ಶುದ್ಧ ಅಂತಃಕರಣದ ಹರಿಸ್ಮರಣೆಯೇ ಸಾಕು ಎಂದ ಮಹಾನುಭಾವರು
by Guruprasad Hawaldar
ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನೆ. ದೇವರಿಗೆ ಗುಡಿಗೋಪುರಗಳು ಬೇಕಿಲ್ಲ, ಮಡಿ- ಮಂತ್ರ, ಶಂಖ- ಜಾಗಟೆಯ ಅಬ್ಬರದ ಪೂಜೆ ಬೇಕಿಲ್ಲ. ಶುದ್ಧ ಅಂತಃಕರಣದ ಹರಿಸ್ಮರಣೆಯೇ ಸಾಕು ಎಂದು ಹೇಳುವ ಮೂಲಕ ಆತ್ಮೋದ್ಧಾರದ ದಾರಿ ತೋರಿದ ಆ ಮಹಾನುಭಾವರನ್ನು ನುಡಿನಮನದ ಮೂಲಕ ನೆನೆಯುವ ಪ್ರಯತ್ನ ಇದು.
ಕರ್ನಾಟಕ ಸಂಗೀತ ಪಿತಾಮಹ, ದಾಸ ಪರಂಪರೆಯ ಪ್ರಮುಖರಾದ ಪುರಂದರದಾಸರು ಭಾರತದ ಭಕ್ತಿಪಂಥದಲ್ಲಿ ಒಂದು ಇತಿಹಾಸವನ್ನು ನಿರ್ಮಾಣ ಮಾಡಿದವರು.
ಕೊಪ್ಪರಿಗೆ ಹಣ, ಉಪ್ಪರಿಗೆ ಮನೆಯ ನವಕೋಟಿ ನಾರಾಯಣರಾಗಿದ್ದ ಶ್ರೀನಿವಾಸ ನಾಯಕರು ಪುರಂದರದಾಸರಾದದ್ದು ಒಂದು ಆಕಸ್ಮಿಕ ತಿರುವು.
ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ಜನ್ಮ ಸ್ಥಳ ಪುರಂದರಗಡ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ.
ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ.
ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು ತೋರುತ್ತದೆ.
ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ.
ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ.
ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ.
ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ.
ಭಗವಂತನಿಂದ ಭಕ್ತನ ಪರೀಕ್ಷೆ, ಮುಕ್ತಿ ಇಲ್ಲಿ ನೆಪ ಮಾತ್ರ. ಶ್ರೀನಿವಾಸ ನಾಯಕರು ತಮ್ಮ ಎಲ್ಲ ಆಸ್ತಿ ಪಾಸ್ತಿ, ಆಸೆ, ಆಕಾಂಕ್ಷೆಗಳ ಮೇಲೆ ತುಳಸೀದಳವಿಟ್ಟು ಕೃಷ್ಣಾರ್ಪಣ ಎಂದರು. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ ಪುರಂದರದಾಸ ಎಂಬ ಹೆಸರನ್ನು ಪಡೆದರು.
ದಾಸದೀಕ್ಷೆ ಹಿಡಿದರು. ಕೊರಳಲ್ಲಿ ತುಳಸಿಮಾಲೆ, ಹಣೆಗೆ ಗೋಪಿಚಂದನದ ನಾಮ ಇಟ್ಟರು. ತಾಳ ತಂಬೂರಿ ಹಿಡಿದರು. ಲಜ್ಜೆ ಬಿಟ್ಟು ಗೆಜ್ಜೆ ಕಟ್ಟಿ ಊರಲೆಲ್ಲಾ ಹಾಡುತ್ತ ಸತ್ಯವನ್ನು ಹೇಳುತ್ತಾ ಜೋಳಿಗೆ ಹಿಡಿದು ಭಾಗ್ಯ ಪಡೆದ ಮಹಾಮಹಿಮರು.
ಮಧುಕರ ವೃತ್ತಿಯ ಕೈಂಕರ್ಯದಲ್ಲಿ ದಾಸರು ದೇಶವನ್ನು ಸುತ್ತಿ ಈಶನನ್ನು ಕೊಂಡಾಡುತ್ತಾ ಕೆಡುಕನ್ನು ಕಂಡಾಗ ಖಂಡಿಸುತ್ತಾ ಒಳಿತನ್ನು ಕಂಡು ಹೊಗಳಿದರು. ಮನದ ಕಿಲುಬು ತೊಳೆಯುತ್ತಾ ಜೀವನ ಮೌಲ್ಯವನ್ನು ಕಟ್ಟಿಕೊಟ್ಟಂತಹ ದಾಸ ಶ್ರೇಷ್ಠರು
ದಾಸರು ಭಕ್ತಿಯನ್ನು ಬಿತ್ತಿ ಬೆಳೆದರು. ಭಕ್ತಿಯ ಬೀಜ ಮೊಳಕೆಯೊಡೆದು ಗಿಡವಾಗಿ ಬೆಳೆಯುವುದು ದಿನಮಾತ್ರದಲ್ಲಿ ಆಗುವಂತಹದಲ್ಲ, ಅದಕ್ಕೆ ಸಾಕಷ್ಟು ಶ್ರದ್ಧೆ, ಸಾಧನೆ ಬೇಕು, ಸಾಧಕನೊಬ್ಬನ ಮೊದಲ ಹಂತದ ತಲ್ಲಣ ತಳಮಳಗಳು ಪುರಂದರದಾಸರನ್ನು ಕಾಡಿವೆ.
ಬಹಳ ವರ್ಷಗಳ ಲೌಕಿಕ ಬದುಕಿನ ಮೋಹದಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಈ ಹಂತವನ್ನು ದಾಟುವಲ್ಲಿ ಪುರಂದರದಾಸರು ದೇವ-ಭಕ್ತ ಎನ್ನುವ ನಿಲುವಿನಲ್ಲಿ ತನ್ನ ಅಹಂನ್ನು ಕರಗಿಸಿಕೊಂಡು ದಾಸನ ಮಾಡಿಕೊ ಎನ್ನ ಎಂದು ಆರಾಧ್ಯದೈವದಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
ಹರಿದಾಸ ಸಾಹಿತ್ಯದ ಮುಖ್ಯ ತಿರುಳು ಭಕ್ತಿ – ಮೂಲಸತ್ಯ ಭಗವಂತ ಆಗಿದ್ದಾನೆ. ಈ ಸತ್ಯದ ಹುಡುಕಾಟ ಭಕ್ತಿಯ ಮಾರ್ಗದಲ್ಲಿ ಸಾಗಿದ ಮಾತ್ರ ಸಿಗುವುದು. ಕೃಷ್ಣ ದಾಸರಿಗೆ ಒಡೆಯನಾಗಿ-ಒಡನಾಡಿಯಾಗಿ- ಇನಿಯನಾಗಿ- ತನಯನಾಗಿ- ಕಂಡಿದ್ದಾನೆ- ಕಾಡಿದ್ದಾನೆ. ಭಕ್ತಿಯ ಪಂಚವಿಧ ಭಾವಗಳಲ್ಲಿ ಹರಿಯನ್ನು ಕಾಡುವ, ಬೇಡುವ, ಛೇಡಿಸುವ, ಸವಾಲು ಎಸೆಯುವ ಅಭಿವ್ಯಕ್ತಿಯ ಪರಿ ಅನನ್ಯ, ಅಸಾಧಾರಣವಾಗಿದೆ.
ತಾಯಿ-ಮಗುವಿನ ನಿರ್ಮಲ ಪ್ರೀತಿಯ ಪ್ರತೀಕ ವಾತ್ಸಲ್ಯ ಭಾವ. ದಾಸರು ತಾವು ತಾಯಿಯಾಗಿ, ದೇವರನ್ನು ಮಗುವಾಗಿ ಭಾವಿಸಿ ವಾತ್ಸಲ್ಯ ಭಾವದಲ್ಲಿ ಎದೆತುಂಬಿ ಹಾಡಿದ್ದಾರೆ. ಒಂದು ಮಗುವಿನ ಎಲ್ಲ ತುಂಟಾಟ, ಹುಡುಗಾಟವನ್ನು ಬಾಲಕೃಷ್ಣನಿಗೆ ಆರೋಪಿಸಿ ತಾಯಿ-ಮಗುವಿನ ವಾತ್ಸಲ್ಯ ಪ್ರಪಂಚವನ್ನು ಕಟ್ಟಿದ್ದಾರೆ. ಬಾಲಕೃಷ್ಣನ ಆಟಪಾಟ ಕಂಡು ಆನಂದಗೊಂಡಿದ್ದಾರೆ. ವಿವಿಧ ಆಭರಣಗಳನ್ನು ತೊಡಿಸಿ ಅಂದ ಚೆಂದವ ಕಣ್ತುಂಬಿಕೊಂಡಿದ್ದಾರೆ ನಮ್ಮ ಪುರಂದರ ದಾಸರು.
ಮಗು ಕಣ್ಣಮುಂದೆ ಕಾಣದಿದ್ದಾಗ ಆತಂಕಗೊಂಡಿದ್ದಾರೆ. ಹಸಿದಾಗ ಕೈತುತ್ತು ಇಕ್ಕಿದ್ದಾರೆ, ಉಣ್ಣದಾಗ ಗೋಪಿಯರ ಕಣ್ಣದೃಷ್ಟಿ ತಾಗಿತೆಂದು, ಹಟಮಾಡಿದಾಗ ಗುಮ್ಮನನ್ನು ಕರೆದು ಬೆದರಿಸಿದ್ದಾರೆ. ನಕ್ಕಾಗ, ಅತ್ತಾಗ ಬಿಗಿದಪ್ಪಿ ಮುದ್ದು ಮಾಡಿದ್ದಾರೆ. ನಿದ್ದೆ ಬಂದಾಗ ತೊಟ್ಟಿಲೊಳಗಿಟ್ಟು ಲಾಲಿ ಹಾಡಿದ್ದಾರೆ. ಎದ್ದಾಗ ತುಂಟ ಕೃಷ್ಣನೊಂದಿಗೆ ಆಟ ಆಡಿದ್ದಾರೆ.
ಬಾಲಕೃಷ್ಣನನ್ನು ಆಡಿಸುತ್ತ, ಸಂಭ್ರಮಿಸುವ ಯಶೋಧೆ ತನ್ನ ಕೃಷ್ಣ ಕ್ಷಣಕಾಲ ಕಣ್ಣು ತಪ್ಪಿದರೂ ಗಾಬರಿಗೊಂಡಿದ್ದಾಳೆ. ಕಾತರ ಕಳವಳದಿಂದ ಕೇರಿಯ ಮನೆ ಮನೆಗಳಲ್ಲಿ ಕೃಷ್ಣನನ್ನು ಹುಡುಕಾಡುತ್ತಾಳೆ. ಕೇರಿಯಲ್ಲಿ ಹುಡುಕಿ ಹುಡುಕಿ ಸುಸ್ತಾದಾಗ ಮನೆಗೆ ಬಂದ ಮಗುವನ್ನು ಸಂತೋಷದಿಂದ ಬಂದೆಯಾ, ಬಾರೊ ಎಂದಪ್ಪಿಕೊಂಡು ಮುದ್ದಿನ ಮಳೆಗರೆಯುತ್ತಾಳೆ. ಪೆÇೀಗದಿರೆಲೊ ರಂಗ, ಬಾಗಿಲಿಂದಾಚೆಗೆ, ಕಣ್ಣ ಮುಂದಿರೋ ಕೃಷ್ಣಾ ಎಂದು ತಾಯ್ತನದ ಪ್ರೀತಿಯಿಂದ ಒತ್ತಾಯಿಸುತ್ತಾಳೆ.
ಭಗವಂತನನ್ನು ಇನಿಯನೆಂದು ಭಾವಿಸಿದ ದಾಸರು ಗೋಪಿಯಾಗಿ ಅವನ ಬರುವಿಕೆಗಾಗಿ ಕಾದಿದ್ದಾರೆ. ಹಾಡಿ ಹಂಬಲಿಸಿದ್ದಾರೆ. ಸರ್ವಸಮರ್ಪಣ ಭಾವದಿಂದ ಅವನನ್ನು ಪತಿಯೆಂದು ಆರಾಧಿಸಿದ್ದಾರೆ.
ಭಕ್ತಿಯ ಭಾವಾಂತರಂಗದಲ್ಲಿ ಮುಳುಗಿದ ಪುರಂದರ ದಾಸರ ಕನಸು ಮನಸಿನ ತುಂಬೆಲ್ಲ ತುಂಬಿರುವ ಚೆಲುವ ಚೆನ್ನಿಗ ಶ್ರೀಕೃಷ್ಣ. ಪುರಂದರದಾಸರು ಕನಸಿನಲ್ಲಿ ಕಂಡ ಆ ಸಾಕಾರಮೂರ್ತಿಯ ಚೆಲುವಾದರೂ ಎಂತಹದು! ಅಂದುಗೆ ಕಿರುಗೆಜ್ಜೆ ಕೈಯಲ್ಲಿ ಕೊಳಲು, ಕೊರಳಲಿ ತೊಟ್ಟ ತುಳಸೀಮಾಲೆ, ಹಣೆಯಲಿ ಇಟ್ಟ ದ್ವಾದಶನಾಮ, ಉಟ್ಟ ಪೀತಾಂಬರ, ಉಡಿಯ ಕಾಂಚನದಾಮ, ಕಿರುಬೆರಳಿನ ಮುದ್ರೆಯುಂಗುರ, ಹೇಮಕಂಕಣದ ಶೃಂಗಾರಮೂರುತಿಯ ದರ್ಶನ ದಾಸರ ಅಂತರಂಗದ ಕಣ್ಣಿಗೆ ಕಟ್ಟಿದೆ. ಕೃಷ್ಣ ಈ ಬಿಂಕ ಬಿನ್ನಾಣ, ಸೊಬಗು ಸೆಳವುಗಳಲ್ಲಿ ಸಾಲಂಕೃತಗೊಂಡಿದ್ದಾನೆ? ದಾಸರ ಹೃದಯಮಂದಿರದಲ್ಲಿ.
ಹೀಗೆ ಕಣ್ಣು ಮುಚ್ಚಿದರೆ ಕೃಷ್ಣನ ದಿವ್ಯ ರೂಪ, ಕಣ್ಣು ಬಿಟ್ಟರೆ ಕೃಷ್ಣನ ಭವ್ಯರೂಪ, ಕನಸು ಮನಸಿನ ತುಂಬೆಲ್ಲ ತುಂಬಿದ ಕೃಷ್ಣ ಪುರಂದರರಾಸರಿಗೆ ಜಗದಗಲ, ಎಲ್ಲೆಲ್ಲೂ ಅವನದೇ ಬಿಂಬರೂಪ. ಎಲ್ಲೆಲ್ಲೊ ತುಂಬಿ ನಿಂತ ಹರಿಯನ್ನು ಕಂಡು ದಾಸರು ಹಿರಿಹಿರಿ ಹಿಗ್ಗಿದ್ದಾರೆ. ಸಾಕ್ಷಾತ್ಕಾರಗೊಂಡ ಕೃಷ್ಣನನ್ನು ಕಂಡಾಗ ಒಂದು ದೊಡ್ಡ ಸತ್ಯದ ಬೆಳಕಿನ ಅನುಭವವಾಗುತ್ತದೆ, ಪುರಂದರದಾಸರಿಗೆ.
ಹೀಗೆ ದೊರಕಿದ ಸತ್ಯದಲ್ಲಿ ಸಖ್ಯ ಪರಸ್ಪರ ಅಗಲದಂತೆ ನನಗೂ ಆಣೆ ರಂಗ ನಿನಗೂ ಆಣೆ ಎಂದು ತಮ್ಮಿಬ್ಬರಿಗೂ ಆಣೆಯಿಟ್ಟು ಕಟ್ಟಿ ಹಾಕುತ್ತಾರೆ ದಾಸರು. ತಮ್ಮ ಭಾಗ್ಯವಿಶೇಷದ ಆತ್ಮವಿಶ್ವಾಸದಲ್ಲಿ ಭಕ್ತನ ಇಂತಹ ಭಾಗ್ಯ ನಿನಗೆಲ್ಲಿಯದು ಎಂದು ಭಗವಂತನಿಗೆ ಸವಾಲು ಹಾಕುತ್ತಾರೆ.
ಪುರಂದರದಾಸರು ಈ ಬಗೆಯ ಆತ್ಮೋದ್ಧಾರವನ್ನಷ್ಟೇ ಅಪೇಕ್ಷಿಸಲಿಲ್ಲ. ಜಗದುದ್ಧಾರವನ್ನು ಬಯಸಿದರು. ಅಂತರಂಗದ ಅನ್ವೇಷಣೆಯ ಜತೆಗೆ ಬಹಿರಂಗದ ಪರಿವೀಕ್ಷಣೆಯನ್ನೂ ನಡೆಸಿದರು. ಪುರಂದರದಾಸರ ಬಹುದೊಡ್ಡ ಸಾಧನೆ ಸಂಗೀತ ಮಾಧ್ಯಮದಲ್ಲಿ ಸರಳ ಭಾಷೆಯಲ್ಲಿ, ಸುಲಭ ಭಕ್ತಿಯಲ್ಲಿ ದೇವರನ್ನು ಜನರಲ್ಲಿಗೆ ತಂದುದು. ದಾಸರದು ಸಾಕಾರ ಭಕ್ತಿಯಾದರೂ ಸ್ಥಾವರ ಭಕ್ತಿಯಲ್ಲ. ಅವರ ಬಿಂಬೋಪಾಸನೆಯ ನೆಲೆ ಜಂಗಮಭಕ್ತಿ ಸ್ವರೂಪದ್ದು.
ಹಾಗಾಗಿಯೇ ದಾಸರು ದೇವರಿಗೆ ಭವ್ಯ ಗುಡಿಗೋಪುರಗಳು ಬೇಕಿಲ್ಲ, ಒದ್ದೆ ಬಟ್ಟೆ ಉಟ್ಟು ತಾಸುಗಟ್ಟಲೆ ಮಂತ್ರಘೋಷ ಮಾಡಬೇಕಾಗಿಲ್ಲ. ಶಂಖ ಜಾಗಟೆಯ ಅಬ್ಬರದ ಪೂಜೆ ಬೇಕಾಗಿಲ್ಲ. ದೇವರನ್ನು ಅರಸಿ ದೇವಾಲಯಕ್ಕೆ ಹೋಗಬೇಕಾಗಿಲ್ಲ. ಗಾತ್ರವೇ ಮಂದಿರ, ಹೃದಯವೇ ಮಂಟಪ, ನೇತ್ರವೇ ಮಹಾದೀಪ. ಹಸ್ತ ಚಾಮರವು ಎಂಬಲ್ಲಿ ಈ ದೇಹವನ್ನೇ ದೇವಾಲಯವಾಗಿಸಿದರು.
ನಿರ್ಮಲ ಅಂತಃಕರಣದಿಂದ ಹರಿಸ್ಮರಣೆ ಮಾಡಿದರೆ ಸಾಕು ದೈವ ಸಾಕ್ಷಾತ್ಕಾರಕ್ಕೆ ಎಂಬ ಸುಲಭ ಪೂಜೆಯ ದಾರಿ ತೋರಿದರು.
ಮಾನವ ಬದುಕಿನ ಒಳಿತಿನ ತುಡಿತದಲ್ಲಿ ಹರಿದಾಸರು ಹೊಸ ಸಮಾಜವನ್ನು ಕಟ್ಟಬಯಸಿದರು. ಹಾಗೆಂದೇ ಆಧ್ಯಾತ್ಮದ ಸ್ವೀಕರಣದಲ್ಲಿ ಲೌಕಿಕದ ನಿರಾಕರಣ ಮಾಡಿಲ್ಲ ದಾಸರು. ಪುರಂದರದಾಸರು ಈ ಶರೀರ ಸಾಧನ ಶರೀರ. ಮಾನವಜನ್ಮ ದೊಡ್ಡದು ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದರು.
ಆದರೆ ಈ ಭವಶರೀರವೇ ಶಾಶ್ವತವೆಂದು ಲೌಕಿಕ ಭೋಗಭಾಗ್ಯ. ಅಧಿಕಾರ ಅಂತಸ್ತುಗಳೇ ಪರಮಸುಖವೆಂದೂ ನಿತ್ಯ ಸತ್ಯವೆಂದೂ ಬಗೆದು ಹಿರಿಹಿರಿ ಹಿಗ್ಗುತ್ತಾ ಸೊಕ್ಕುವ ಮನುಜರನ್ನು ದಾಸರು ಕರೆದು ಇದರ ನಶ್ವರತೆಯನ್ನು ತಿಳಿ ಹೇಳಿ ಎಚ್ಚರಿಸಿದರು.
ಈ ಭವಲೋಕದಲ್ಲಿ ಈಸಬೇಕು, ಇದ್ದು ಜೈಸಬೇಕು ಎಂದು ಸಾರಿದರು ಪುರಂದರದಾಸರು.
ಕುಲದ ಪಾವಿತ್ರ್ಯವನ್ನು ದಾಸರು ಪ್ರಶ್ನಿಸಿದರು. ಹೊಲೆಯನನ್ನು ಪುರಂದರದಾಸರು ಹೊಸದಾಗಿ ನಿರ್ವಚಿಸಿದರು. ಹೊಲೆಯ ಹೊರಗಿಹನೇ, ಊರೊಳಗಿಲ್ಲವೇ ಎಂಬ ಪ್ರಶ್ನೆಯಿಂದ ಹೊರಡುವ ಪುರಂದರದಾಸರು. ಹೊಲೆಯ ನಮ್ಮೊಳಗೇ ಇದ್ದಾನೆ ಎಂದು ಸ್ಪಷ್ಟಪಡಿಸಿದರು. ಶೀಲವನು ಕೈಗೊಂಡು ನಡೆಸದಾತನು ಹೊಲೆಯ, ಕೊಂಡ ಸಾಲವನು ತಿದ್ದದಾತನೇ ಹೊಲೆಯ, ಉಂಡ ಮನೆಗೆರಡು ಬಗೆವಾತ ಹೊಲೆಯ? ಎಂದರು.
ದೇವರು ಎಲ್ಲರೊಳಗೂ ಇದ್ದಾನೆ. ನಮ್ಮೊಳಗಿನ ದೇವರನ್ನು ಕಾಣಲು ಕಾಯೇನ ವಾಚಾ ಮನಸಾ ತ್ರಿಕರಣಶುದ್ಧಿ ಬೇಕು. ಕಾಯಶುದ್ಧಿಯೆಂದರೆ ಮೂರು ಹೊತ್ತು ನೀರಲ್ಲಿ ಮುಳುಗುವುದಲ್ಲ. ಹಾಗೆ ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ, ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ ಎಂದು ದಾಸರು ವ್ಯಂಗ್ಯವಾಡಿದ್ದಾರೆ.
ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟರೆ ಅದು ಮಡಿಯಲ್ಲ ಒಳಗಿನ ಕಾಮಕ್ರೋಧಗಳನ್ನು ಬಿಡುವುದು ಮಡಿಯು, ಅಹಂಕಾರ, ಮದಗಳನ್ನು ಮೀರುವುದು ಮಡಿಯು ಎಂದು ಮಡಿಯ ಮರುವ್ಯಾಖ್ಯಾನ ಮಾಡಿದ್ದಾರೆ.
ಕಪಟಿಗಳದು ಉದರ ವೈರಾಗ್ಯವೆಂದು ದಾಸರು ಟೀಕಿಸಿದ್ದಾರೆ. ಜಗದೊಳಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು, ಕಾಮ ಕ್ರೋಧ ಮನದೊಳಿಟ್ಟು ಕಂಡು ದಾಸರಿಗೆ ನಗೆಯು ಬರುತಿದೆ. ಮಾನವ ಮಾನವನಾಗಿ ಬದುಕಬೇಕಾದ ಬರೆಯನ್ನು ದಾಸರು ತೆರೆದಿಟ್ಟರು. ಇವತ್ತು ನಾವು ಬಂಗಲೆ ಇದ್ದರೆ ಭಾಗ್ಯ, ಕಾರು ಇದ್ದರೆ ಭಾಗ್ಯ, ಅಧಿಕಾರದ ಪೀಠ ಇದ್ದರೆ ಭಾಗ್ಯ ಎನ್ನುತ್ತೇವೆ. ದಾಸರು ಹೇಳುತ್ತಾರೆ ಇದಲ್ಲ ಭಾಗ್ಯ. ಹಾಗಾದರೆ ಯಾವುದು ಭಾಗ್ಯ ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಲ್ಲ ಪದುಮನಾಭನ ಪಾದ ಭಜನೆ ಸುಖವಲ್ಲ ಎನ್ನುತ್ತಾರೆ. ಲೌಕಿಕ ಭೋಗಭಾಗ್ಯಗಳೆಲ್ಲ ಲೊಳಲೊಟ್ಟೆಯೆಂದು ಸಾರಿದರು.
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ಬಲ್ಲಿದ ನೀನೆಂದು ಬಡವರ ಬಡಿಯದಿರೆಚ್ಚರಿಗೆ, ರೊಕ್ಕ ಎರಡಕ್ಕೂ ದುಃಖ, ದುಗ್ಗಾಣಿಯೆಂಬುದು ದುರ್ಜನ ಸಂಗ, ಮನು ಶೋಧಿಸಬೇಕು ನಿಚ್ಚ, ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕು, ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ, ನಿಂದಕರಿರಬೇಕು ಹಂದಿ ಇದ್ದಾಂಗ ಎನ್ನುವಲ್ಲಿ ದಾಸರು ನೀಡುವ ತಿಳಿವಳಿಕೆ ನಮ್ಮ ಬದುಕಿನ ಧರ್ಮವಾಗಬೇಕು ಎಂದಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ ಪ್ರಹ್ಲಾದ ಭಕ್ತಿ ವಿಜಯಮ್ ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ.
ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ ದಾಸರೆಂದರೆ ಪುರಂದರದಾಸರಯ್ಯಾ..! ಎಂದು ಕೊಂಡಾಡಿದ್ದಾರೆ.
ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಶ್ರೀ ಪುರಂದರದಾಸರು 5 ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು 4,75,000 ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ 25,000 ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ.
ನಮ್ಮ ಭಾರತೀಯ ಸಾಂಸ್ಕೃತಿಕ ಬಹುದೊಡ್ಡ ದರ್ಶನವೇ ಅಸತ್ಯಕ್ಕೆ ಸತ್ಯದ, ಅಧರ್ಮಕ್ಕೆ ಧರ್ಮದ, ಅನ್ಯಾಯಕ್ಕೆ ನ್ಯಾಯದ, ಹಿಂಸೆಗೆ ಅಹಿಂಸೆಯ ಮುಖಾಮುಖೀಯಲ್ಲಿ. ನಾವಿಂದು ಯಾಂತ್ರಿಕತೆಯ ಅಂಗಳದಲ್ಲಿ ನಿಂತು ಅಂಗೈಯಲ್ಲಿ ಜಗತ್ತಿನ ಅರಮನೆ ಕಟ್ಟಿದ್ದೇವೆ. ಅದೇ ಹೊತ್ತಿಗೆ ಮಾನವಧರ್ಮ, ಮೌಲ್ಯವನ್ನು ಕಳೆದುಕೊಂಡಿದ್ದೇವೆ.
ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ, ತಂದೊಡ್ಡುವ ಬಗೆ ಬಗೆ ಆತಂಕಗಳು, ತಲ್ಲಣಗಳು ಮತ್ತು ಮನುಷ್ಯತ್ವದ ನಾಶಕ್ಕೆ ಮುಖಾಮುಖಿಯಾಗುವಂತಹದ್ದು ನಮ್ಮ ದಾಸರೇಣ್ಯರು ಬರೆದಂತಹ ದಾಸಸಾಹಿತ್ಯ ಮಾಧ್ಯಮವಾಗಬಲ್ಲದು.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.