ನವೀನ್ ಪೋಷಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ; ಸರಕಾರಕ್ಕೆ ಡಿಕೆಶಿ ತರಾಟೆ; ವಿದ್ಯಾರ್ಥಿ ಮೇಲೆ ದಾಳಿಗೆ ಹೆಚ್‌ಡಿಕೆ ಕಳವಳ
ಕಿವ್: ರಷ್ಯಾ – ಉಕ್ರೇನ್ ಮೇಲೆ ರಷ್ಯಾ ನಡೆದ ದಾಳಿಯಲ್ಲಿ ಹಾವೇರಿಯ ಜಿಲ್ಲೆಯ ಚಳಗೇರಿಯ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದಾರೆ.
ಉಕ್ರೇನ್ ನ ಖಾರ್ಖೀವ್ ನಲ್ಲಿ ಇಂದು ಬೆಳಗ್ಗೆ ಭಾರತೀಯ ಕಾಲಮಾನ ಬೆಳಗ್ಗೆ ಏಳೂವರೆ ಗಂಟೆ ಸುಮಾರಿಗೆ ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾರೆ. ನವೀನ್ ಅವರು ನಾಲ್ಕನೆ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು.
ಅವರು ಆಹಾರ ಪದಾರ್ಥ ತರಲು ಸೂಪರ್ ಮಾರ್ಕೆಟ್ ಗೆ ಹೋಗಿದ್ದಾಗ ಶೆಲ್ ದಾಳಿ ನಡೆದಿದ್ದು ಅಲ್ಲೇ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ನವೀನ್ ನಿಧನದ ಸುದ್ದಿ ತಿಳಿದು ಪೋಷಕರ ದುಃಖದ ಕಟ್ಟೆ ಒಡೆದಿದೆ. ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನವೀನ್ ಅವರ ಪೋಷಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರಲ್ಲದೆ, ಆದಷ್ಟು ಬೇಗ ಪುತ್ರನ ಪಾರ್ಥೀವ ಶರೀರವನ್ನು ತರಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿ ಅವರಿಗೂ ಮುನ್ನ ನವೀನ್ ತಂದೆ ಶೇಖರಗೌಡ ಅವರಿಗೆ ಪೋಷಕರಿಗೆ ಕರೆ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದರು.
“ಇದು ನಿಜಕ್ಕೂ ದೊಡ್ಡ ದುರಂತ. ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನೀವು ಧೈರ್ಯದಿಂದಿರಿ. ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ”
ಮಗನ ಬಗ್ಗೆ ದುಃಖದಿಂದ ಮಾತನಾಡಿದ ಶೇಖರಗೌಡ ಗ್ಯಾನ ಗೌಡರ್ ಇಂದು ಮುಂಜಾನೆ ತಮ್ಮ ಮಗ ದೂರವಾಣಿ ಕರೆ ಮಾಡಿದ್ದ ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದು ವಿವರಿಸಿದರು.
ಕಾಂಗ್ರೆಸ್ ತರಾಟೆ
ಆದರೆ ರಾಜ್ಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಈ ಬಗ್ಗೆ ಕೇಂದ್ರದ ಮೇಲೆ ಟೀಕಾ ಪ್ರಹಾರ ನಡೆಸಿದೆ. “ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮ್ಮ ವಿದ್ಯಾರ್ಥಿಗಳ ರಕ್ಷಣೆ ವಿಚಾರದಲ್ಲಿ ವಿಫಲವಾಗಿವೆ. ಇನ್ನಾದರೂ ತುರ್ತು ಕ್ರಮ ಕೈಗೊಂಡು ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆಸಿಕೊಳ್ಳಬೇಕು. ಪ್ರಧಾನಿಗಳು ತಾವು ವಿಶ್ವಗುರು ಎಂದು ಬಿಂಬಿಸಿಕೊಳ್ಳುತ್ತಾರೆ. ಇದೇನಾ ವಿಶ್ವಗುರುವಿನ ಲಕ್ಷಣ? ಈ ವಿಚಾರವನ್ನು ನಿಮಗೆ ಬಿಡುತ್ತೇನೆ. ವಿದ್ಯಾರ್ಥಿಗಳ ಪೋಷಕರ ದುಃಖ, ದುಮ್ಮಾನವನ್ನು ನೀವು ನೋಡುತ್ತಿದ್ದೀರಿ. ಕೇವಲ ಬಾಯಿ ಮಾತಲ್ಲಿ ರಕ್ಷಣೆ ಮಾಡುತ್ತೇವೆ ಎಂದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರಬೇಕು.ನಮ್ಮ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದ್ದು, ಭಾರತೀಯರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಸರ್ಕಾರ ಈ ಕೂಡಲೇ ಯುದ್ಧದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಬೇಕು.” ಎಂದು ಕೆಪಿಸಿಸ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಉಕ್ರೇನ್ ಮೇಲಿನ ರಷ್ಯಾ ದಾಳಿಯಲ್ಲಿ ಅಸುನೀಗಿದ ಹಾವೇರಿ ಜಿಲ್ಲೆಯ ವೈದ್ಯ ವಿದ್ಯಾರ್ಥಿ ನವೀನ್ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಯುದ್ಧಪೀಡಿತ ಉಕ್ರೇನ್ʼನಲ್ಲಿ ಇನ್ನೂ ಸಿಲುಕಿರುವ ಎಲ್ಲ ಕನ್ನಡಿಗರನ್ನು ಕೂಡಲೇ ರಕ್ಷಿಸಬೇಕು ಎಂದು ಕೇಂದ್ರ-ರಾಜ್ಯ ಸರಕಾರಗಳನ್ನು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ರಷ್ಯಾ ತೀವ್ರವಾಗಿ ದಾಳಿ ಮಾಡಿರುವ ಖಾರ್ಕೀವ್ ಪ್ರದೇಶದಲ್ಲಿ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅನ್ನ ನೀರಿಗೂ ಅವರು ಕಷ್ಟಪಡುತ್ತಿದ್ದಾರೆ. ಕೂಡಲೇ ಸರಕಾರಗಳು ಅವರ ನೆರವಿಗೆ ಹೋಗಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳ ಟ್ವೀಟ್ʼನ ಪೂರ್ಣ ಪಾಠ ಇಲ್ಲಿದೆ;
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾರೆಂಬ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ.
ವೈದ್ಯನಾಗಬೇಕು ಎಂಬ ಕನಸು ಹೊತ್ತು ನವೀನ್ ಅಲ್ಲಿಗೆ ಹೋಗಿದ್ದರು. ಭಾರತದಲ್ಲಿ, ದುಬಾರಿ ವೈದ್ಯ ಶಿಕ್ಷಣ ಕೈಗೆಟುಕದೇ ಅವರು ಉಕ್ರೇನ್ʼಗೆ ತೆರಳಿದ್ದರು. ಯುದ್ಧವು ಅವರ ಕನಸನ್ನು ನುಚ್ಚುನೂರು ಮಾಡಿದೆ. ಇಂಥ ಅನೇಕ ವಿದ್ಯಾರ್ಥಿಗಳು ಇನ್ನೂ ಖಾರ್ಕೀವ್ ನಗರದಲ್ಲೇ ಸಿಲುಕೊಂಡಿದ್ದಾರೆ.
ಶೆಲ್ ದಾಳಿಗೆ ತುತ್ತಾಗುವ ಮುನ್ನ 2 ಸಲ ತಮ್ಮ ಪೋಷಕರಿಗೆ ನವೀನ್ ಕರೆ ಮಾಡಿದ್ದರು, ಅದಾದ ಸ್ವಲ್ಪ ಹೊತ್ತಿನಲ್ಲೇ ಅಸುನೀಗಿದ್ದಾರೆ ಎಂಬುದನ್ನು ನೆನೆದರೆ ಬಹಳ ನೋವಾಗುತ್ತದೆ. ಬಾಂಬ್, ಕ್ಷಿಪಣಿ, ಶೆಲ್ ಸ್ಫೋಟಗಳಿಂದ ಅವರೆಲ್ಲರೂ ಖಾರ್ಕೀವ್ ನಗರದಲ್ಲಿ ತತ್ತರಿಸುತ್ತಿದ್ದಾರೆ. ಮೊದಲೇ ಇಲ್ಲಿ ಸಿಲುಕಿರುವವರನ್ನು ರಕ್ಷಿಸಬೇಕಿತ್ತು.
ಆ ವಿದ್ಯಾರ್ಥಿಳೆಲ್ಲರೂ 6 ದಿನಗಳಿಂದ ಬಂಕರ್ʼನಲ್ಲೇ ಇದ್ದಾರೆ. ಅವರೀಗ ಕೇವಲ ಚಾಕೋಲೇಟ್, ಬಿಸ್ಕೆಟ್, ಸ್ನೀಕರ್ʼಗಳನ್ನು ತಿನ್ನುತ್ತಾ ಬದುಕುಳಿದಿದ್ದಾರೆ. ನೀರು-ಆಹಾರಕ್ಕೆ ತತ್ವಾರವಾಗಿದೆ ಎಂದು ಅಲ್ಲಿನ ಕನ್ನಡ ವಿದ್ಯಾರ್ಥಿಗಳು ಮಾಧ್ಯಮಗಳ ಮೂಲಕ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೇಂದ್ರ ಸರಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರವೂ ಮತ್ತಷ್ಟು ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇನ್ನೊಂದು ಜೀವ ಹೋಗಲೂ ಬಿಡಬಾರದು. ಉಕ್ರೇನ್ ಭಾರತೀಯ ರಾಯಭಾರ ಕಚೇರಿ ಸೂಕ್ತವಾಗಿ ಸ್ಪಂದಿಸುತ್ತಿವಲ್ಲವೆಂಬ ಆರೋಪವೂ ಕೇಳಿಬರುತ್ತಿದೆ.
ವಿದ್ಯಾರ್ಥಿ ನವೀನ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮಗನನ್ನು ಕಳೆದುಕೊಂಡು ಅತೀವ ದುಃಖದಲ್ಲಿರುವ ಅವರ ಪೋಷಕರಿಗೆ ನನ್ನ ಪ್ರಗಾಢ ಸಂತಾಪಗಳು. ನವೀನ್ ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಅವರು ಹೇಳಿದ್ದಾರೆ.