬಗ್ಗೆ ನಗರಸಭೆಗೆ ಸಾಕಷ್ಟು ಸಲ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರಿಗೆ ಮನವಿ ನೀಡಲು ಕುಟುಂಬ ಸಮೇತ ಬಂದೆ. ಆದರೆ, ಅವರನ್ನು ಭೇಟಿಯಾಗಲು ಅಧಿಕಾರಿಗಳು ಬಿಡಲಿಲ್ಲ. ಇನ್ನೂ ಇದೇ ಜಾಗದಲ್ಲಿ ಸುಮಾರು 10-15 ಮನೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ನೆರೆ ಸಂತ್ರಸ್ಥರು ಮನವಿ ಹಿಡಿದು ಬಂದರೂ ಸಚಿವ ಸುಧಾಕರ್ ಮನವಿ ಸ್ವೀಕರಿಸುವುದಿರಲಿ ಕೊನೆಪಕ್ಷ ನಮ್ಮ ಕಷ್ಟವನ್ನೂ ಕೇಳುವ ವ್ಯವದಾನ ತೋರುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡರು.
ಡೀಸಿ ಹೇಳಿದ ಲೆಕ್ಕ ಮಾಧ್ಯಮಗಳಿಗೆ ಒಪ್ಪಿಸಿದ ಸಿಎಂ
ಬಿಬಿ ರಸ್ತೆಯಲ್ಲಿ ಇಪ್ಪತ್ತು ನಿಮಿಷ ಕಳೆದ ಮೇಲೆ ಮಾಧ್ಯಮಗಳ ಜತೆ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು. ಅವರು ಜಿಲ್ಲಾಧಿಕಾರಿ ಆರ್.ಲತಾ ಅವರು ಮಾಡಿಕೊಟ್ಟಿದ್ದ ನಷ್ಟದ ಲೆಕ್ಕವನ್ನು ಒಪ್ಪಿಸಿದರಲ್ಲದೆ, ತಕ್ಷಣಕ್ಕೆ ಒಂದು ನಯಾಪೈಸೆಯನ್ನು ಬಿಡುಗಡೆ ಮಾಡುವ ಮಾತನ್ನಾಡಲಿಲ್ಲ.
ಸಿಎಂ ಅವರು ಹೇಳಿದ್ದಿಷ್ಟು;
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, 1,078 ಮನೆಗಳು ಭಾಗಶಃ ಕುಸಿದಿವೆ. ಪೂರ್ತಿ ಕುಸಿದು ಬಿದ್ದ ಮನೆಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು.
ಕೋಲಾರ, ಚಿಕ್ಕಬಳ್ಳಾಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿಗೆ ಸುರಿದ ವ್ಯಾಪಕ ಮಳೆಯಿಂದಾಗಿ ಬೆಳೆಗಳು, ಮನೆಗಳಿಗೆ ಹಾನಿಗೊಳಗಾಗಿ ಆರ್ಥಿಕ ನಷ್ಟವಾಗಿದೆ. ನಷ್ಟವಾಗಿರುವ ಅಂದಾಜನ್ನು ಸಮೀಕ್ಷೆ ನಡೆಸಿ ಸಂಪೂರ್ಣ ಮತ್ತು ಸಮಗ್ರ ವರದಿ ನೀಡುವಂತೆ ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪ್ರಾಥಮಿಕ ವರದಿ ಲಭ್ಯವಾಗಿದ್ದು, ಒಟ್ಟಾರೆಯಾಗಿ ಆಗಿರುವ ನಷ್ಟದ ಸಮಗ್ರ ಮಾಹಿತಿ ಸಂಗ್ರಹ, ವಿಶ್ಲೇಷಣೆ ಕಾರ್ಯ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ಸ್ಪಷ್ಟತೆ ದೊರೆಯಲಿದೆ.
ನಿಖರ ಮತ್ತು ಸ್ಪಷ್ಟ ವರದಿ ಬಂದ ನಂತರ ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಪರಿಹಾರ ನೀಡಬೇಕೆಂದು ನಿರ್ಧರಿಸಿ, ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಿ ಮಳೆಬಾಧಿತ ಪ್ರದೇಶಗಳ ಜನರಿಗೆ ಸ್ಪಂದಿಸಲಾಗುವುದು. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅಂತಹ ಮನೆಗಳಿಗೆ ಕೂಡಲೇ 10 ಸಾವಿರ ರೂ. ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಪೂರ್ತಿಯಾಗಿ ಕುಸಿದ ಮನೆಗಳಿಗೆ ತಲಾ 5 ಲಕ್ಷ ಮತ್ತು ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರವಾಗಿ ಪರಿಹಾರ ನೀಡಲಾಗುವುದು. ಸ್ವಲ್ಪ ಹಾನಿ ಅಥವಾ ಧಕ್ಕೆಯಾದ ಮನೆಗಳಿಗೆ ಐವತ್ತು ಸಾವಿರ ನೀಡಲು ಅವಕಾಶವಿದೆ.
ಕಂದವಾರ ಕೆರೆಯಿಂದ ಅಮಾನಿ ಗೋಪಾಲಕೃಷ್ಣ ಕೆರೆಯವರೆಗೂ ರಾಜಕಾಲುವೆ ನಿರ್ಮಾಣ ಮಾಡಬೇಕಾಗಿದ್ದು, ಕೂಡಲೇ ಸಮಗ್ರ ಯೋಜನಾ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ವರದಿ ಬಂದ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು.
ರಾಜ್ಯದಲ್ಲಿ ಚುನಾವಣಾ ನೀತಿ ಜಾರಿಯಲ್ಲಿರುವುದರಿಂದ ಅತಿವೃಷ್ಠಿ ಪರಿಹಾರ ಕಾರ್ಯಗಳನ್ನು ವೇಗವಾಗಿ ಮಾಡಲು ತೊಡಕಾಗುತ್ತಿದೆ. ನೀತಿ ಸಂಹಿತೆ ಕಾರಣದಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಒಟ್ಟಿಗೆ ಕೆಲಸ ಮಾಡಲು ಸಮಸ್ಯೆಯಾಗುತ್ತಿದ್ದು, ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ನೀತಿ ಸಂಹಿತೆಗೆ ಕೊಂಚ ರಿಯಾಯಿತಿ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಈಗಾಗಲೇ ಪತ್ರವನ್ನೂ ಬರೆಯಲಾಗಿದೆ.
ಇಂತಿಷ್ಟು ಹೇಳಿ ಮುಖ್ಯಮಂತ್ರಿಗಳು ಕಾರು ಹತ್ತಿ ಹೊರಟರು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ