ಸಂಘಟನೆಗಳ ಮೇಲೆ ವಾಗ್ದಾಳಿ; ಧೈರ್ಯವಿದ್ದರೆ ಕಾಯಕವೇ ಕೈಲಾಸ ಎಂದು ಹೇಳಿ ಮತ ಕೇಳಿ ಎಂದು ಬಿಜೆಪಿಗೆ ಸವಾಲು
ಕೋವಿಡ್ ಹಣ ಲೂಟಿಯ ಪಾಪದ ಊಟ ತಿನ್ನಬೇಡಿ ಎಂದಿದ್ದರು ಬಿಜೆಪಿ ಶಾಸಕರು!!
ಮೈಸೂರು: ಸೂಕ್ಷ್ಮ ವಿಷಯಗಳ ಮೂಲಕ ಅಶಾಂತಿ ಸೃಷ್ಟಿ ಮಾಡುತ್ತಿರುವ ಸಂಘಟನೆಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, “ಶ್ರೀರಾಮನ ಹೆಸರೇಳಿಕೊಂಡು ರಾವಣ ರಾಜ್ಯ ಸೃಷ್ಟಿ ಮಾಡಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ನಗರದ ಕಲಾಮಂದಿರದಲ್ಲಿ ಇಂದು ʼಜೆಪಿ ವಿಚಾರ ವೇದಿಕೆʼ ಹಮ್ಮಿಕೊಂಡಿದ್ದ ʼಸರ್ವ ಜನಾಂಗದ ತೋಟ; ಭಾವೈಕ್ಯತೆಯ ಒಂದು ಚರ್ಚೆʼ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿ ಮಾಡಲು ಹೊರಟಿವೆ. ಅದೆಂದಿಗೂ ಸಾಧ್ಯವಾಗುವುದಿಲ್ಲ. ಅಲ್ಲಿ ನಡೆದ ಅವರ ಆಟ ಇಲ್ಲಿ ನಡೆಯುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಎಲ್ಲೆಲ್ಲೂ ಬಿಜೆಪಿಯ ದ್ವಂದ್ವ ನಿಲುವು ಎದ್ದು ಕಾಣುತ್ತಿದೆ. ಸರಕಾರ ರಾಜ್ಯದ ಪ್ರತಿ ಕುಟುಂಬವು ನೆಮ್ಮದಿಯಾಗಿ ಬದುಕುವಂಥ ವಾತಾವರಣ ನಿರ್ಮಾಣ ಮಾಡಬೇಕು. ಅಭಿವೃದ್ಧಿಶೀಲ ಕರ್ನಾಟಕವನ್ನು ಎಲ್ಲಾ ರೀತಿಯಲ್ಲೂ ಹಾಳು ಮಾಡಿ ಉತ್ತರ ಪ್ರದೇಶವನ್ನಾಗಿ ಮಾಡಲು ಹೊರಟಿದೆ. ಅದಕ್ಕೆ ಅವಕಾಶ ಕೊಡಬಾರದು. ಈ ವೇದಿಕೆಯ ಮೂಲಕ ಇಡೀ ರಾಜ್ಯಕ್ಕೆ ಈ ಸಂದೇಶವನ್ನು ಕೊಡಬೇಕಾಗಿದೆ ಎಂದು ಅವರು ಹೇಳಿದರು.
ಅಶಾಂತಿ ಸೃಷ್ಟಿ ಮಾಡುತ್ತಿರುವ ಸಂಘಟನೆಗಳನ್ನು ಉಗ್ರವಾಗಿ ತರಾಟೆಗೆ ತೆಗೆದುಕೊಂಡ ಅವರು; ಮನೆಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಪವಿತ್ರ ಕೇಸರಿ ಬಟ್ಟೆ ತೊಟ್ಟು ಅಪಮಾನ ಮಾಡಬೇಡಿ. ಕೇಸರಿ ಪವಿತ್ರ ವಸ್ತ್ರ. ಅದಕ್ಕೊಂದು ಪಾವಿತ್ರ್ಯತೆ ಇದೆ. ಅದನ್ನು ಹೆಗಲ ಮೇಲೆ ಹಾಕಿಕೊಂಡು ಮಾಡಬಾರದ್ದನ್ನು ಮಾಡಿ ಶ್ರೀರಾಮ ಮತ್ತು ಹಿಂದೂ ಧರ್ಮಕ್ಕೆ ಕಳಂಕ ತರಬೇಡಿ. ಕರ್ನಾಟಕವನ್ನು ರಾವಣ ರಾಜ್ಯ ಮಾಡಬೇಡಿ, ಕೈಲಾದರೆ ರಾಮರಾಜ್ಯ ನಿರ್ಮಾಣ ಮಾಡಿ ಎಂದು ಸವಾಲು ಹಾಕಿದರು.
ಬಿಜೆಪಿ ಅಭಿವೃದ್ಧಿಯ ವಿಷಯ ಇಟ್ಟುಕೊಂಡು ಮತ ಕೇಳುತ್ತಿಲ್ಲ. ಅದರ ಬಳಿ ಅಂಥ ಜನಪರ ವಿಷಯಗಳೇ ಇಲ್ಲ. ಅದಕ್ಕಾಗಿ ನೆಮ್ಮದಿಯಾಗಿದ್ದ ಕರ್ನಾಟಕದಲ್ಲಿ ಶಾಂತಿಯನ್ನು ಕದಡಿ ಜನರ ಬದುಕು ಹಾಳು ಮಾಡಲು ಹೊರಟಿದೆ. ಮಾವು ಖರೀದಿ ವಿಷಯದಲ್ಲೂ ಧರ್ಮವನ್ನು ಎಳೆದುತಂದು ರೈತರ ಬದುಕನ್ನೂ ಹಾಳು ಮಾಡಲು ಹುನ್ನಾರ ನಡೆಸಿದೆ. ಬಿಜೆಪಿಗೆ ಧೈರ್ಯವಿದ್ದರೆ ʼಕಾಯಕವೆ ಕೈಲಾಸʼ ಎಂದು ಹೇಳಿಕೊಂಡು ಮತ ಕೇಳಲಿ, ಆದರೆ ಒಡೆದು ಆಳುವ ನೀತಿಯನ್ನು ಮುಂದಿಟ್ಟುಕೊಂಡು ಮತ ಕೇಳಬೇಡಿ. ಹಣೆಗೆ ಬೊಟ್ಟು ಇಟ್ಟುಕೊಂಡು ಜೈಶ್ರೀರಾಂ ಎಂದರೆ ರೈತರು ಉಳಿಯುವುದಿಲ್ಲ ಎಂದಬುದನ್ನು ನೆನಪಿಟ್ಟುಕೊಳ್ಳಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮೌನಿ ಮುಖ್ಯಮಂತ್ರಿ
ಸಮಾಜದಲ್ಲಿ ಅಶಾಂತಿ ಮೂಡಿಸಲು ಕರ ಪತ್ರ ಹಂಚುತ್ತಿದ್ದರೂ, ಧರ್ಮ ಧರ್ಮಗಳ ದ್ವೇಷ ಸೃಷ್ಟಿ ಮಾಡುತ್ತಿದ್ದರೂ ಸರಕಾರ ಏನೂ ಕ್ರಮ ಏಕೆ ಕೈಗೊಳ್ಳಲಿಲ್ಲ. ಮುಖ್ಯಮಂತ್ರಿಯೂ ಮೌನವಾಗಿದ್ದಾರೆ. ಅವರು ಮೌನಿಬಾಬಗಳಾಗಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.
ಸರಕಾರಕ್ಕೆ ತಿಂಗಳ ಗಡುವು
ರಾಜ್ಯವು ಕುವೆಂಪು ಅವರ ಸರ್ವ ಜನಾಂಗದ ಶಾಂತಿ ತೋಟವಾಗಿತ್ತು. ಅದನ್ನು ಇವರೆಲ್ಲ ಸೇರಿ ಹಾಳು ಮಾಡಿದ್ದಾರೆ. ಒಂದು ತಿಂಗಳಲ್ಲಿ ಮತ್ತೆ ರಾಜ್ಯದಲ್ಲಿ ಶಾಂತಿ ವಾತಾವರಣ ಮರುಸ್ಥಾಪನೆ ಮಾಡದಿದ್ದರೆ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆ ಕೊಟ್ಟರು.
ನನಗೆ 2023ರ ಚುನಾವಣೆ ಮುಖ್ಯವಲ್ಲ, ಧರ್ಮಾತೀತ ಸಮಾಜ ಗಟ್ಟಿಯಾಗಬೇಕು. ಹಿಜಾಬ್ ನಂತಹ ಒಂದು ಸಣ್ಣ ಘಟನೆ ದೊಡ್ಡದಾಗಲು ಸರಕಾರದ ನಿರ್ಲಕ್ಷ್ಯವೇ ಕಾರಣ. ಸರಕಾರವೇ ಕಿಡಿಗೇಡಿಗಳಿಗೆ ಉತ್ತೇಜನ ಕೊಟ್ಟು ಮೌನವಾಯಿತು. ಈ ಮೂಲಕ ಅಶಾಂತಿ ವಾತಾವರಣ ನಿರ್ಮಾಣ ಮಾಡಿದರು. ಕೆಲವರು ಮೌನವಾಗಿ ಇರುವ ಕಾರಣ ಈ ವಿವಾದವು ರಾಜ್ಯ, ದೇಶ ಹಾಗೂ ವಿದೇಶಕ್ಕೂ ವ್ಯಾಪಿಸಿತು. ಈ ವಿಷಯವನ್ನು ಮಾತನಾಡಲು ಕಾಂಗ್ರೆಸ್ ಹಿಂದೇಟು ಹಾಕಿತು ಎಂದು ಟೀಕಿಸಿದರು.
ಕೋವಿಡ್ ಹಣ ಲೂಟಿಯ ಪಾಪದ ಊಟ ತಿನ್ನಬೇಡಿ ಎಂದಿದ್ದರು ಬಿಜೆಪಿ ಶಾಸಕರು!!
ಸರಕಾರ ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಮಾಡಿದೆ ಎಂದು ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿಗಳು; ವಿಧಾನಂಡಲ ಕಲಾಪದ ವೇಳೆ ಎಲ್ಲ ಪಕ್ಷಗಳ ಶಾಸಕರಿಗೆ ಸಚಿವರುಗಳು ಭೋಜನ ವ್ಯವಸ್ಥೆ ಮಾಡುವ ಸಂಪ್ರದಾಯವಿದೆ. ಅದೇ ಸರದಿಯಲ್ಲಿ ಕೋವಿಡ್ ನಿರ್ವಹಣೆ ಮಾಡಿದ ಇಲಾಖೆಯ ಸಚಿವರು ಬೋಜನ ವ್ಯವಸ್ಥೆ ಮಾಡಿದ್ದರು. ನನಗೂ ಆಹ್ವಾನ ನೀಡಿದ್ದರು. ಆಗ ಬಿಜೆಪಿಯ ಕೆಲ ಶಾಸಕರು ನನ್ನಲ್ಲಿ ಬಂದು; “ಅಣ್ಣಾ, ನೀನು ಹೋಗ್ಬಿಟ್ಟಿಯಾ ಊಟಕ್ಕೆ. ನೀನೇನಾದರೂ ಆ ಊಟ ಮಾಡಿದರೆ ಕೋವಿಡ್ ನಿಂದ ಸತ್ತಿರುವರು ಪಿಶಾಚಿಗಳಾಗಿ ಕಾಡುತ್ತಾರೆ” ಎಂದು ಹೇಳಿದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಎಷ್ಟು ಪ್ರಮಾಣದಲ್ಲಿ ಲೂಟಿ ಮಾಡಿದರು ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಸಂವಾದವನ್ನು ಹಿರಿಯ ಸಾಹಿತಿ ಡಾ.ಅರವಿಂದ ಮಾಲಗತ್ತಿ ಉದ್ಘಾಟಿಸಿದರು. ಶ್ರೀ ಬಸವಧ್ಯಾನ ಮಂದಿರದ ಶ್ರೀ ಬಸವಲಿಂಗ ಮೂರ್ತಿ ಶರಣರು ಆಶೀರ್ವಚನ ನೀಡಿದರು.
ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಮೈಸೂರಿನ ಸಿಎಸ್ʼಐ ಅಧ್ಯಕ್ಷರಾದ ರೆವರಂಡ್ ಗುರುಶಾಂತ್, ಅಖಿಲ ಭಾರತ ಮಿಲ್ಲಿ ಕೌನ್ಸಿಲ್ʼನ ಅಧ್ಯಕ್ಷ ಮೌಲಾನ ಜಖಾವುಲ್ಲಾ ಸಿದ್ದಿಕಿ, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರುಗಳು ಮಾತನಾಡಿದರು.