ಸ್ಥಳೀಯ ಸಂಸ್ಥೆಗಳ ಮತದಾರರಿಗೆ ಬಂಪರ್; ರಾಷ್ಟ್ರೀಯ ಪಕ್ಷ ಒಂದರ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರ ತೋಟದಲ್ಲಿ ಮತ ಖರೀದಿ
ಭಾರತರತ್ನರು ಸರ್.ಎಂ.ವಿಶ್ವೇಶ್ವರಯ್ಯ, ಪ್ರೊ.ಸಿ.ಎನ್.ಆರ್.ರಾವ್ ಜನಿಸಿದ ಜಿಲ್ಲೆಯಲ್ಲಿ ನಾಚಿಕೆಗೇಡಿನ ರಾಜಕೀಯ
ಆಣೆ, ಪ್ರಮಾಣದ ವಿಡಿಯೋ ವೈರಲ್
ಬೆಂಗಳೂರು/ಬಾಗೇಪಲ್ಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹಣದ ಹೊಳೆಯೇ ಹರಿಯುತ್ತಿದ್ದು, ಈ ವಿಷಯದಲ್ಲಿ ಇತರೆ ಪಕ್ಷಗಳಿಗಿಂತ ಆಡಳಿತಾರೂಢ ಬಿಜೆಪಿ ಮುಂದಿದೆ.
ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರದ ನಂದಿ ಸಮೀಪದ ದೇವಾಲಯ ಒಂದರಲ್ಲಿ ವರದಿ ಮಾಡಲು ಬಂದ ಮಾಧ್ಯಮಗಳನ್ನು ಮನಸೋ ಇಚ್ಛೆ ನಿಂದಿಸಿ ಹೊರಗಿಟ್ಟು, ಖಾಕಿ ಸರ್ಪಗಾಲವಲು ನಡುವೆಯೇ ಜಿಲ್ಲೆಯ ʼಅನಭಿಶಕ್ತ ದೊರೆʼಯಾಗಿ ಮೆರೆಯುತ್ತಿರುವ ಮಹಾಶಯರು ಖುದ್ದು ತಾವೇ ಮತದಾರರಿಗೆ ತಿರುಪತಿ ಲಡ್ಡು, ಕೈತುಂಬಾ ದುಡ್ಡನ್ನು ಕೊಟ್ಟು ಕಳಿಸಿದ್ದರು. ಅಲ್ಲದೆ, ದೇವರ ಸನ್ನಿಧಿಯಲ್ಲಿ ದುಡ್ಡು, ಲಡ್ಡು ಪಡೆದವರಿಂದ ಅವರು ಪ್ರಮಾಣ ಮಾಡಿಸಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಅದನ್ನು ಮೀರಿಸುವ ಹಣ ವಿತರಣೆಯ ಜಾತ್ರೆ ಇಂದು ಬಾಗೇಪಲ್ಲಿಯಲ್ಲಿ ನಡೆದಿದೆ.
ಬಾಗೇಪಲ್ಲಿ ಸಮೀಪದ ಪರಗೋಡು ಬಳಿ ಇರುವ ರಾಷ್ಟ್ರೀಯ ಪಕ್ಷ ಒಂದರ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಿಗೆ ಸೇರಿದ ಫಾರಂ ಹೌಸಿನಲ್ಲಿ ಬೆಳಗಿನಿಂದಲೇ ಹಣದ ವಿತರಣೆ ಜಾತ್ರೆ ನಡೆಯುತಲ್ಲದೆ, ಹಣ ಪಡೆದ ಗ್ರಾಮ ಪಂಚಾಯಿತಿ ಸದಸ್ಯರು, ಸದಸ್ಯೆಯರು ಇನ್ನಿತರೆ ಸ್ಥಳೀಯ ಸಂಸ್ಥೆಗಳ ಮತದಾರರಿಂದ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಫೋಟೋ ಮೇಲೆ ಕೈ ಇರಿಸಿ ಪ್ರಮಾಣ ಮಾಡಿಸಲಾಗಿದೆ.
ಸದಸ್ಯರಾಗಿ ಆಯ್ಕೆಯಾದ ವೇಳೆ ನೀಡಿದ್ದ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಮುಖಂಡರು, ಅವರು ಮತದಾರರೆಂದು ಖಾತ್ರಿಪಡಿಸಿಕೊಂಡು ತಲಾ 75 ಸಾವಿರ ರೂಪಾಯಿ, ತಿರುಪತಿ ಲಡ್ಡು ಮಾತ್ರವಲ್ಲದೆ, ಶ್ರೀ ವೆಂಕಟರಮಣಸ್ವಾಮಿ ದೇವರ ಫೋಟೋ ಸಹ ನೀಡಲಾಗಿದೆ. ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಆಣೆ, ಪ್ರಮಾಣ ಮಾಡಿಸಿಕೊಳ್ಳಲಾಗಿದೆ.
ಅಲ್ಲಿಗೆ ಆಗಮಿಸಿದ್ದ ಸದಸ್ಯರಿಗೆ ಬಾಗೇಪಲ್ಲಿ ತಾಲೂಕಿನ ಆ ಪಕ್ಷದ ಅಧ್ಯಕ್ಷರು 75 ಸಾವಿರ ನಗದು,ಪ್ರಸಾದ ಮತ್ತು ದೇವರ ಫೋಟೋ ನೀಡಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಲು ಸದಸ್ಯರಿಂದ ಆಣೆ ಪ್ರಮಾಣ ಮಾಡಿಸುತ್ತಿರುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
ಹೀಗೆ ಪ್ರಮಾಣ ಮಾಡಿಸಿರುವ ವಿಡಿಯೋ ಮತ್ತು ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿರುವ ವೈನಕ್ಕೆ ಜನರು ಆಕ್ರೋಶಭರಿತವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಹಿರಿಯ ಬುದ್ಧಿಜೀವಿ ಒಬ್ಬರು; “ಚಿಕ್ಕಬಳ್ಳಾಪುರ ಎಂದರೆ ಜ್ಞಾನಕ್ಕೆ, ಶ್ರಮಕ್ಕೆ ಹೆಸರುವಾಸಿಯಾದ ಜಿಲ್ಲೆ. ಅವಿಭಜಿತ ಕೋಲಾರ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಆಗಿತ್ತು. ರಾಜ್ಯದ ಇಬ್ಬರು ಭಾರತರತ್ನರಾದ ಸರ್.ಎಂ.ವಿಶ್ವೇಶ್ವರಯ್ಯ, ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ದೇಶಕ್ಕೆ ಕೊಟ್ಟ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಣಕ್ಕೆ ಮತ ಮಾರಿಕೊಳ್ಳುತ್ತಿರುವುದು ಹಾಗೂ ರಾಷ್ಟ್ರಭಕ್ತಿಯ ಗುತ್ತಿಗೆ ಪಡೆದಂತೆ ವರ್ತಿಸುವ ಪಕ್ಷದ ನಾಯಕರು ನಾಚಿಕೆ ಇಲ್ಲದೆ ಮತಗಳನ್ನು ದೇವರ ಹೆಸರಿನಲ್ಲಿ ಖರೀದಿ ಮಾಡುತ್ತಿರುವುದು ದೇಶಕ್ಕೆ ಮಾಡುತ್ತಿರುವ ಅಪಚಾರ” ಎಂದು ಹೇಳಿದ್ದಾರೆ.
ಅಲ್ಲದೆ, ಜನರು ಶ್ರದ್ಧಾಕೇಂದ್ರಗಳೆಂದು ನಂಬಿರುವ ದೇವಾಲಯಗಳನ್ನೇ ಹಣ ವಿತರಣೆಯ ಅಡ್ಡೆಗಳನ್ನಾಗಿ ಮಾಡಿಕೊಂಡಿರುವ ಆ ಪಕ್ಷ ನಾಯಕರು ಕ್ಷಮಾರ್ಹರಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.
ಇನ್ನೊಂದೆಡೆ, ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ ನೇಕಮಗೊಂಡಿರುವ ಅಧಿಕಾರಿಗಳು, ಇತರೆ ಚುನಾವಣೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ತಿರುಪತಿ ಲಡ್ಡು ಜತೆ 75,000 ರೂ. ಹಣವನ್ನು ಮತದಾರರಿಗೆ ನೀಡಲಾಗಿದೆ ಎಂದು ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಮಾಹಿತಿ ಸಿಕ್ಕಿದೆ. ಅಲ್ಲದೆ, ತಿರುಪತಿ ವೆಂಕಟರಮಣ ಸ್ವಾಮಿಯ ಮೇಲೆ ಆಣೆ ಮಾಡಿ, ಇಂಥದ್ದೇ ಸೀರಿಯಲ್ ನಂಬರಿನ ಅಭ್ಯರ್ಥಿಗೇ ಮತ ಹಾಕಬೇಕು ಎಂದು ತಾಕೀತು ಮಾಡಲಾಗಿದೆ.
ಹಣಕ್ಕಾಗಿ ಮತ ಮಾರಿಕೊಳ್ಳಲು ಬಂದಿದ್ದ ಸ್ಥಳೀಯ ಸಂಸ್ಥೆಗಳ ಮತದಾರರು ಜಾತ್ರೆಯೋಪಾದಿಯಲ್ಲಿ ಆ ತೋಟದಲ್ಲಿ ಸೇರಿದ್ದರು. ಮಹಿಳಾ ಮತದಾರರು ತಮ್ಮ ಪತಿರಾಯರ ಜತೆ ಬಂದು ನಗುನಗುತ್ತಲೇ ದುಡ್ಡು, ಲಡ್ಡು ಸ್ವೀಕರಿಸಿ, ಪ್ರಮಾಣ ಮಾಡಿ ಪುನೀತರಾದರು. ಇಷ್ಟೆಲ್ಲ ನಡೆಯುತ್ತಿದ್ದರೂ ತಾಲೂಕು ಪೊಲೀಸರಾಗಲಿ ಅಥವಾ ಚುನಾವಣಾ ವೀಕ್ಷಕರಾಗಲಿ ಅತ್ತ ಸುಳಿಯಲಿಲ್ಲ. ಆದರೆ, ಹಣ, ಪ್ರಮಾಣದ ವಿಡಯೋಗಳು ಭಾರೀ ಪ್ರಮಾಣದಲ್ಲಿ ವೈರಲ್ ಆಗುತ್ತಿವೆ.