ಸೂಫಿ; ಮನುಷ್ಯತ್ವದ ಪರಾಕಾಷ್ಠೆ ಮತ್ತು ಅನನ್ಯ ಪ್ರೀತಿಯ ಪ್ರತೀಕ
by Dr. KM Nayaz Ahmed .
ಸೂಫಿ ಹಾಗೂ ಅದರ ಸಾಂಸ್ಕೃತಿಕ ಪರಂಪರೆಯೇ ಪ್ರೀತಿಯ ಹುಡುಕಾಟ. ಮನುಷ್ಯ ಮನುಷ್ಯನಲ್ಲಿ ನಿಜವಾದ ಪ್ರೀತಿಯ ಹುಡುಕಾಟ. ಸೂಫಿ ಎಂಬುದು ಮನುಷ್ಯನ ಮನಸ್ಸಿಗೆ ಸಂಬಂಧಿಸಿದ್ದು, ಮಾನವತ್ವಕ್ಕೆ, ಮನುಷ್ಯತ್ವಕ್ಕೆ ಒಳಪಟ್ಟಿದ್ದು.
ನಾನು ಎಂಬುದಕ್ಕೆ ಇಲ್ಲಿ ಸ್ಥಳವೇ ಇಲ್ಲ. ಎಲ್ಲವೂ ನೀನೇ. ಎಲ್ಲವೂ ನಿನ್ನದೆ ಎನ್ನುವ ಸಮರ್ಪಣಾಭಾವ. ಜಾತಿ, ಮತ, ಧರ್ಮ, ಗಡಿಗಳನ್ನು ಹೊರತಾದ ಒಂದು ನಿಷ್ಕಲ್ಮಷವಾದ ಮನುಷ್ಯ ಪ್ರೀತಿ, ಮಾನವತ್ವ, ಮಾನವ ಧರ್ಮಗಳ ಸಮ್ಮಿಳನವಾಗಿ ಈ ಸೂಫಿ ಪರಂಪರೆ ರೂಪ ಪಡೆದುಕೊಂಡಿದೆ.
ಇಸ್ಲಾಂ ಧರ್ಮದಲ್ಲಿನ ಒಂದು ಅಂಗವೇ ಸೂಫಿ. ಇಸ್ಲಾಂ ಧರ್ಮದ ಉದಯದ ನಂತರದಲ್ಲಿ ತಣ್ಣಗೆ ತೆರೆದುಕೊಂಡು ಇಡೀ ವಿಶ್ವವ್ಯಾಪಿಯಾಗಿ ಬೆಳೆದು ಬಂದುದುದೇ ಈ ಸೂಫಿ. ಇಸ್ಲಾಂ ಧರ್ಮದಲ್ಲಿನ ಹಾಗೆ ನಿಯಮಬದ್ಧ ಮತ್ತು ಕಟ್ಟಪ್ಪಣೆಯ ಆರಾಧನೆಯಿಲ್ಲದೆ ನಿಜದ ಪ್ರೇಮಿಯ ಅನನ್ಯ ಪ್ರೀತಿಯೇ ಇಲ್ಲಿ ಮೈಗೂಡಿಸಿ ನಿಂತಿದೆ. ತಾನು ನಂಬಿದ ಆ ಈಶ್ವರನ ಬಗೆಗಿನ ಅನನ್ಯವಾದ ಪ್ರೀತಿ ಇಲ್ಲಿ ಅನುರಣನವಾಗುತ್ತದೆ. ಇಲ್ಲಿ ಆಚರಣೆಗೆ ಅವಕಾಶಗಳಿರದೆ ಕೇವಲ ಮತ್ತು ಕೇವಲ ಅಲ್ಲಾಹನ ಬಗೆಗೆ ನಿಷ್ಕಲ್ಮಶ ಮತ್ತು ಏಕನಿಷ್ಠ ಪ್ರೇಮ ಮಾತ್ರ ಕಾಣಿಸಿಕೊಳ್ಳುತ್ತದೆ.
ಸೂಫಿ ಪಂಥವು ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಗಂಭೀರ ಪರಿಣಾಮವನ್ನು ಉಂಟು ಮಾಡಿದೆ. ಈ ಪಂಥದ ಮೂಲ ದೃಷ್ಟಿಕೋನ ದೇಹದಂಡನೆ. ಆ ಮೂಲಕ ತಾನು ತಲುಪುವ ಗಮ್ಯವನ್ನು ಪಡೆಯುವುದು. ಅಂದರೆ ಅಲ್ಲಾಹನಲ್ಲಿ ಐಕ್ಯವಾಗುವುದು. ಆತನು ಸಿಗುವವರೆಗೆ ನಿರಂತರವಾಗಿ ಹುಡುಕಾಡುವುದು. ಆರಾಧಿಸುವುದು, ಆತನಿಗಾಗಿ ಪರಿತಪಿಸುವುದು, ಬದುಕಿದ ಸಮಯದಲ್ಲಿಯೇ ಎಲ್ಲವನ್ನೂ ತ್ಯಜಿಸಿ ಬಿಡುವುದು, ಮೋಹ ಮಾಯೆಗಳಿಂದ ಹೊರಗೆ ಬಂದು ಬಿಡುವುದು, ಜಗತ್ತಿನ ಎಲ್ಲಾ ಸುಖಗಳನ್ನು ತ್ಯಜಿಸಿ ಎಲ್ಲಾ ಸಂಬಂಧಗಳನ್ನು ಹರಿದುಕೊಂಡು, ಬಡತನವನ್ನು ಸ್ವೀಕರಿಸಿ ಏಕಾಂತದಲ್ಲಿ ಕಠೋರ ತಪಶ್ಚರ್ಯವನ್ನು ಪಾಲಿಸುವುದು ಸೂಫಿಗಳಿಗೆ ಬಹು ಇಷ್ಟವಾದಂತೆ ಕಾಣುತ್ತದೆ.
“ರಾತ್ ಕೆ ಅಂಧೇರೋ ಮೆ ಅಕೇಲಾ ಬೈಠ್ ಕರ್ ಆಪ್ ಕಿ ಯಾದ್ ಮೆ ರೋಲೆನಾ ಮೇರಿ ಇಬಾದತ್ ಹೈ” (ಸೂಫಿ ಕಾವ್ಯ) ..ಅಂದರೆ “ರಾತ್ರಿಯ ಕಾರ್ಗತ್ತಲಿನಲ್ಲಿ ಏಕಾಂಗಿಯಾಗಿ ಕುಳಿತುಕೊಂಡು ನಿನ್ನನ್ನು ನೆನಪಿಸಿಕೊಂಡು ಅಳುವುದೇ ನನ್ನ ಪ್ರಾರ್ಥನೆ” ಎನ್ನುವ ಈ ಸಾಲುಗಳು ಒಟ್ಟಾರೆಯಾಗಿ ನಿಜದ ಸೂಫಿ ಏಕಾಂತವನ್ನು, ಏಕತಾನತೆಯನ್ನು ಬಯಸುತ್ತಾನೆ ಎಂದಾಯಿತು.
“ಜಾಮ್ ಪೆ ಜಾಮ್ ಪೀನೆ ಸೆ ಕ್ಯಾ ಫಾಯಿದಾ
ಸುಬಹ್‌ತಕ್ ಏ ಸಾರಿ ಉತರ್ ಜಾಯೆಗಿ
ತೇರಿ ನಝರೋಂ ಸೆ ಪೀ ಹೈ ಖುದಾ ಕಿ ಖಸಂ
ಉಮರ್ ಸಾರಿ ನಶೆಮೆ ಗುಝರ್ ಜಾಯೆಗಿ……
ಸಾಖಿ ತೇರಿ ನಝರೇ ಸಲಾಮತ್ ರಹೆ…”
(ಉಸ್ತಾದ್ ನುಸ್ರತ್ ಫತೇ ಅಲಿ ಖಾನ್ ಸಾಹೇಬರ ಸೂಫಿ ಸಂಗೀತದ ಒಂದು ತುಣುಕು)
(“ಮತ್ತೆ ಮತ್ತೆ ಕುಡಿಯುವುದರಿಂದ ಉಪಯೋಗವಾದರೂ ಏನಿದೆ?
ಮುಂಜಾನೆಯವರೆಗೆ ಎಲ್ಲವೂ ಇಳಿದು ಹೋಗಲಿದೆ
ನಿನ್ನ ನೋಟಗಳಿಂದ ಪಾನ ಮಾಡಿದ್ದೇನೆ ಆ ದೇವರಾಣೆಗೂ
ಇಡೀ ಜೀವನ ನಶೆಯಲ್ಲಿ ಕಳೆದು ಹೋಗಲಿದೆ…
ಸಖಿ ನಿನ್ನ ನೋಟಗಳು ಕ್ಷೇಮವಾಗಿರಲಿ…”)
ಇಲ್ಲಿ ಸೀಸೆಯಲ್ಲಿನ ನಶೆ ಹೆಚ್ಚುಕಮ್ಮಿ ಸ್ವಲ್ಪ ಹೊತ್ತಿನಲ್ಲಿಯೇ ಇಳಿದುಹೋಗಲಿದೆ. ಆದರೆ ನಿನ್ನನ್ನು (ಅಲ್ಲಾಹನನ್ನು) ಕುಡಿದಿದ್ದೇನೆ. ಒಮ್ಮೆ ಮಾತ್ರ ನಿನ್ನನ್ನು ದರ್ಶನ ಮಾಡಿದ್ದೇನೆ. ಆ ಸೌಂದರ್ಯದ ನಶೆಯಲ್ಲಿಯೇ ಜೀವನವೆಲ್ಲವೂ ನಾನು ಕಳೆದುಬಿಡುತ್ತೇನೆ ಎನ್ನುವ ಉತ್ಕಟ ಉನ್ಮಾದತೆ ಇಲ್ಲಿ ಪ್ರಮುಖವಾಗಿ ನಿಲ್ಲುತ್ತದೆ. ಇಲ್ಲಿ ನಮಾಜ್, ರೋಜಾ, ಜಿಕ್ರ್ ಮೊದಲಾದವುಗಳ ಉಲ್ಲೇಖವಿಲ್ಲ, ಅದನ್ನು ಮಾಡಿ ನಾನು ಸ್ವರ್ಗ ಸಾಧಿಸುತ್ತೇನೆ ಎಂಬ ಭಾವವಿಲ್ಲ, ನರಕಕ್ಕೆ ಹೆದರಿ ನಾನು ನಮಾಜು ಮಾಡುತ್ತೇನೆ ಎನ್ನುವ ಪ್ರಾರ್ಥನೆಯೂ ಇಲ್ಲ, ಇಲ್ಲಿ ಇರುವುದು ಕೇವಲ ಮತ್ತು ಕೇವಲ ಅಲ್ಲಾಹನ ಬಗೆಗಿನ ಪ್ರೀತಿ ಮಾತ್ರ. ಆ ಪ್ರೀತಿಯನ್ನು ಪಡೆದುಕೊಳ್ಳಲು ಆತ ತನ್ನ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಏಕಾಂಗಿತನವನ್ನು ಅಪ್ಪಿಕೊಳ್ಳುತ್ತಾನೆ. ಇಹ ಮತ್ತು ಪರ ಎರಡರಲ್ಲಿಯೂ ನಂಬಿಕೆ ಮತ್ತು ವಿಶ್ವಾಸವಿರುವುದಿಲ್ಲ, ಆತನಿಗೆ ಕಾಣಿಸುವುದು ಕೇವಲ ಕಾಣಿಸುವುದು ಅಲ್ಲಾಹನು ಮಾತ್ರ. ಅದಕ್ಕಾಗಿಯೇ ಆತನು ಆತನ ಅನನ್ಯ ಪ್ರೇಮವನ್ನು ಪಡೆಯಲು ಸುತ್ತಾಡುತ್ತಲೇ ಇರುತ್ತಾನೆ, ಅಲೆದಾಡುತ್ತಲೇ ಇರುತ್ತಾನೆ. ಹುಡುಕುತ್ತಲೇ ಇರುತ್ತಾನೆ.
“ಅಗರ್ ತುಮ್ ಕಹೋ ತೊ ಮೈ ಖುದ್ ಕು ಭುಲಾದು
ತುಮ್ಹೆ ಭೂಲ್ ಜಾನೆ ಕಿ ತಾಖತ್ ನಹಿ” (ನುಸ್ರತ್ ಫತೇ ಅಲಿ ಖಾನ್ ಅವರ ಘಝಲ್)
ನೀನು ನುಡಿದರೆ ನನ್ನನ್ನೇ ನಾನು ಮರೆತುಬಿಡುತ್ತೇನೆ
ಆದರೆ ನಿನ್ನ ಮರೆತು ಹೋಗುವ ಶಕ್ತಿ ನನಗಿಲ್ಲ…
ಇದು ಸೂಫಿಯ ನಿಜ ತತ್ವವಾಗಿದೆ. ಆತನು ತನ್ನನನ್ನು ತಾನು ಸಂಪೂರ್ಣವಾಗಿ ತನ್ನನ್ನು ತಾನು ಮರೆತು ಹೋಗಲು ಸಿದ್ಧವಾಗುತ್ತಾನೆ. ಸಿದ್ಧವಾಗುವುದು ಇರಲಿ ಮರತೇ ಹೋಗುತ್ತಾನೆ. ತನ್ನನ್ನು ಸಂಪೂರ್ಣವಾಗಿ ತಾನು ಯಾರೆಂದು ಕರೆದುಕೊಳ್ಳುವಷ್ಟರ ಮಟ್ಟಿಗೆ ಮರೆತು ಹೋಗುತ್ತಾನೆ. ತನ್ನಲ್ಲೇ ತನ್ನನ್ನು ಹುಡುಕುವಷ್ಟರ ಮಟ್ಟಿಗೆ ಮರೆತು ಹೋಗುತ್ತಾನೆ.
ಹಮ್ ಸೆ ಪೂಛೋ ಮೊಹೊಬ್ಬತ್ ಕಿ ದೀವಾನಗಿ
ಓ ಪತಾ ಪೂಛ್ ತೆ ಥೇ ಪತಾ ಕಿಸಿ ಕಾ ಕಭಿ
ಲಾ ಪತಾ ಹೋಗಯೆ ದೇSತೆ ದೇಖತೆ
ಏ ಹಯ್ ದುನಿಯಾ ಯಹಾ ಕಿತನೆ ಹೈ ಎಹ್ ವಫಾ
ಬೇ ವಫಾ ಹೋಗಯೆ ದೇಖತೆ ದೇಖತೆ”
“ನನ್ನನ್ನು ಕೇಳು ಪ್ರೀತಿಯ ಹುಚ್ಚು ಏನೆಂದು
ಹಿಂದೆ ಅವರು ಕಾಣೆಯಾದವರ ಬಗ್ಗೆ ಕೇಳುತ್ತಿದ್ದರು
ಆದರೆ ಅವರೇ ಕಾಣೆಯಾಗಿ ಹೋದರು ನೋಡುತ್ತಾ ನೋಡುತ್ತಾ.
ಇದು ಪ್ರಪಂಚ ಇಲ್ಲಿ ಎಲ್ಲರೂ ವಿಧೇಯರೆ
ಆದರೆ ಅವಿಧೇಯರಾಗಿ ಹೋದರು ನೋಡುತ್ತಾ ನೋಡುತ್ತಾ..”
ಆಧ್ಯಾತ್ಮಿಕ ಜೀವನ ಪ್ರಗತಿಯನ್ನು ಸೂಫಿ ಪಂಥದಲ್ಲಿ ‘ಮಾರ್ಗ’ ಎನ್ನುತ್ತಾರೆ. ಹಾಗೆಯೇ ಆ ಪ್ರಯಾಣಿಕನನ್ನು ‘ಸಾಲಿಖ್’ ಎನ್ನುತ್ತಾರೆ. ‘ಸಾಲಿಖ್’ಗೆ ಪರಮೇಶ್ವರನ ಜ್ಞಾನ ಅಂದರೆ ‘ಮಾರಿಫತ್’ ಮುಖ್ಯವಾಗುತ್ತದೆ. ಆ ಮಾರಿಫತ್ ಪಡೆಯಲು ಸೂಫಿಯಾದವನು ಬೇರೆ ಬೇರೆ ಆಧ್ಯಾತ್ಮಿಕ ಸ್ಥಾನಗಳಿಂದ ಮುನ್ನಡೆಯಬೇಕಾಗುತ್ತದೆ. ಆ ಬೇರೆ ಬೇರೆ ಸ್ಥಾನಗಳೇ ‘ಮುಖಾಮಾತ್’. ಈ ‘ಮುಖಾಮಾತ್’ಗಳಿಂದ ಸೂಫಿ ಸಾಗುತ್ತಾ ಸಾಗುತ್ತಾ ಅಲ್ಲಾಹನ ನಿಷ್ಕಲ್ಮಶ ಪ್ರೀತಿಯ ಗಳಿಕೆಯಲ್ಲಿ ಕಡೆಗೆ ತನ್ನನ್ನೇ ತಾನು ಮರೆತು ಹೋಗಿ, ಸೊರಗಿ ಹೋಗಿ ಕಡೆಗೆ ಆತನಲ್ಲಿ ಕರಗಿ ಹೋಗುವ ಅನನ್ಯ ಪ್ರಕ್ರಿಯೆಯನ್ನು ‘ಫನಾಫಿಲಾ’ ಎಂದು ಕರೆಯಲಾಗುತ್ತದೆ.
ಹೀಗೆ ‘ಸಾಲಿಖ್’ ವಿವಿಧ ‘ಮುಖಾಮಾತ್’ಗಳ ಮೂಲಕ ಸಾಗಿ ‘ಮಾರಿಫತ್’ ಪಡೆದು ಕಡೆಗೆ ಆ ಪರಮೇಶ್ವರನ್ನಲಿ ಲೀನವಾಗುವ ‘ಫನಾಫಿಲಾ’ ಆಗುವವರೆಗಿನ ಏಳು ಅವಸ್ಥೆಗಳಲ್ಲಿ ಬಹಳ ಮುಖ್ಯವಾದುದು ‘ಇಷ್ಕ್’ ಎಂದರೆ ಪ್ರೀತಿ. ಇಲ್ಲಿ ಪರಮೇಶ್ವರನ ಕೃಪೆಯಿಂದ ಆತ್ಮಕ್ಕೆ ಪರಮೇಶ್ವರನ ವಿಷಯದಲ್ಲಿ ಬಹಳವಾಗಿ ಆಕರ್ಷಣೆಯು ಉಂಟಾಗುತ್ತಿರುತ್ತದೆ. ಈ ಆಕರ್ಷಣೆಯನ್ನು ಆ ಸೂಫಿಯು ಮತ್ತೆ ಮತ್ತೆ ನೋಡಲು ಬಯಸುತ್ತಿರುತ್ತಾನೆ. ಆತನ ಆ ಪ್ರಕಾಶಮಾನವನ್ನು ನೋಡುವ ತವಕ, ನೋಡುವ ಹಂಬಲ ದಿನದಿಂದ ದಿನಕ್ಕೆ ಆತನಲ್ಲಿ ಉನ್ಮಾದದ ಸ್ಥಿತಿಯತ್ತ ಕೊಂಡೊಯುತ್ತದೆ. ಆತನ ಆ ಪ್ರಕಾಶಮಾನವನ್ನು ಪದೇ ಪದೇ ನೋಡಲು ಹಂಬಲಿಸುವ ಆ ಸೂಫಿಯು ಅದಕ್ಕಾಗಿ ನಿರಂತರ ಹುಡುಕಾಟವನ್ನು ಮಡುತ್ತಾನೆ. ನಿರಂತರವಾಗಿ ನಡೆಯುತ್ತಲೇ ಇರುತ್ತಾನೆ. ಆ ಪ್ರೀತಿಯನ್ನು ಪಡೆಯಲು ಕಡೆಗೆ ತನ್ನನ್ನೇ ತಾನು ಮರೆತುಬಿಡುತ್ತಾನೆ, ದೈಹಿಕ ವ್ಯಮೋಹ, ದೇಹದ ಮೇಲಿನ ವ್ಯಾಮೋಹ, ದೈಹಿಕ ಸೌಂದರ್ಯ, ತನ್ನನ್ನು ಸುಂದರವಾಗಿಸಿಕೊಳ್ಳುವ ಪ್ರಕ್ರಿಯೆ, ಉತ್ತಮನಾಗಿ ಕಾಣಿಸಿಕೊಳ್ಳುವ ಸ್ಥಿತಿ ಎಲ್ಲವನ್ನೂ ಮರೆಯುತ್ತಾನೆ. ಹುಚ್ಚನಂತಾಗುತ್ತಾನೆ, ಅಲೆದಾಡುತ್ತಾನೆ, ಹುಡುಕುತ್ತಾನೆ. ಆತನಿಗೆ ಬೇಕಿರುವುದು, ನೋಡಬೇಕಿರುವುದು, ಕಾಣಬೇಕಿರುವುದು ಕೇವಲ ಮತ್ತು ಕೇವಲ ಆ ಪರಮೇಶ್ವರನ ದಿವ್ಯ ಸ್ವರೂಪ ಮಾತ್ರ. ಅದಕ್ಕಾಗಿಯೇ ಈ ಹೋರಾಟ, ಈ ಓಡಾಟ. ಇದರ ಹಿಂದೆಯೇ ಆತ ನಡೆಯುತ್ತಾ ನಡೆಯುತ್ತಾ ಕಡೆಗೆ ತನ್ನನ್ನೇ ಇಲ್ಲವಾಗಿಸುತ್ತಾನೆ.
“ಉನ್ ಕಿ ನಝರೋನೆ ಕುಛ್ ಐಸಾ ಜಾದೂ ಕಿಯಾ
ಲುಟ್‌ಗಯೆ ಹಮ್ ತೊ ಪೆಹಲಿ ಮುಲಾಖಾತ್ ಮೆ”
ಅವರ ನೋಟಗಳು ಎಂತಹಾ ಜಾದು ಮಾಡಿದವು
ನಾನು ಬರಿದಾಗಿ ಹೋದೆ ಮೊದಲ ಭೇಟಿಯಲ್ಲಿಯೇ…
ಪರಮೇಶ್ವರನ ಆ ಒಂದೇ ಒಂದು ನೋಟ ಅದರಲ್ಲಿಯೂ ಮೊದಲ ನೋಟ ಸೂಫಿಯನ್ನು ಇನ್ನಿಲ್ಲವಾಗಿಸುತ್ತದೆ. ಆತ ಎಲ್ಲವನ್ನು ಆ ಮೊದಲ ನೋಟಕ್ಕೆ ಕಳೆದುಕೊಳ್ಳುತ್ತಾನೆ. ‘ಇಷ್ಕ್’ ನಿಂದ ತುಸು ಮುಂದೆ ಹೋಗಿ ‘ವಜದ್’ ಅಂದರೆ ಉನ್ಮಾನವಸ್ಥೆಗೆ ತಲುಪುತ್ತಾನೆ. ಇಲ್ಲಿ ಪರಮಾತ್ಮನ ಧ್ಯಾನದಿಂದ ಭಕ್ತನಲ್ಲಿ ಉನ್ಮಾದದ ಅವಸ್ಥೆಯು ಪ್ರಾಪ್ತವಾಗುತ್ತದೆ. ಈ ನೆಲೆಯಲ್ಲಿ ಇಂತಹಾ ಅವಸ್ಥೆಯನ್ನು ಪ್ರಾಪ್ತಗೊಳಿಸಿಕೊಳ್ಳುವುದಕ್ಕಾಗಿ ಸೂಫಿಯು ಧ್ಯಾನ ಧಾರಣೆ ಮೊದಲಾದವುಗಳನ್ನು ಮಾಡುತ್ತಿರುತ್ತಾನೆ. ಪ್ರೊ.ನಿಕೋಲ್ಸನ್‌ರ ಅಭಿಪ್ರಾಯದಂತೆ ಸೂಫಿಸಂನ ಮೂಲ ಇರುವುದು ಒಂದು ತತ್ವದ ಮೇಲೆಯೇ. ಅದೆಂದರೆ ಆತ್ಮದ ಅರಿವು ಇಲ್ಲವಾಗುವುದು ಮತ್ತು ಅನಂತರ ಪರಮೇಶ್ವರನ ಸಾಕ್ಷಾತ್ಕಾರವಾಗುವುದು. ಉನ್ಮವಾಸ್ಥೆಯಿಂದ ಆತ್ಮಕ್ಕೆ ಪರಮಾತ್ಮನ ಸಂಬಂಧವು ಸಾಧ್ಯವಾಗುತ್ತದೆ.
“ಸತಾ ತೆ ಹೋ ದಿನ್ ರಾತ್ ಜಿಸ್ ತರಹಾ ಮುಝ್ ಕು
ಕಿಸಿ ಘೈರ್ ಕು ಯೂ ಸತಾಕರ್ ತೊ ದೇಖೋ”
ಕಾಡಿಸುತ್ತೀಯಾ ಹಗಲು ಮತ್ತು ರಾತ್ರಿ ನನಗೆ
ಯಾರಾದರು ಇತರನಿಗೆ ಕಾಡಿಸು ನೋಡು….
ಸೂಫಿ ಮತ್ತು ಅಲ್ಲಾಹುವಿನ ನಡುವಿನ ಆತ್ಮ ಸಂಬಂಧಗಳು ಗಟ್ಟಿಯಾಗುತ್ತಾ ಹೋಗುತ್ತವೆ. ಸೂಫಿ ಅಲ್ಲಾಹುವಿನೊಂದಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಾನೆ. ತನ್ನೆಲ್ಲವನ್ನೂ ಆತನಿಗಾಗಿ ಸಮರ್ಪಿಸಿಕೊಂಡ ಆತ ಈಗ ತನ್ನ ಈಶ್ವರನೊಂದಿಗೆ ಮುಕ್ತವಾಗಿ ಮಾತನಾಡುತ್ತಾನೆ. ಆ ಪ್ರಕಾಶ ಮತ್ತೆ ಮತ್ತೆ ನೋಡುವ ತವಕದಲ್ಲಿ ದರ್ಶನ ಪ್ರಕಟಗೊಳ್ಳದ ಬಗೆಗೆ ಬೇಸರಿಸಿಕೊಳ್ಳುತ್ತಾನೆ, ಮುನಿಸಿಕೊಳ್ಳುತ್ತಾನೆ. ನಾನು ನಿನ್ನವನು. ನನಗೇ ಈ ರೀತಿ ಕಾಡಿಸುತ್ತಿದ್ದೀಯ. ಹೌದು ಬಿಡು, ನಾನು ನಿನ್ನವನಾಗಿದ್ದರಿಂದಲೇ ನೀನು ನನ್ನನ್ನು ಕಾಡಿಸುತ್ತಿದ್ದೀಯ. ಆದರೆ ಪರರಿಗೆ ಹೀಗೆ ಮಾಡುತ್ತೀಯ ಎನ್ನುವುದರ ಮೂಲಕ ತಾನು ಆತನಿಗೆ ಎಷ್ಟು ಹತ್ತಿರ ಎಂದು ತೋರಿಸುತ್ತಾನೆ.
ಮತ್ತೂ ಪ್ರಶ್ನಿಸುತ್ತಾನೆ.
“ಸೋಚ್ ತಾ ಹುಂ ಕಿ ಒ ಕಿತನೆ ಮಾಸೂಮ್ ಥೇ
ಕ್ಯಾಸೆ ಕ್ಯಾ ಹೋಗಯೆ ದೇಖತೆ ದೇಖತೆ”
ಯೋಚಿಸುತ್ತೇನೆ ಅವರು ಎಷ್ಟು ಮುಗ್ಧರಾಗಿದ್ದರು
ಹೇಗಿದ್ದವರು ಹೇಗಾದರು ನೋಡುತ್ತಾ ನೋಡುತ್ತಾ…
ನಾನು ನಿನ್ನನ್ನು ತುಂಬಾ ಮುಗ್ಧ ಎಂದುಕೊಂಡಿದ್ದೆ. ಆದರೆ ನೀನು ಹೇಗಿದ್ದವನು ಹೇಗಾಗಿ ಹೋದೆಎನ್ನುವ ಈ ಮಾತುಗಳು ಸೂಫಿಗಳ ಆಂತರ್ಯವನ್ನು ಬಿಚ್ಚಿಡುತ್ತಾ ಹೋಗುತ್ತದೆ. ತನ್ನ ಪ್ರೀತಿ ದಕ್ಕಲಿಲ್ಲ ಎಂದಾಗ ಸಹಜವಾಗಿ ಮೂಡಿ ಬರುವ ಮುನಿಸು ಕಾಣಿಸಿಕೊಳ್ಳುತ್ತದೆ. ಆದರೆ ಆ ಮುನಿಸು ತೀರಾ ಕಡಿಮೆ ಹೊತ್ತು ಮಾತ್ರ. ಮತ್ತೆ ತನ್ನ ಪ್ರೀತಿಯ ಹುಡುಕಾಟದಲ್ಲಿ ಆ ಸೂಫಿ ಮುಳಗುತ್ತಾನೆ. ಕೇವಲ ಮತ್ತು ಕೇವಲ ಪರಮಾತ್ಮನೊಬ್ಬನಿಗೇ ಶರಣಾಗುತ್ತಾನೆ. ಆತನ ಗುಣಗಾನ ಮಾಡುತ್ತಾನೆ. ಅದೊಂದೇ ಏಕ ಮೇವ ಸತ್ಯ ಎನ್ನುತ್ತಾನೆ. ಪರಮಾತ್ಮನಲ್ಲದೆ ಬೇರೊಂದರ ಮೆಲೆ ನಿಷ್ಠೆ ಹೊಂದದಂತಾಗುತ್ತಾನೆ. ಆತನ ಹುಡುಕಾಟ ನಿರಂತರವಾಗುತ್ತದೆ.
ಅಂತಿಮವಾಗಿ ಆತ…
“ಮುಜ್ಹೆ ಏಕ್ ದಫಾ ಅಪನಾ ಕೆಹೆಕೆ ಪುಕಾರೊ
ಬಸ್ ಇಸ್ಕೆ ಸಿವಾ ಕೊಯಿ ಹಸ್ರತ್ ನಹೀ”
ನನ್ನನ್ನು ಒಂದು ಬಾರಿ ನಿನ್ನವನೆಂದು ಕರೆದು ಬಿಡು
ಇದಕ್ಕಿಂತ ಮಿಗಿಲಾದ ಆಸೆ ಮತ್ತೊಂದು ಇಲ್ಲ…”
ಇಲ್ಲಿ ಕೇವಲ ಒಂದು ಆಸೆ ಒಂದೇ ಒಂದು ಆಸೆ ವ್ಯಕ್ತವಾಗುತ್ತದೆ. ಅದೆಂದರೆ ‘ನಾನು ನೀನಾನುಗುವುದು’ ಅಂದರೆ ‘ನೀನೆಂಬ ನಾನಾಗುವುದು’ ನಿನ್ನಲ್ಲಿ ನಾನಾಗುವುದು. ನಿನ್ನಲ್ಲಿ ಲೀನವಾಗುವುದು. ಅದುವೇ ‘ಫನಾ’. ಅಲ್ಲಾಹುವಿನಲ್ಲಿ ಲೀನವಾಗುವುದು. ಮಿಲನದ ಸ್ಥಿತಿಯಲ್ಲಿ ಭಕ್ತನ ಹೃದಯವು ಸಮಾಧಾನದಿಂದ ಪರಿಪೂರ್ಣತೆಯನ್ನು ಸಾಧಿಸುವುದು. ಪರಿಪೂರ್ಣತ್ವವನ್ನು ಸಾಧಿಸುವುದು. ಆ ಮೂಲಕ ತನ್ನ ಪ್ರೀತಿಯನ್ನು ಸಾಧಿಸಿಕೊಳ್ಳುವುದು.
***
ಸೂಫೀ ವಿಚಾರವಾಗಿ ಮನೋಜ್ಞವಾಗಿ ತಿಳಿಸಿದ್ದೀರಿ ಸಾರ್. ನಿಮ್ಮ ಬರವಣಿಗೆ ಹೀಗೆ ಸಾಗಲಿ ಅನವರತಾ…..
ಅದ್ಬುತವಾದ ಲೇಖನ ಸರ್
ಈ ಸೂಫಿ ಸಂತರ ಕಥೆಗಳು ಮತ್ತು ಆಚರಣೆಗಳು
ಬಹಳ ಚೆನ್ನಾಗಿದೆ.ಇದೆ ನಿಜವಾದ ಭಕ್ತಿ. ದೇವರನ್ನು
ಸೇರುವ ವಿಧಾನ