ತಿಪ್ಪೆಯಾದ ದೇವನಹಳ್ಳಿ ಮಿನಿ ವಿಧಾನಸೌಧ; ಹೊರಗೆ ಶ್ವೇತಸೌಧ! ಒಳಗೆ ಕೊಳಕುಸೌಧ!!
by Sidhu Devanahalli
ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ‘ಸ್ವಚ್ಛ ಭಾರತ್’ ಅಭಿಯಾನವು ಕರ್ನಾಟಕದ ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಹಳ್ಳ ಹಿಡಿದು ಹೋಗಿದೆ. ಅದರಲ್ಲೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿರುವ ಕಟ್ಟಡಗಳಲ್ಲಿ ಸ್ವಚ್ಛ ಭಾರತಕ್ಕೆ ಎಳ್ಳೂನೀರು ಬಿಡಲಾಗಿದ್ದು, ಕಂದಾಯ ಸಚಿವರ ಕಣ್ಣಿಗೂ ಕಾಣುತ್ತಿಲ್ಲ.
ಹೌದು. ಸ್ವಚ್ಛಭಾರತವು ಹೇಗೆಲ್ಲ ಹಳ್ಳ ಹಿಡಿದಿದೆ ಎನ್ನುವುದನ್ನು ನೋಡಲು ಯಾರಾದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಹಸೀಲ್ದಾರ್ ಕಚೇರಿಗೆ (ಮಿನಿ ವಿಧಾನಸೌಧ) ಭೇಟಿ ನೀಡಿದರೆ ಸಾಕು.
ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಕಚೇರಿಗಳು ಗಬ್ಬೆದ್ದು ನಾರುತ್ತಿವೆ, ತಿಪ್ಪೆಗಳಂಥ ದೃಶ್ಯಗಳು ಸ್ವಾಗತಿಸುತ್ತವೆ. ಅಲ್ಲಿನ ಶೌಚಾಲಯಗಳ ಮುಂದೆ ಮೂಗು ಮುಚ್ಚಿಕೊಂಡು ಓಡಾಡುವಂಥ ದುಃಸ್ಥಿತಿ ನಿರ್ಮಾಣವಾಗಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳು ಹೇಗಿವೆ ಎಂದರೆ, ಅವುಗಳನ್ನು ನೋಡುವುದು ಕಷ್ಟವಾಗುತ್ತದೆ, ಅವುಗಳ ಬಗ್ಗೆ ಬರೆಯುವುದಕ್ಕೂ ಹೇಸಿಗೆಯಾಗುತ್ತದೆ.
ಆದರೂ, ಅಸ್ವಚ್ಛ ಕರ್ನಾಟಕ ಮುಖ ತೋರಿಸುವ ಅನಿವಾರ್ಯದಿಂದ ಈ ಚಿತ್ರಗಳನ್ನು ಪ್ರಕಟಿಸದೇ ವಿಧಿ ಇಲ್ಲ. ಈ ಚಿತ್ರಗಳನ್ನು ನೋಡಿಯಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ.
ಕೊಳಗೇರಿಯಾದ ಮಿನಿ ವಿಧಾನಸೌಧ
ಕರ್ನಾಟಕವಷ್ಟೇ ಅಲ್ಲ, ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನತಿ ದೂರದಲ್ಲೇ ಇರುವ ದೇವನಹಳ್ಳಿ ಮಿನಿ ವಿಧಾನಸೌಧವು ಕೊಳಗೇರಿಯಂತೆ ಆಗಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ದಿವ್ಯನಿರ್ಲಕ್ಷ್ಯಕ್ಕೆ ಸಾಕ್ಷಿಯಂತಿದೆ. ಅವರೆಲ್ಲರೂ ಬದುಕಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ನಮ್ಮ ಪಾಲಿಗೆ ಇವರೆಲ್ಲ ಇಲ್ಲ ಎಂದು ಜನರು ಸಿಟ್ಟಾಗಿದ್ದಾರೆ.
ಹೊರಗೆ ನಿಂತು ನೋಡಿದರೆ ಶ್ವೇತಸೌಧದಂತೆ ಸುಂದರವಾಗಿ ಕಂಗೊಳಿಸುತ್ತಿರುವ ಈ ಕಟ್ಟಡದ ಒಳಹೊಕ್ಕರೆ ಕೊಳಕಿನ ದರ್ಶನವಾಗುತ್ತದೆ. ಇಡೀ ಸೌಧವೇ ತಿಪ್ಪೆಯಂತೆ ಗೋಚರವಾಗುತ್ತದೆ. ಪ್ರತಿದಿನವೂ ಸಾವಿರಾರು ಜನರು ಕುಂದುಕೊರತೆಗಳನ್ನು ಹೊತ್ತು ಬರುತ್ತಿದ್ದು, ಅವರೆಲ್ಲರೂ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮಹಿಳೆಯರಂತೂ ಓಡಾಡುವುದೇ ದುಸ್ಥರ ಅನ್ನುವ ಕರ್ಮ. ಅಧಿಕಾರಿಗಳು ಆ ಕೊಳಕಿನ ಪಕ್ಕದಲ್ಲೇ ನಿತ್ಯವೂ ಓಡಾಡುತ್ತಿದ್ದರೂ ಆ ಬಗ್ಗೆ ಅವರಿಗೆ ಗಮನವೇ ಇಲ್ಲ.
ಈ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಮುಖ್ಯ ಕಚೇರಿ ಇದೆ. ಸಬ್ ರಿಜಿಸ್ಟ್ರಾರ್ ಕಚೇರಿ, ಪಿಂಚಣಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಕಚೇರಿಗಳು ಇಲ್ಲಿಯೇ ಇವೆ. ನಿತ್ಯವೂ ಸಾವಿರಾರು ಜನರು ಈ ಕಚೇರಿಗಳಿಗೆ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಜನರು ಕೂಡ ಜವಾಬ್ದಾರಿಯನ್ನು ಮರೆತು ಗೋಡೆಗಳಿಗೆ ಗುಟ್ಕಾ, ಎಲೆ ಅಡಿಕೆ ಊಗಿರುವ ದೃಶ್ಯಗಳು ಎಲ್ಲೆಲ್ಲೂ ಕಾಣುತ್ತವೆ. ಪ್ರತಿಯೊಂದು ಮಹಡಿಯಲ್ಲಿ ಕಟ್ಟಡದ ಗೋಡೆಗಳು ಕೊಳಕು ಬಿದ್ದು ಹೋಗಿವೆ. ಅಲ್ಲಿಗೆ ಬರುವವರಲ್ಲಿ ಮುಖ್ಯವಾಗಿ ವೃದ್ಧರು, ವಿಕಲಚೇತನರು, ಮಹಿಳೆಯರೇ ಹೆಚ್ಚು. ಅಲ್ಲಿನ ಶೌಚಾಲಯಗಳು ನಿರ್ವಹಣೆ, ಸ್ವಚ್ಛತೆ ಇಲ್ಲದೆ ಹೊಟ್ಟೆ ತೊಳಿಸುವಂತಿವೆ. ಇದಾವುದರ ಪರಿವೆಯೇ ಇಲ್ಲದ ಜಿಡ್ಡುಗಟ್ಟಿದ ಸ್ಥಿತಿಯಲ್ಲಿ ತಹಸೀಲ್ದಾರ್ ಅವರಿದ್ದಾರೆ. ನಿತ್ಯವೂ ಅವರು ಅದೇ ಶೌಚಾಲಯ, ಕೊಳಕು ಗೋಡೆ, ಎಲ್ಲೆಂದರಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಗಲೀಜಿನ ಎದುರಿನಲ್ಲಿಯೇ ಅವರು ಓಡಾಡುತ್ತಿದ್ದಾರೆಯಾದರೂ ಅವರಿಗೆ ಏನೇನೂ ಅನಿಸುತ್ತಿಲ್ಲವೇ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಶೌಚಾಲಯ ಬಳಸಿದರೆ ಸೋಂಕು
ದೇವನಹಳ್ಳಿ ಮಿನಿ ವಿಧಾನಸೌಧದಲ್ಲಿ ಶೌಚಾಲಯಗಳ ನಿರ್ವಹಣೆಯನ್ನೇ ಮಾಡುತ್ತಿಲ್ಲ. ಅಲ್ಲಿ ಸ್ವಚ್ಛತೆಯ ಸಿಬ್ಬಂದಿಯೇ ಇಲ್ಲವಾ? ಎನ್ನುವ ಪ್ರಶ್ನೆ ಎದುರಾಗಿದೆ. ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಇತರೆ ಜನಪ್ರತಿನಿಧಿಗಳು ಮಿನಿ ವಿಧಾನಸೌಧದ ಕಡೆ ತಲೆಹಾಕುತ್ತಿಲ್ಲ.
ಪ್ರತಿ ಮಹಡಿಯ ಶೌಚಾಲಯಗಳಿಗೆ ನಿರ್ವಹಣೆಯ ಭಾಗ್ಯವೇ ಇಲ್ಲ. ನಲ್ಲಿಗಳೆಲ್ಲ ಹಾಳಾಗಿ, ಶೌಚಾಲಯಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಹಾಗಿದ್ದರೂ ಜನರು ಇವೇ ಶೌಚಾಲಯಗಳನ್ನು ಸಾರ್ವಜನಿಕರು ಬಳಕೆ ಮಾಡುತ್ತಿದ್ದಾರೆ. ಪರಿಣಾಮವಾಗಿ ಸೋಂಕಿನ ಕಾಯಿಲೆಗಳು ಹರಡುತ್ತಿವೆ.
ಯಾರು ಏನಂತಾರೆ?
ದೇವನಹಳ್ಳಿ ಮಿನಿ ವಿಧಾನಸೌಧವನ್ನು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಬಹಳ ಸುಸಜ್ಜಿತವಾಗಿ, ಅತ್ಯುತ್ತಮವಾಗಿ ಕಟ್ಟಿದ್ದಾರೆ. ಆದರೆ, ಅಧಿಕಾರಿಗಳಿಗೆ ಅದನ್ನು ಸರಿಯಾಗಿ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ. ಗೋಡೆಗಳ ಮೇಲೆಲ್ಲ ಉರಿದು, ಶೌಚಾಲಾಯಗಳನ್ನು ಸ್ವಚ್ಛ ಮಾಡದೇ ಗಬ್ಬುನಾರುತ್ತಿದೆ. ಪ್ರಧಾನಮಂತ್ರಿಗಳು ನೋಡಿದರೆ ಸ್ವಚ್ಛಭಾರತ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಇಡೀ ತಾಲೂಕಿನ ಆಡಳಿತ ನೋಡುವವರು, ನಾಲ್ಕು ಜನರಿಗೆ ತಿಳಿ ಹೇಳಬೇಕಾದರ ಕಚೇರಿಯೇ ಇಷ್ಟು ಗಬ್ಬುನಾರುತ್ತಿದೆ. ಇವರ ಮನೆಗಳನ್ನು ಈ ರೀತಿ ಇಟ್ಟುಕೊಳ್ಳುತ್ತಾರಾ? ಈ ಅಧಿಕಾರಿಗಳಿಗೆ ಹಣ ಮಾಡುವುದರ ಮೇಲೆ ಇರುವಷ್ಟು ಗಮನ ಜನರ ಕೆಲಸದ ಬಗ್ಗೆ ಇಲ್ಲ. ಸರಕಾರಿ ಆಸ್ತಿಯನ್ನು ರಕ್ಷಣೆ ಮಾಡುವ ಕೆಲಸವನ್ನೂ ಯಾರು ಮಾಡುತ್ತಿಲ್ಲ. ಇಲ್ಲಿ ತಹಸೀಲ್ದಾರ್ ಒಬ್ಬರೇ ಅಲ್ಲ, ಈ ಮಿನಿ ವಿಧಾನಸೌಧದಲ್ಲಿ ಹದಿಮೂರು ಇಲಾಖೆಗಳಿವೆ. ಯಾವೊಬ್ಬ ಅಧಿಕಾರಿಯೂ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಆದ್ದರಿಂದ ಆಮ್ ಆದ್ಮಿ ಪಕ್ಷದಿಂದಲೇ ನಾವೇ ಪೊರಕೆ ಹಿಡಿದು ಸ್ವಚ್ಛ ಮಾಡಿ ಇಡೀ ಕಟ್ಟಡವನ್ನು ನಾವೇ ನಿರ್ವಹಣೆ ಮಾಡೋಣ ಎಂದು ನಿರ್ಧಾರ ಮಾಡಿದ್ದೇವೆ. ನಾವೆಲ್ಲ ಜನರೆಲ್ಲ ಸೇರಿ ಒಂದೊಂದು ರೂಪಾಯಿ ಹಾಕಿಕೊಳ್ಳುತ್ತೇವೆ. ಇದೇ ಕೊನೆ ಎಚ್ಚರಿಕೆ.
ಬಿ.ಕೆ.ಶಿವಪ್ಪ, ಆಮ್ ಆದ್ಮಿ ಪಾರ್ಟಿ
ಮಿನಿ ವಿಧಾನಸೌಧದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಹಿರಿಯ ನಾಗರೀಕರು ಲಿಫ್ಟ್ ಇಲ್ಲದೆ ಮೂರು ಮಹಡಿಗಳನ್ನು ಹತ್ತಿ ಇಳಿಯಬೇಕು. ವಿಪರೀತ ಗಲೀಜು, ಶೌಚಾಲಯಗಳಲ್ಲಿ ದುರ್ನಾತ.
ಮರಿಯಪ್ಪಾಚಾರಿ, ದೇವನಹಳ್ಳಿ ಟೌನ್
ದೇವನಹಳ್ಳಿ ಮಿನಿ ವಿಧಾನಸೌಧದಲ್ಲಿ ಯಾವುದೇ ನಾಗರೀಕ ಸೌಲಭ್ಯಗಳಿಲ್ಲ. ಮಹಿಳೆಯರ ಶೌಚ ಸೇರಿ ಮತ್ತಿತರೆ ಯಾವುದೇ ಸೌಲಭ್ಯಗಳಿಲ್ಲ. ಒಳಕ್ಕೆ ಹೋದರೆ ವಾಕರಿಕೆ ಬರುತ್ತದೆ. ನೀರಿನ ಸೌಲಭ್ಯವಿಲ್ಲ. ಮಹಡಿಗಳನ್ನು ಹತ್ತಿ ಇಳಿಯುವ ಮೆಟ್ಟಿಲು, ಗೋಡೆಗಳು ವಿಪರೀತ ಎನ್ನುವಷ್ಟು ಗಲೀಜಾಗಿವೆ.
ಸಾಕಮ್ಮ, ಸ್ಥಳೀಯ ಮಹಿಳೆ
ತಲೆ ಹಾಕದ ಉಸ್ತುವಾರಿ ಸಚಿವರು
ಕೋವಿಡ್ ನಾಲ್ಕನೇ ಅಲೆ ಶುರುವಾದ ಮೇಲೆ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಜಿಲ್ಲೆಯತ್ತ, ಅದರಲ್ಲೂ ಮುಖ್ಯವಾಗಿ ದೇವನಹಳ್ಳಿಯತ್ತ ತಲೆ ಹಾಕಿಲ್ಲ. ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಜತೆಗಿನ ತಿಕ್ಕಾಟವೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಬೆಂಗಳೂರು-ಚಿಕ್ಕಬಳ್ಳಾಪುರದ ನಡುವೆ ಸಂಚರಿಸುವ ಸಚಿವರು, ಬೈಪಾಸ್ ಮೇಲೆ ಹಾದು ಹೋಗುತ್ತಾರೆಯೇ ವಿನಾ, ದೇವನಹಳ್ಳಿ ಪಟ್ಟಣದೊಳಕ್ಕೆ ಹೆಜ್ಜೆ ಇಡುತ್ತಿಲ್ಲ ಎಂದು ಜನರು ಹೇಳುತ್ತಾರೆ.