ಗುಜರಾತ್ ಜತೆಯೇ ಕರ್ನಾಟಕದಲ್ಲೂ ದಡ ಸೇರಲು ಬಿಜೆಪಿ ಹವಣಿಕೆ
ಬೆಂಗಳೂರು: 2023ರ ಜುಲೈ ನಂತರ ನಡೆಯಬೇಕಿರುವ ರಾಜ್ಯ ವಿಧಾನಸಭೆ ಚುನಾವಣೆಯೂ ಈ ವರ್ಷದ ಡಿಸೆಂಬರ್ʼನಲ್ಲಿಯೇ ನಡೆಯುವ ಸಾಧ್ಯತೆ ಇದೆ.
ಗುಜರಾಜ್ ಚುನಾವಣೆಯೂ ಡಿಸೆಂಬರ್ ನಲ್ಲೇ ನಡೆಯಲಿದ್ದು, ಅದರ ಜತೆಯಲ್ಲೇ ರಾಜ್ಯದ ಚುನಾವಣೆಯನ್ನು ಮುಗಿಸುವ ತವಕದಲ್ಲಿದೆ ಬಿಜೆಪಿ.
ಅವಧಿಗೆ ಮುನ್ನವೇ ಚುನಾವಣೆ ನಡೆಸಿ ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿ, ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಗಳನ್ನು ವೇಗವಾಗಿ ಮಾಡಿಕೊಳ್ಳುತ್ತಿದೆ. ಆ ಪಕ್ಷ ಇಡುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ, ಅವಧಿಗೆ ಮುನ್ನವೇ ಬಿಜೆಪಿ ಚುನಾವಣೆಗೆ ಹೋಗುವುದು ನಿಶ್ಚಿತ ಎಂದು ಗೊತ್ತಾಗಿದೆ.
ಹೈದರಾಬಾದ್ʼನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ, ರಾಜ್ಯಸಭೆಗೆ ದಕ್ಷಿಣ ಭಾರತದ ನಾಲ್ವರು ಗಣ್ಯರ ನಾಮನಿರ್ದೇಶನ ಸೇರಿದಂತೆ ಕೆಲ ತಂತ್ರಗಳನ್ನು ಬಿಜೆಪಿ ಹೂಡಿದ್ದು, ಮೋದಿ ಅವರ ಅಣತಿಯಂತೆ ಡಿಸೆಂಬರ್ ತಿಂಗಳಲ್ಲಿಯೇ ವಿಧಾನಸಭೆ ಚುನಾವಣೆ ನಡೆಸುವುದು ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ.
ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ನೆಲೆ ಕಂಡುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಸದ್ಯಕ್ಕೆ ಕರ್ನಾಟಕದಲ್ಲಿರುವ ಅಧಿಕಾರವನ್ನು ಉಳಿಸಿಕೊಂಡು, ನಂತರ ತೆಲಂಗಾಣವನ್ನು ಟಾರ್ಗೆಟ್ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತಂತ್ರವಾಗಿದೆ. ಇದಾದ ಮೇಲೆ ಕ್ರಮವಾಗಿ ತಮಿಳುನಾಡು, ಕೇರಳವನ್ನು ಗೆಲ್ಲುವುದು ಅವರ ಉದ್ದೇಶ.
ಅಲ್ಲದೆ, ಜುಲೈ ನಂತರ ಚುನಾವಣೆ ನಡೆಸುವುದಾಗಿದ್ದರೆ ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸಲಾಗುತ್ತಿತ್ತು. ಈಗ ಅಂಥ ನಿರ್ಧಾರವನ್ನು ಬಿಜೆಪಿ ಪಕ್ಕಕ್ಕಿಟ್ಟು, ಡಿಸೆಂಬರ್ ವರೆಗೂ ಅವರನ್ನೇ ಮುಂದುವರಿಸುವ ತೀರ್ಮಾನ ಕೈಗೊಂಡಿದೆ. ಹೀಗಾಗಿ 2023ರ ಜನವರಿ ಹೊತ್ತಿಗೆಲ್ಲ ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾಗಿದೆ.
ಬಿಜೆಪಿ ವೇಗಕ್ಕೆ ಸಮನಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಾರ್ಯತಂತ್ರಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ʼಸಿದ್ದರಾಮೋತ್ಸವʼಕ್ಕೆ ಸಿದ್ದರಾಗಿದ್ದರೆ, ಜೆಡಿಎಸ್ ಜನತಾ ಜಲಧಾರೆ ನಂತರ ಜನತಾಮಿತ್ರ ಕಾರ್ಯಕ್ರಮ ಹಮ್ಮಿಕೊಂಡು ಸಂಘಟನೆಗೆ ಸಜ್ಜಾಗುತ್ತಿದೆ.