ಪುಳಕ ಹುಟ್ಟಿಸಿದ ಪ್ರಗತಿ ಪ್ರತಿಮೆಯ ಯಾತ್ರೆ; ಪ್ರಧಾನಿ ಮೋದಿ ಅವರಿಂದ ಇಂದು ಲೋಕಾರ್ಪಣೆ
by Dr.C.N.Ashwathanarayana
ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ಭಾಗ್ಯವಿಧಾತರು. ಬೆಂಗಳೂರಿನ ಜನತೆ ಸೇರಿದಂತೆ, ಇಡೀ ರಾಜ್ಯದ ಕನ್ನಡಿಗರು ಇದಕ್ಕಾಗಿ ಅವರನ್ನು ಸದಾ ಗೌರವದಿಂದ ನೆನೆಯುತ್ತಾರೆ. 485 ವರ್ಷಗಳ ಹಿಂದೆ, 1537ರಲ್ಲಿ ಅವರು ಕಟ್ಟಿದ ಬೆಂಗಳೂರು ಇನ್ನು ಹದಿನೈದು ವರ್ಷಗಳಲ್ಲಿ 500ನೇ ವರ್ಷಾಚರಣೆಯನ್ನು ಕಾಣಲಿದೆ.
ಈಗ, ನಮ್ಮ ಬಿಜೆಪಿ ಸರಕಾರವು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ದೇವನಹಳ್ಳಿಯ ಬಳಿ ಇರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸುವ ಮೂಲಕ ಮಹೋನ್ನತ ರೀತಿಯಲ್ಲಿ ಗೌರವ ಸಲ್ಲಿಸುತ್ತಿದೆ. ಇದು ನಮ್ಮಲ್ಲಿ ಕೃತಾರ್ಥತೆಯ ಭಾವನೆಯನ್ನು ಹುಟ್ಟಿಸಿದೆ. ಅದರಲ್ಲೂ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಲಿದೆ.
ಕೆಂಪೇಗೌಡರಿಗೆ ನಾಡು ಈ ಮುಂಚೆಯೂ ಗೌರವ ಸಲ್ಲಿಸಿದೆ. ಬಡಾವಣೆ, ಪ್ರಮುಖ ರಸ್ತೆ, ಉದ್ಯಾನ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ಪ್ರಶಸ್ತಿ ಪುರಸ್ಕಾರ ಇತ್ಯಾದಿಗಳಿಗೆಲ್ಲ ಬೆಂಗಳೂರಿನ ಜನಕರ ಹೆಸರನ್ನಿಡಲಾಗಿದೆ; ನಗರದ ಹಲವು ಸ್ಥಳಗಳಲ್ಲಿ ಅವರ ಪ್ರತಿಮೆಗಳನ್ನು ಸಾಂಕೇತಿಕವಾಗಿ ಪ್ರತಿಷ್ಠಾಪಿಸಲಾಗಿದೆ; ಪ್ರತೀವರ್ಷವೂ ನೂರಾರು ಸಂಘಸಂಸ್ಥೆಗಳು ಮತ್ತು ಸರಕಾರ ಅವರ ಜನ್ಮಜಯಂತಿಯನ್ನು ಆಚರಿಸುತ್ತವೆ; ಸಭೆ-ಸಮಾರಂಭಗಳಲ್ಲಿ ಅವರನ್ನು ಸ್ಮರಿಸುವ ಕೆಲಸವಾಗುತ್ತಿರುತ್ತದೆ; ಬೆಂಗಳೂರಿನ ಚರಿತ್ರೆಯ ಉಲ್ಲೇಖವಾದಾಗ ಕೆಂಪೇಗೌಡರ ಹೆಸರು ಸಹಜವಾಗಿಯೇ ಬರುತ್ತದೆ; ಸಮುದಾಯ ಜಾಗೃತಿಯ ಪ್ರಶ್ನೆ ಬಂದಾಗಲೂ ಅವರಿಂದ ಸ್ಫೂರ್ತಿ-ಪ್ರೇರಣೆ ಪಡೆದುಕೊಳ್ಳಲಾಗುತ್ತದೆ. ಇಷ್ಟರ ಮಟ್ಟಿಗೆ ಕೆಂಪೇಗೌಡರು ನಮ್ಮೆಲ್ಲರ ಅನುದಿನ ಬದುಕನ್ನು ಆವರಿಸಿಕೊಂಡಿದ್ದಾರೆ.
ಆದರೂ ಅಷ್ಟು ಎತ್ತರದ ಸಾಧಕರಿಗೆ ತಕ್ಕ ಗೌರವವಾಗಿಲ್ಲ ಎನ್ನುವ ಕೊರಗು ನನಗೆ ಇದ್ದೇ ಇತ್ತು. ಅದರಲ್ಲೂ ಜಗತ್ತಿನ ನಾನಾ ಭಾಗಗಳನ್ನು ನೋಡಿರುವ ನನ್ನಂಥವರಿಗೆ ಇದು ಸಹಜವಾಗಿ ಕಾಡುತ್ತಿತ್ತು. ಮೂರು ವರ್ಷಗಳ ಹಿಂದೆ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತಷ್ಟೆ. ಆಗ ನಾನು, ವಿಮಾನ ನಿಲ್ದಾಣ ಸಮುಚ್ಚಯದಲ್ಲಿ ಕೆಂಪೇಗೌಡರ ಈ 108 ಅಡಿ ಪ್ರತಿಮೆಯನ್ನು ಸ್ಥಾಪಿಸಬೇಕೆನ್ನುವ ನನ್ನ ಅಂತರಂಗದ ಹಂಬಲವನ್ನು ಅವರೊಂದಿಗೆ ಹಂಚಿಕೊಂಡೆ. ಜನ ಸಮುದಾಯಗಳ ನಾಯಕರಾದ ಅವರು, ಇದಕ್ಕೆ ಹಿಂದುಮುಂದು ಯೋಚಿಸದೆ ಒಪ್ಪಿಗೆ ಕೊಟ್ಟರು. ಇಷ್ಟೇ ಅಲ್ಲ, ಈ ಯೋಜನೆಯ ಅನುಷ್ಠಾನದ ಉಸ್ತುವಾರಿಯ ಹೊಣೆಯನ್ನೂ ಅವರು ನನಗೇ ವಹಿಸಿದರು. ಇದು ನನ್ನ ಮೇಲೆ ಅವರಿಟ್ಟಿರುವ ನಂಬಿಕೆಯ ಪ್ರತೀಕವಾಗಿತ್ತು.
ಜೊತೆಗೆ, ಇಂತಹ ಒಂದು ‘ಡ್ರೀಮ್ ಪ್ರಾಜೆಕ್ಟ್’ನ ಹೊಣೆ ನನ್ನ ಹೆಗಲಿಗೆ ಬಿದ್ದಿದ್ದು ನನ್ನನ್ನು ಮತ್ತಷ್ಟು ವಿನೀತನನ್ನಾಗಿಸಿತು. ದೊಡ್ಡದೊಡ್ಡ ಕೆಲಸಗಳು ಮನುಷ್ಯನನ್ನು ನಮ್ರವಾಗಿಸುತ್ತವೆ ಎನ್ನುವ ಆಳದ ನಂಬಿಕೆ ಮತ್ತೊಮ್ಮೆ ಸಾಬೀತಾಯಿತು.
ಒಂದು ದೊಡ್ಡ ಕೆಲಸವೆಂದ ಮೇಲೆ ಸವಾಲುಗಳು ಸಹಜ. ಆದರೆ, ಕೆಂಪೇಗೌಡರ ಭೂಮವಾದ ವ್ಯಕ್ತಿತ್ವವು ಇದನ್ನು ನನ್ನ ಪಾಲಿಗೆ ಸುಲಭವಾಗಿ ಪರಿಣಮಿಸಿದಂತೆ ನನಗೆ ಭಾಸವಾಗುತ್ತಿತ್ತು. ಏಕೆಂದರೆ, ಪ್ರತಿಮೆಯ ರೂಪುರೇಷೆ, ಅದರ ತೂಕ, ಅದರ ಭಾವ-ಭಂಗಿಗಳು, ಒಂದೊಂದು ಹಂತದಲ್ಲೂ ಪ್ರತಿಮೆಯ ಭಾಗಗಳನ್ನು ವಿಧಿಬದ್ಧವಾಗಿ ಸ್ವೀಕರಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ ಇದರ ಬಗ್ಗೆ ಮುತುವರ್ಜಿ ವಹಿಸಿ, ನನಗೆ ನೈತಿಕ ಬೆಂಬಲವಾಗಿ ನಿಂತಿದ್ದು ಇದಕ್ಕೆ ಕಾರಣವಾಗಿತ್ತು.
ಇದರ ಜತೆಗೆ ಹೆಜ್ಜೆಹೆಜ್ಜೆಯಲ್ಲೂ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ನನಗೆ ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ಕೊಡುತ್ತ ಬಂದಿದ್ದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿತ್ತು. 100 ಟನ್ ಕಂಚು ಮತ್ತು 120 ಟನ್ ಉಕ್ಕನ್ನು ಬಳಸಿ ಸಿದ್ಧಪಡಿಸಿರುವ ಈ ಪ್ರತಿಮೆ ಈಗ ಬೆಂಗಳೂರಿಗೊಂದು ನೂತನ ಹೆಗ್ಗುರುತು! ಏಕೆಂದರೆ, ಜಾಗತಿಕ ಸ್ತರದಲ್ಲಿ ಹೆಸರು ಮಾಡಿರುವ ನಮ್ಮ ರಾಜಧಾನಿಗೆ ದೇಶ/ವಿದೇಶಗಳಿಂದ ದಿನವೂ ಸಾವಿರಾರು ಜನ ವಿಮಾನಗಳಲ್ಲಿ ಬಂದಿಳಿಯುತ್ತಾರೆ; ಹಾಗೆಯೇ, ಇಲ್ಲಿಂದಲೂ ಸಾವಿರಾರು ಜನ ಹೊರಭಾಗಗಳಿಗೆ ತೆರಳುತ್ತಾರೆ. ಹೀಗಾಗಿ, ಇವರಿಗೆಲ್ಲ ಪ್ರತೀಕ್ಷಣದಲ್ಲೂ ಕಣ್ಮುಂದೆ ಕೆಂಪೇಗೌಡರ ಕ್ಷಾತ್ರ ತೇಜಸ್ಸು, ಅವರ ದೂರದೃಷ್ಟಿ, ವೈಜ್ಞಾನಿಕ ನಗರ ನಿರ್ಮಾಣ ಇವೆಲ್ಲವೂ ಕಣ್ಮುಂದೆ ಬಂದು, ಐದು ಶತಮಾನಗಳ ಈ ಪಯಣದ ಮಧುರ ನೆನಪುಗಳ ಮೆರವಣಿಗೆ ನಡೆಯಬೇಕೆನ್ನುವುದು ನನ್ನ ಕನಸಾಗಿತ್ತು. ಪ್ರತಿಮೆಯ ಸ್ಥಾಪನೆಯಿಂದ ಹಿಡಿದು, ಅದು ಎಲ್ಲಿ ತಲೆಯೆತ್ತಬೇಕು ಎನ್ನುವವರೆಗೂ ಸಕ್ರಿಯವಾಗಿ ಪಾಲ್ಗೊಂಡಿರುವ ನನಗೆ ಇದೊಂದು ಧನ್ಯತೆಯ ಭಾವವನ್ನು ಮೂಡಿಸಿದೆ.
ದೇಶದಲ್ಲಿ ಮೋದಿಯವರು ಪ್ರಧಾನಿಗಳಾದ ಮೇಲೆ ತಮ್ಮ ತವರು ರಾಜ್ಯದ ಕೇವಾಡಿಯಾದಲ್ಲಿ ‘ಆಧುನಿಕ ಭಾರತದ ಶಿಲ್ಪಿ’ಗಳಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲರ ಬೃಹತ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು. ಇಂತಹ ಋಣದ ಭಾವ ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಲ್ಲೂ ಬಂದು, ಅದು ಮೂರ್ತರೂಪದಲ್ಲಿ ಪ್ರಕಟವಾಗಲು ಯಾವುದೋ ಒಂದು ದೇಶ-ಕಾಲ ಸಂದರ್ಭ ಸೃಷ್ಟಿಯಾಗಬೇಕಾಗುತ್ತದೆ.
ಕೆಂಪೇಗೌಡರಿಗೆ ಆಯಾ ಕಾಲಘಟ್ಟಗಳಲ್ಲಿ ಸಲ್ಲಬೆಕಾದ ಗೌರವ ಸಂದಿದೆ. ಆದರೆ, ಈ 108 ಅಡಿ ಎತ್ತರದ ಪ್ರತಿಮೆ ಈಗಿನ ಮನ್ವಂತರಕ್ಕೆ ಕಾಯುತ್ತಿತ್ತು ಎನಿಸುತ್ತದೆ!
ಹಾಗೆಯೇ, ಇದರಲ್ಲಿ ನಾನೂ ಒಂದು ಭಾಗವಾಗಿದ್ದು ನನ್ನ ಸುದೈವವೆನಿಸುತ್ತದೆ. ಇದು ಕೆಂಪೇಗೌಡರ ಕೃಪಾಕಟಾಕ್ಷ ಮತ್ತು ಜನತೆಯ ಆಶೀರ್ವಾದ, ಹಾಗೂ ನಾನಿರುವ ಪಕ್ಷದ ವಿಶ್ವಾಸದ ಶಕ್ತಿಗಳೆಲ್ಲ ಮುಪ್ಪುರಿಗೊಂಡಾಗ ಮಾತ್ರ ಸಂಭವಿಸುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಸಾಮಾನ್ಯವಾಗಿ ನಮ್ಮಲ್ಲಿ ದೈವ ಋಣ, ಪಿತೃ ಋಣ, ಆಚಾರ್ಯ ಋಣ ಇತ್ಯಾದಿಗಳ ಒಂದು ಪರಂಪರೆ ಇದೆ. ಇದಕ್ಕೆ ಕೆಂಪೇಗೌಡರಂಥ ನಿಸ್ಪೃಹರ ಸಮಾಜ ಋಣವನ್ನು ಸೇರಿಸಬೇಕು. ಈಗ ಭವ್ಯವಾಗಿ ಮೈದಾಳಿರುವ ಅವರ ಪ್ರತಿಮೆಯು ನನ್ನನ್ನೂ ಸೇರಿದಂತೆ ನಮ್ಮೆಲ್ಲರಲ್ಲೂ ಇಂತಹ ವಾರಸುದಾರಿಕೆಯ ಪ್ರಜ್ಞೆಯನ್ನು ರೂಢಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸವನ್ನು ಸೃಷ್ಟಿಸಬಲ್ಲರು!
ಈ ಪ್ರತಿಮೆಗೆ ರೂಪು ಕೊಟ್ಟಿರುವವರು ದೆಹಲಿ ಬಳಿಯ ನೋಯಿಡಾದ ವಿಖ್ಯಾತ ಶಿಲ್ಪಿಗಳಾದ ರಾಮ್ ಸುತಾರ್ ಅವರು. ಅವರ ಮನೆತನದ ಮೂರು ತಲೆಮಾರಿನವರು ವಾಸ್ತುಶಿಲ್ಪ ಪರಂಪರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಟೇಲರು, ಅಂಬೇಡ್ಕರ್, ಈಶ್ವರ, ಶ್ರೀರಾಮ, ಗಾಂಧೀಜಿ ಹೀಗೆ ಮಹಾಮಹಿಮರ ಅದೆಷ್ಟೋ ಪ್ರತಿಮೆಗಳನ್ನು ತಮ್ಮ ಸೂಕ್ಷ್ಮ ಪ್ರತಿಭೆಯ ಬಲದಿಂದ ಅರಳಿಸಿದ ಕೀರ್ತಿ ಅವರದು. ಕೆಂಪೇಗೌಡರ ಪ್ರತಿಮೆಯ ನೆಪದಲ್ಲಿ ನಾನು ಅವರಲ್ಲಿಗೂ ನಾಲ್ಕೈದು ಬಾರಿ ಬೆಂಗಳೂರಿನಿಂದ ‘ಯಾತ್ರೆ’ ಮಾಡಿದ್ದುಂಟು! ಒಂದು ಪುಣ್ಯದ ಕೆಲಸದ ಭಾಗವಾದಾಗ ಇವೆಲ್ಲವೂ ತಮ್ಮಿಂತಾನೇ ಒದಗಿಬರುತ್ತವೆ. ಇವುಗಳನ್ನು ನಾನು, ನನ್ನ ಕರ್ತವ್ಯದ ಭಾಗವೆಂದೇ ಪರಿಗಣಿಸಿ, ಓಡಾಡಿದೆ. ಇದು ನನಗೆ ಇನ್ನೊಂದು ಲೋಕವನ್ನೇ ತೋರಿಸಿತು ಎಂದರೆ ಸುಳ್ಳಲ್ಲ.
ಹಾಗೆಯೇ ಪ್ರತಿಮೆಯ ಪಾದುಕೆ, ಖಡ್ಗ, ಹಸ್ತ ಇತ್ಯಾದಿಗಳು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗಲೋ ಏನೋ ಒಂದು ಕಾತರ, ಕುತೂಹಲ, ಒಂದಿಷ್ಟು ಆತಂಕ, ಅಪಾರವಾದ ನಿರೀಕ್ಷೆಗಳು ನನ್ನಲ್ಲಿ ಮನೆ ಮಾಡಿಕೊಂಡಿರುತ್ತಿದ್ದವು. ಆದರೆ ಈ ಯಾವ ಕೆಲಸದಲ್ಲೂ ನಮಗೆ ಒಂದು ಸಣ್ಣ ವಿಘ್ನವೂ ಎದುರಾಗಲಿಲ್ಲ! ಬದಲಿಗೆ, ಇವೆಲ್ಲವೂ ಹೂವಿನ ಸರವನ್ನು ಎತ್ತಿದಂತೆ ಸುಗಮವಾಗಿ ನೆರವೇರುತ್ತಿದ್ದವು. ಇದನ್ನೆಲ್ಲ ಕಂಡು, ನಾನು ನಿರಾಳತೆಯನ್ನು ಅನುಭವಿಸುತ್ತ ಬಂದೆ.
ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಈ ಯೋಜನೆಗೆ ಹಣಕಾಸಿನ ಅಡಚಣೆ ಕೂಡ ನಮಗೆ ಎದುರಾಗಲಿಲ್ಲ. ಇದರ ಜತೆಗೆ, ಪ್ರತಿಮೆಯ ಮಹತ್ತ್ವವನ್ನು ಅರಿತ ನಂತರ ವಿಮಾನ ನಿಲ್ದಾಣದವರು ಕೂಡ ಕೆಂಪೇಗೌಡರ ಹೆಸರಿನ ಥೀಮ್ ಪಾರ್ಕ್ ಅಭಿವೃದ್ಧಿಗೆಂದು 23 ಎಕರೆ ಜಮೀನನ್ನು ಬಿಟ್ಟು ಕೊಡಲು ಮುಂದಾದರು. ಇದು ಇನ್ನೊಂದು ಮಹತ್ತ್ವದ ಹೆಜ್ಜೆ. ಇದರ ಜತೆಗೆ ಪ್ರತಿಮೆಯು ಸುಂಟರಗಾಳಿ, ಉರಿವ ಬಿಸಿಲು, ಕುಂಭದ್ರೋಣ ಮಳೆ, ಕೊರೆವ ಚಳಿ, ನಡುಗಿಸುವ ಭೂಕಂಪ ಇಂತಹ ಯಾವುದೇ ಪ್ರಾಕೃತಿಕ ವಿಕೋಪಗಳಿಗೂ ಈಡಾಗದೆ, ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರಬೇಕು ಎನ್ನುವ ಉದ್ದೇಶದಿಂದ ಕೂಡ ಇದಕ್ಕೆ ಮುಂಜಾಗ್ರತಾ ಕ್ರಮಗಳನ್ನು ವೈಜ್ಞಾನಿಕವಾಗಿಯೇ ತೆಗೆದುಕೊಳ್ಳಲಾಗಿದೆ.
ಕೆಂಪೇಗೌಡರೆಂದರೆ, ಬರೀ ಬೆಂಗಳೂರಿಗೆ ಸೀಮಿತವಾಗಬಾರದು ಅಥವಾ ಹಳೆ ಮೈಸೂರಿಗೋ, ಒಕ್ಕಲಿಗ ಸಮುದಾಯಕ್ಕೋ ಮಿತಗೊಳ್ಳಬಾರದು. ಬದಲಿಗೆ, ಅವರ ಹೆಸರು ಇಡೀ ಕರ್ನಾಟಕದಲ್ಲಿ ಅನುರಣಿಸಬೇಕು ಮತ್ತು ಅದು ನಮ್ಮ ನಾಡನ್ನು ಏಕೋಭಾವದಲ್ಲಿ ಹಿಡಿದಿಡಬೇಕು ಎನ್ನುವುದು ನನ್ನ ಅಭಿಲಾಷೆಯಾಗಿದೆ. ಇದಕ್ಕಾಗಿ, ನನ್ನನ್ನೂ ಸೇರಿದಂತೆ ನಮ್ಮೆಲ್ಲರಲ್ಲೂ ಹೊಳೆದ ಆಲೋಚನೆ ಎಂದರೆ, ರಾಜ್ಯದ ಹಳ್ಳಿಹಳ್ಳಿಗೂ ಹೋಗಿ ಅಲ್ಲಿನ ಕೆರೆಕಟ್ಟೆ, ಕಲ್ಯಾಣಿ, ಪುಷ್ಕರಿಣಿ, ನದಿ, ದೇವಸ್ಥಾನ ಇತ್ಯಾದಿ ಪುಣ್ಯಸ್ಥಳಗಳಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ, ಅದೆಲ್ಲವನ್ನೂ ಈ ಪ್ರತಿಮೆಯ ಜಾಗದಲ್ಲಿ ಸಮರ್ಪಿಸಬೇಕೆನ್ನುವ ಸಂಗತಿ. ಇದಕ್ಕೆಂದೇ ಹದಿನೈದು ದಿನಗಳ ಅಭಿಯಾನವನ್ನೂ ನಡೆಸಲಾಯಿತು. ವಿಧಾನಸೌಧದ ಎದುರು ಮುಖ್ಯಮಂತ್ರಿಗಳಿಂದ ಚಾಲನೆ ಪಡೆದ ಈ ಅಭಿಯಾನವು ಪುನಃ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಪನ್ನಗೊಂಡಿದೆ.
ಹಾಗೆಯೇ, ಇನ್ನೊಂದೆಡೆ, ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಮಾಗಡಿ ತಾಲ್ಲೂಕಿನ ಕೆಂಪಾಪುರದ ಅಭಿವೃದ್ಧಿ, ಅವರಿಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸ್ಥಳಗಳ ಪ್ರವಾಸಿ ಸರ್‍ಕ್ಯೂಟ್ ಅಭಿವೃದ್ಧಿ ಇತ್ಯಾದಿಗಳಿಗೂ ಚಾಲನೆ ನೀಡಲಾಗಿದೆ. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷನಾಗಿ ಮತ್ತು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಈ ಪಾತ್ರವನ್ನು ನಿರ್ವಹಿಸುವ ಸದವಕಾಶ ನನ್ನದಾಗಿದ್ದು ಸುಕೃತವೇ ಸರಿ. ಈಗ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಬಾನೆತ್ತರಕ್ಕೆ ನಿಂತಿದೆ. ಇಂತಹ ಇನ್ನೊಂದು ಪ್ರತಿಮೆ ಜಗತ್ತಿನ ಯಾವ ನಗರದ ವಿಮಾನ ನಿಲ್ದಾಣದಲ್ಲೂ ಇಲ್ಲ. ಈ ಪ್ರತಿಮೆಯು ದೇಶಕಾಲಾತೀತವಾಗಿ ಕೆಂಪೇಗೌಡರ ಸಾಹಸ, ಶೌರ್ಯ, ನಿಸ್ವಾರ್ಥಗಳ ಕಥನವನ್ನು ಆಚಂದ್ರಾರ್ಕವಾಗಿ ಸ್ಫುರಿಸಲಿದೆ. ಇಂತಹ ಒಂದು ಕಾರ್ಯದಲ್ಲಿ ನನ್ನ ಕೈಲಾದಷ್ಟು ಯೋಗದಾನವನ್ನು ಮಾಡುವ ಅವಕಾಶವನ್ನು ಕರುಣಿಸಿದ್ದಕ್ಕಾಗಿ ನಾನು ನಾಡಿನ ಪ್ರತಿಯೊಬ್ಬರಿಗೂ ಆಭಾರಿಯಾಗಿದ್ದೇನೆ. ಇದು ನನಗೆ ಪುಳಕವನ್ನು ಕೊಟ್ಟಿದೆ; ಇದಕ್ಕಿಂತ ಹೆಚ್ಚಾಗಿ ಪುನೀತ ಭಾವವನ್ನು ನನ್ನಲ್ಲಿ ತಂದಿದೆ.
***
ಲೇಖಕರು ಉನ್ನತ ಶಿಕ್ಷಣ ಸಚಿವರು, ಉಪಾಧ್ಯಕ್ಷರು ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರ