ಕಟ್ಟರ್‌ವಾದಿಗಳ ಅವಕೃಪೆಗೆ ತುತ್ತಾಗಿ ಜೈಲಿನಲ್ಲಿರುವ ಹೋರಾಟಗಾರ್ತಿ
ಸ್ಟಾಕ್ ಹೋಮ್ (ಸ್ವೀಡನ್): ಮಲಾಲ ಅವರ ನಂತರ ಸ್ತ್ರೀ ಸಮಾನತೆಗಾಗಿ ಜೀವ ಪಣಕ್ಕಿಟ್ಟು ಹೋರಾಟ ನಡೆಸಿರುವ ಇರಾನ್ ದೇಶದ ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರು 2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿಂಸೆ, ರಕ್ತಪಾತ, ಲಿಂಗ ಸಮಾನತೆಗಾಗಿ ಇಡೀ ಜಗತ್ತು ಒಂದಾಗಿ ಹೋರಾಟ ನಡೆಸುತ್ತಿರುವ ಈ ದುರಿತ ಕಾಲದಲ್ಲಿ ನೊಬೆಲ್ ಪ್ರಶಸ್ತಿ ಕೊಡುವ ಸ್ವೀಡನ್ ದೇಶದ ರಾಯಲ್ ಸ್ವೀಡಿಷ್ ಅಕಾಡೆಮಿ, ನರ್ಗೆಸ್ ಮೊಹಮ್ಮದಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಗತ್ತಿನ ಶಾಂತಿ ಮತ್ತು ಸ್ವಾತಂತ್ರ್ಯ ಪ್ರೇಮಿಗಳಿಗೆ ಅಪಾರ ಸಂತೋಷ ಉಂಟು ಮಾಡಿದೆ.
ಇರಾನ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದಬ್ಬಾಳಿಕೆ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸರ್ವರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ನರ್ಗೆಸ್ ಮೊಹಮ್ಮದಿ ಅವರನ್ನು 2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಮಲಾಲ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಜಾಗತಿಕ ಗಣ್ಯರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.
ನರ್ಗೆಸ್ ಮೊಹಮ್ಮದಿ ಅವರು ಮೂಲತಃ ವಕೀಲರು. ಮಹಿಳೆಯರ ಹಕ್ಕುಗಳು ಹಾಗೂ ಮಾನವ ಹಕ್ಕುಗಳ ಪರವಾಗಿ ಅವರು ತಮ್ಮ ಜೀವಿತವನ್ನೇ ಮುಡುಪಾಗಿಟ್ಟಿದ್ದಾರೆ. ಆದರೆ, ಇರಾನಿನ ಮೂಲಭೂತವಾದಿ ಆಡಳಿತ ಅವರ ಹೋರಾಟವನ್ನು ಹತ್ತಿಕ್ಕುತ್ತಲೇ ಇದೆ.
ಈ ವರ್ಷದ ಶಾಂತಿ ಪ್ರಶಸ್ತಿಯು ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ತಾರತಮ್ಯ ಮತ್ತು ದಬ್ಬಾಳಿಕೆಯ ಸರಕಾರದ ಆಡಳಿತ ನೀತಿಗಳ ವಿರುದ್ಧ ಪ್ರದರ್ಶಿಸಿದ ಲಕ್ಷಾಂತರ ಹೋರಾಟಗಾರರನ್ನು ಪ್ರತಿನಿಧಿಸುತ್ತದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಹೇಳಿದೆ.
ಎಣೆ ಇಲ್ಲದಷ್ಟು ವೈಯಕ್ತಿಕ ನಷ್ಟದೊಂದಿಗೆ ಮೊಹಮ್ಮದಿ ಅವರು ಹೋರಾಟ ಮಾಡಿಕೊಂಡು ಬಂದಿದ್ದು, ಇರಾನ್ ಆಡಳಿತ 13 ಬಾರಿ ಅವರನ್ನು ಬಂಧಿಸಿದೆ. ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ. ಅಲ್ಲದೇ ಅವರಿಗೆ ಒಟ್ಟು 31 ವರ್ಷಗಳ ದೀರ್ಘ ಜೈಲುಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಿದೆ. ಮೊಹಮ್ಮದಿ ಅವರು ಇನ್ನೂ ಜೈಲಿನಲ್ಲಿಯೇ ಇದ್ದಾರೆ.