ಪ್ರಾಧ್ಯಾಪಕ, ಲೇಖಕ, ಚಿಂತಕ ಮತ್ತೂ ಅವಿಭಜಿತ ಕೋಲಾರ ಜಿಲ್ಲೆಯ ಗಟ್ಟಿದನಿ
ಗೌರಿಬಿದನೂರು: ಲೇಖಕ, ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ಅವರು ಇನ್ನಿಲ್ಲ. ಅವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದು, ಅವರಿಗೆ 77 ವರ್ಷ ವಯಸ್ಸಾಗಿತ್ತು.
ಅಪಾರ ಶಿಷ್ಯಬಳಗ ಮತ್ತು ವಿಚಾರ ಶ್ರೀಮಂತಿಕೆ ಹೊಂದಿದ್ದ ಅವರ ನಿಧನ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಬಿಜಿಎಮ್ ಎಂದೇ ಖ್ಯಾತರಾಗಿದ್ದ ಅವರು ಪತ್ನಿ, ಮೂವರು ಮಕ್ಕಳು ಮತ್ತು ಅಸಂಖ್ಯಾತ ಶಿಷ್ಯರನ್ನು ಅಗಲಿದ್ದಾರೆ.
ಗೌರಿಬಿದನೂರು ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು, ಲೇಖಕರು, ಚಿಂತಕರು ಹಾಗೂ ವಿದುರಾಶ್ವತ್ಥದ ವೀರಸೌಧ ಅಭಿವೃದ್ಧಿ ಸಮಿತಿಯ ಸದಸ್ಯರಾಗಿದ್ದ ಪ್ರೊ.ಬಿ.ಗಂಗಾಧರಮೂರ್ತಿ ಇನ್ನಿಲ್ಲ ಎಂಬ ಸುದ್ದಿ ಅವರ ಶಿಷ್ಯಬಳಗಕ್ಕೆ ಅಪಾರ ದುಃಖ ಉಂಟು ಮಾಡಿದೆ.
ಪ್ರೊ.ಬಿ.ಗಂಗಾಧರಮೂರ್ತಿ ಅವರು ಹಾಸನ ಜಿಲ್ಲೆಯ ಹೊಳೇನರಸೀಪುರದವರು. ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ನಗರದ ಅಬ್ಬರದ ಜನಜೀವನದಿಂದ ದೂರವಿದ್ದ ಅವರು ಗ್ರಾಮೀಣ ಬದುಕನ್ನೇ ಬಹವಾಗಿ ಪ್ರೀತಿಸುತ್ತಿದ್ದರು.
ಅವರು ಕಳೆದ ನಾಲ್ಕು ದಶಕಗಳಿಂದ ಬಂಡಾಯ ಸಾಹಿತ್ಯ, ದಲಿತ ಚಳವಳಿ, ಜನವಿಜ್ಞಾನ ಚಳವಳಿ, ವಿಚಾರವಾದಿ ಚಳವಳಿಯಂಥ ನಾಡಿನ ಬಹುತೇಕ ಪ್ರಗತಿಪರ ಚಳವಳಿಗಳಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ, ಸಾಂಸ್ಕೃತಿಕ ಚಿಂತಕರಾಗಿ, ಬರಹಗಾರರಾಗಿ, ಅನುವಾದಕರಾಗಿ ಕನ್ನಡ ಸಾಹಿತ್ಯಕ್ಕೆ ಅನೇಕ ರೀತಿಯ ಮೌಲಿಕ ಕೊಡುಗೆ ನೀಡಿದ್ದಾರೆ. ಭಾರತ ಜ್ಞಾನ ವಿಜ್ಞಾನ ಸಮಿತಿಯ ʼಟೀಚರ್ʼ ಮಾಸಪತ್ರಿಕೆಗೆ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ತಮ್ಮ ವಿಚಾರಗಳಿಂದ ಜನಜನಿತರಾಗಿದ್ದ ಪ್ರೊ.ಗಂಗಾಧರ ಮೂರ್ತಿ ಅವರು ಮಾಡಿದ ಅನನ್ಯ ಕಾರ್ಯವೆಂದರೆ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಸ್ಮಾರಕವನ್ನು ಸಾಕಾರಗೊಳಿಸಿದ್ದು.
1938ರಲ್ಲಿ ನಡೆದ ಹತ್ಯಾಕಾಂಡದ ನಂತರ ʼಕರ್ನಾಟಕದ ಜಲಿಯನ್ ವಾಲಾಬಾಗ್ʼ ಎಂದೇ ಹೆಸರಾದ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಸ್ಮಾರಕ ಸಂಕೀರ್ಣವನ್ನು ವಿಶಿಷ್ಟವಾಗಿ ರೂಪಿಸಿ, ವಿನ್ಯಾಸಗೊಳಿಸಿದರು ಅವರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಫೋಟೋ ಗ್ಯಾಲರಿ, ಗ್ರಂಥಾಲಯವನ್ನೂ ಅವರು ರೂಪಿಸಿದ್ದರು. ಇದೆಲ್ಲವೂ ಭಾರತ ಸ್ವಾತಂತ್ರ್ಯ ಸಂಗ್ರಾಮದ ಹಲವು ಮುಖಗಳನ್ನು ಅನಾವರಣಗೊಳಿಸುವ ಆ ಸ್ಮಾರಕ ದೇಶದಲ್ಲೇ ಅಪರೂಪದ ಸ್ಮಾರಕವಾಗಿ ಖ್ಯಾತಿ ಪಡೆದಿದೆ. ಅಲ್ಲದೆ; ಗೌರಿಬಿದನೂರಿನ ಹೊಸ ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿ ಅಂಬೇಡ್ಕರ್ ನೆನಪಿನಲ್ಲಿ ‘ಸಮಾನತಾ ಸೌಧ ಸಾಕಾರಕ್ಕೂ ಅವರೇ ಕಾರಣ.
ಲೇಖಕರಾಗಿಯೂ ಗಂಗಾಧರಮೂರ್ತಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ʼಹೂ ಅರಳುವಂಥ ಮಣ್ಣುʼ (ಕವನ ಸಂಕಲನ), ʼನಾಗಸಂದ್ರ ಭೂ ಆಕ್ರಮಣ ಚಳವಳಿʼ, ʼಭಾರತದ ಬೌದ್ಧಿಕ ದಾರಿದ್ರ್ಯʼ (ಅನುವಾದ), ʼಭಾರತೀಯ ಸಮಾಜದ ಜಾತಿ ಲಕ್ಷಣʼ (ಅನುವಾದ), ʼಅಂಬೇಡ್ಕರ್ ಮತ್ತು ಮುಸ್ಲಿಮರುʼ (ಅನುವಾದ), ʼವಸಾಹತುಪೂರ್ವ ಕಾಲದ ಜಾತಿಹೋರಾಟಗಳುʼ, ʼಹಿಂದುತ್ವ ಮತ್ತು ದಲಿತರುʼ, ʼಸೂಫಿ ಕಥಾಲೋಕʼ, ʼಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಧಾನೇತರ ಹೋರಾಟಗಳುʼಸೇರಿ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ.
ರಾಜ್ಯ ಸರಕಾರವು 2017ರಲ್ಲಿ ಪ್ರೊ.ಗಂಗಾಧರಮೂರ್ತಿ ಅವರಿಗೆ ʼರಾಜ್ಯೋತ್ಸವ ಪ್ರಶಸ್ತಿʼ ನೀಡಿ ಗೌರವಿಸಿತ್ತು.
Comments 1