ಬಸನಗೌಡ ಯತ್ನಾಳ್ ಕೊಟ್ಟ ಟಾಂಗ್ ಯಾರಿಗೆ?
ಕಲಬುರಗಿ: ಕುಟುಂಬ ರಾಜಕಾರಣ ಏಡ್ಸ್ ನಂತೆ ಎಲ್ಲಾ ಪಕ್ಷಗಳಲ್ಲೂ ಹಬ್ಬಿದೆ, ಇದರ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಅವರು ಅಭಿಯಾನ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಕುಟುಂಬ ರಾಜಕಾರಣದ ಬಗ್ಗೆ ಮೈಸೂರಿನಲ್ಲಿ ಬಿ.ಎಲ್.ಸಂತೋಷ್ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಂಶಪಾರಂಪರ್ಯ ರಾಜಕಾರಣಕ್ಕೆ ಇತಿಶ್ರಿ ಹಾಡುವ ಸಂಬಂಧ ಪ್ರಧಾನಿಯವರು ಕೈಗೊಂಡಿರುವ ಅಭಿಯಾನ ಸ್ವಾಗತಾರ್ಹ ಎಂದು ತಿಳಿಸಿದರು.
ಒಂದೇ ಕುಟುಂಬದಲ್ಲಿ ಶಾಸಕ, ವಿಧಾನಪರಿಷತ್ ಸದಸ್ಯ, ಸಂಸದ ಸೇರಿ ನಾಲ್ಕಾರು ಜನಪ್ರತಿನಿಧಿಗಳಾಗುವ ಸಂಪ್ರದಾಯ ಹೋಗಬೇಕು.
ಲಾಬಿ ಮಾಡುವವರು, ಶಕ್ತಿ ಪ್ರದರ್ಶನ ಮಾಡುವವರು, ಹಣ ಬಲ, ತೋಳ್ಬಲ ಪ್ರದರ್ಶನ ಮಾಡುವುದು ಬಿಜೆಪಿಯಲ್ಲಿ ನಡೆಯುವುದಿಲ್ಲ ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ರಾಜನಾಥ್‍ಸಿಂಗ್ ಅವರ ಮಗನನ್ನು ನಮ್ಮ ಪಕ್ಷ ಮಂತ್ರಿ ಮಾಡಲಿಲ್ಲ. ಇದರಿಂದ ನಮ್ಮಲ್ಲೂ ಕೆಲವರಿಗೆ ನಡುಕ ಶುರುವಾಗಿದೆ. ಅಂತಹವರೆಲ್ಲಾ ಜಾಕೆಟ್ ತೆಗೆದಿಟ್ಟು ಕೈಗಾರಿಕೆ ಮಾಡಿಕೊಂಡು ಇರಲಿ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ರಾಜಕಾರಣದಲ್ಲಿ ಅವಕಾಶ ಸಿಗಲಿ ಎಂದು ತಿಳಿಸಿದರು.
ರಾಷ್ಟ್ರೀಯವಾದಿ ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಹೇಳಿದಂತೆ ನಡೆದುಕೊಳ್ಳಲಿ ಎನ್ನುವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಸಿದ ಯತ್ನಾಳ್, ಪ್ರಿಯಾಂಕ್ ಖರ್ಗೆ ಅವರೇ ಈ ವಿಚಾರದಲ್ಲಿ ಬಿಜೆಪಿಗೆ ನೀವೇ ಆದರ್ಶವಾಗಿ ಎಂದು ಹೇಳಿದರು.
ಕುಟುಂಬ ರಾಜಕಾರಣದ ಅಭಿಯಾನ ನಿಮ್ಮಿಂದಲೇ ಶುರುವಾಗಲಿ. ನೀವಾದರೂ ನಿವೃತ್ತಿಯಾಗಿ. ಅಥವಾ ನಿಮ್ಮ ತಂದೆಯನ್ನಾದರೂ ನಿವೃತ್ತಿ ಮಾಡಿಸಿ ಮಾದರಿಯಾಗಿ ಎಂದು ಟಾಂಗ್ ನೀಡಿದರು.
ಸ್ವಾಮೀಜಿಗಳಿಗೂ ಟಾಂಗ್ ಕೊಟ್ಟ ಯತ್ನಾಳ್!!
ತಮ್ಮ ಮೇಲೆ ಸ್ವಾಮೀಜಿಗಳ ಆಶೀರ್ವಾದ ಕಡಿಮೆಯಾಗಿದೆ ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಸ್ವಾಮೀಜಿಗಳ ಆಶೀರ್ವಾದ ಕೂಡ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಅವರ ಬೇಡಿಕೆಗಳು ಕೂಡ ಹೆಚ್ಚಾಗುತ್ತಿರುತ್ತವೆ ಎಂದು ಮಾರ್ಮಿಕವಾಗಿ ನುಡಿದರು.