ಪಂಚರಾಜ್ಯ ಚುನಾವಣೆ, ಲೋಕಸಭೆ ಸಮರದಲ್ಲಿ ಹಿನ್ನೆಡೆಯಾಗುವ ಆತಂಕ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪುತ್ರನ ವರ್ಗಾವಣೆ ದಂಧೆಗಳ ಬಗ್ಗೆ ನಿರಂತರವಾಗಿ ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಇಡೀ ಮಂತ್ರಿಮಂಡಲವೇ ಗುಂಪು ಗುಂಪಾಗಿ ಮುಗಿ ಬಿದ್ದಿರುವುದು ಒಂದೆಡೆಯಾದರೆ, ಇಂಥ ಆಕ್ರಮಣಕಾರಿ ದಾಳಿಯೇ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದೆ.
ಪಂಚರಾಜ್ಯಗಳ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ, ಕರ್ನಾಟಕದ ರಾಜಕೀಯ ಈ ಬೆಳವಣಿಗೆಗಳನ್ನೇ ಅಸ್ತ್ರಗಳನ್ನಾಗಿ ಮಾಡಿಕೊಂಡಿದೆ.
ಮತ್ತೊಂದೆಡೆ, ನೆರೆಯ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹಾಗೂ ಮತ್ತವರ ಬಿಆರ್ʼಎಸ್ ಪಕ್ಷವೂ ಸಿದ್ದರಾಮಯ್ಯ ಸರಕಾರದ ವೈಫಲ್ಯಗಳ ಬಗ್ಗೆಯೇ ನಿರಂತರ ವಾಗ್ದಾಳಿ ನಡೆಸುತ್ತಿದೆ.
ಬಹುಮುಖ್ಯವಾಗಿ; ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪಗಳನ್ನೇ ಬಿಜೆಪಿ ನಾಯಕರು; ತೆಲಂಗಾಣ, ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ತಾನದಲ್ಲಿ ಕಾಂಗ್ರೆಸ್ ವಿರುದ್ಧ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಈಶಾನ್ಯ ರಾಜ್ಯದ ವಿಜೋರಂನಲ್ಲೂ ಕರ್ನಾಟಕದ ಲೋಡ್ ಶೆಡ್ಡಿಂಗ್, ಕಾಸಿಗಾಗಿ ಪೋಸ್ಟಿಂಗ್, ಗುತ್ತಿಗೆದಾರರಿಂದ ಕಲೆಕ್ಷನ್ ನಂಥ ವಿಷಯಗಳೇ ಭಾರೀಯಾಗಿ ಪ್ರಸ್ತಾಪ ಆಗುತ್ತಿವೆ. ಇದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಇರಿಸುಮುರಿಸು ಉಂಟು ಮಾಡಿದ್ದರೆ, ಬಿಜೆಪಿ ಈ ವಿಷಯಗಳನ್ನೇ ಭಾರೀ ಪ್ರಮಾಣದಲ್ಲಿ ಜನರಿಗೆ ತಿಳಿಸುತ್ತಿದೆ. ಅಲ್ಲದೆ; ರಾಷ್ಟ್ರ ರಾಜಧಾನಿ ದೆಹಲಿ ಮಾಧ್ಯಮಗಳಲ್ಲಿ, ರಾಷ್ಟ್ರೀಯ ವಾಹಿನಿಗಳಲ್ಲಿ ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪಗಳು ಭಾರೀ ಪ್ರಚಾರ ಪಡೆಯುತ್ತಿವೆ.
ಈ ನಕಾರಾತ್ಮಕ ಪ್ರಚಾರ ಉತ್ತರ ಭಾರತದ ರಾಜ್ಯದಗಳಲ್ಲಿ ಕಾಂಗ್ರೆಸ್ ನಾಗಾಲೋಟಕ್ಕೆ ಬ್ರೇಕ್ ಹಾಕುವ ರೀತಿಯಲ್ಲಿವೆ. ಇದಕ್ಕೆಲ್ಲಾ ಆದಷ್ಟು ಬೇಗ ಬ್ರೇಕ್ ಹಾಕಲು ರಾಹುಲ್ ಗಾಂದಿ ಅವರು ತಮ್ಮ ಸಲಹಾ ತಂಡಗಳನ್ನು ಕೋರಿದ್ದಾರೆ ಎಂದು ಅತ್ಯಂತ ವಿಶ್ವಸನೀಯ ಮೂಲಗಳು ಈ ವೆಬ್ ತಾಣಕ್ಕೆ ತಿಳಿಸಿವೆ.
ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆಂದು ಕುಮಾರಸ್ವಾಮಿ ಅವರು ಕಳೆದ ಹಲವಾರು ದಿನಗಳಿಂದ ಸತತವಾಗಿ ಆರೋಪ ಮಾಡುತ್ತಿರುವುದು, 4 ದಿನಗಳ ಹಿಂದೆ ಅದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಬಹಿರಂಗ ಮಾಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಇಕ್ಕಟ್ಟು ಉಂಟು ಮಾಡಿದೆ.
ಗ್ಯಾರಂಟಿ ಯೋಜನೆ ಜನಪ್ರಿಯತೆ ಮಂಕಾಗುವ ಆತಂಕ
ಒಂದೆಡೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದೆ. ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಮಾಡುತ್ತಿರುವ ಗುರುತರ ಆರೋಪಗಳು ಜನರಿಗೆ ತಪ್ಪು ಸಂದೇಶ ರವಾನೆ ಮಾಡಲಿವೆ ಎಂದು ಕಾಂಗ್ರೆಸ್ ಹೈಕಮಾಂಡ್ ಆತಂಕಗೊಂಡಿದೆ. ಇದರಿಂದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಮಂಕಾಗಲಿದೆ ಎಂಬ ಮಾಹಿತಿಯನ್ನು ಕೈ ಪಕ್ಷದ ಚುನಾವಣಾ ತಜ್ಞರು ನೀಡಿದ್ದಾರೆ ಎಂದು ಸಿಕೆನ್ಯೂಸ್ ನೌ ಗೆ ಗೊತ್ತಾಗಿದೆ.
ಕರ್ನಾಟಕದಲ್ಲಿ ಗ್ಯಾರಂಟಿ, ಜಾತಿ ಧರ್ಮಗಳ ಧ್ರುವೀಕರಣದಿಂದ ಬೀಗುತ್ತಿರುವ ಕಾಂಗ್ರೆಸ್; ಪಂಚರಾಜ್ಯ ಚುನಾವಣೆಯಲ್ಲಿ ʼಕರ್ನಾಟಕ ಮಾದರಿʼಯನ್ನೇ ಅನುಸರಿಸುತ್ತಿದೆ. ಅಲ್ಲದೆ; ಲೋಕಸಭೆ ಚುನಾವಣೆಗೂ ಇದೇ ಸೂತ್ರವನ್ನೇ ಪಾಲಿಸಲು ರಾಹುಲ್ ಗಾಂಧಿ ಅವರು ಉದ್ದೇಶಿಸಿದ್ದಾರೆ. ಇಂಥ ಸಂದರ್ಭದಲ್ಲಿ ʼಕರ್ನಾಟಕದ ಮಾದರಿʼ ವಿರುದ್ಧವೇ ಕುಮಾರಸ್ವಾಮಿ ಅವರೂ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ, ಚಂದ್ರಶೇಖರ ರಾವ್ ಸೇರಿ ಅನೇಕ ರಾಷ್ಟ್ರೀಯ ನಾಯಕರು ಜೋರು ದನಿಯಲ್ಲಿ ಮಾತನಾಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಬಹುದು ಎನ್ನುವ ಭಯ ಕಾಡುತ್ತಿದೆ.
ಹಿಂದೆ ಬಿಜೆಪಿ ಸರಕಾರದ ಕಾಲದಲ್ಲಿ ಭ್ರಷ್ಟಾಚಾರ, 40% ಕಮೀಷನ್ ಇತ್ಯಾದಿ ಆರೋಪಗಳನ್ನು ಮಾಡಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರು ಈಗ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿರುವುದು, ದಿನ ಬೆಳಗಾದರೆ ಸ್ವತಃ ಸಿಎಂ ವಿರುದ್ಧ ಸಾಲು ದಾಲು ಆರೋಪಗಳು ಬರುತ್ತಿರುವುದನ್ನು ಅವರ ಬೆಂಬಲಿಗರಿಗೆ ಸಹಿಸಲಾಗುತ್ತಿಲ್ಲ.
ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಅವರ ವಿರುದ್ಧ ಕುಮಾರಸ್ವಾಮಿ ಅವರ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಅಲ್ಲದೆ, ಅವರ ವಿರುದ್ಧ ಸಿಡಿದೆದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲಕ್ಕೆ ಸಂಪುಟದ ಸಚಿವರೆಲ್ಲರೂ ನಿಂತು ಮಾತನಾಡುತ್ತಿದ್ದಾರೆ. ಸಚಿವರನ್ನು; ಸಚಿವರೋ ಅಥವಾ ಮುಖ್ಯಮಂತ್ರಿಗೆ ಗಸ್ತು ನಿಂತಿರುವ ಬೌನ್ಸರುಗಳೋ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿರುವುದು ಸಿಎಂ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿದೆ.
ಮುಖ್ಯಮಂತ್ರಿ ಅವರಂತೂ ಶನಿವಾರ ಒಂದೇ ದಿನ ಕುಮಾರಸ್ವಾಮಿ ಅವರ ವಿರುದ್ಧ ಮೂರು ಪ್ರತ್ಯೇಕ ಟ್ವೀಟ್ ಮಾಡಿ ಆರೋಪ ಅಲ್ಲಗಳೆದಿದ್ದಲ್ಲದೆ, ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕುವುದಕ್ಕೇ ಗಮನ ಕೇಂದ್ರೀಕರಿಸಿದ್ದರು.
ಕುಮಾರಸ್ವಾಮಿ ಆರೋಪಕ್ಕೆ ವಿಧಾನಸಭೆಯಲ್ಲೇ ಉತ್ತರ
ಸಿದ್ದರಾಮಯ್ಯ ಅವರು ಒಂದೆಡೆ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದರೆ, ಮತ್ತೊಂದೆಡೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಮಾಜಿ ಮುಖ್ಯಮಂತ್ರಿ ವಿರುದ್ಧ ವಿಧಾನಸಭೆಯಲ್ಲೇ ಉತ್ತರ ಕೊಡುತ್ತೇವೆ ಎಂದು ಗುಡುಗಿದ್ದಾರೆ.
ಸಚಿವರಾದ ಡಾ.ಜಿ.ಪರಮೇಶ್ವರ್, ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಜಮೀರ್ ಅಹಮದ್, ಚಲುವರಾಯಸ್ವಾಮಿ ಸೇರಿದಂತೆ ಸಂಪುಟದ ಬಹುತೇಕ ಮಂತ್ರಿಗಳು ಕುಮಾರಸ್ವಾಮಿ ಅವರ ವಾಗ್ದಾಳಿ ಮಾಡುತ್ತಾ ಸಿಎಂ ಪರವಾಗಿ ಬ್ಯಾಟ್ ಮಾಡುತ್ತಿದ್ದಾರೆ.
ಜೆಡಿಎಸ್ ಜತೆ ಬಿಜೆಪಿ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಸರಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ದಾಖಲೆಗಳ ಸಮೇತ ಕುಮಾರಸ್ವಾಮಿ ಅವರು ಆರೋಪ ಮಾಡುತ್ತಿರುವುದು, ಅದರಲ್ಲೂ ಸರಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್ ಅವರ ವಿರುದ್ಧವೇ ನೇರ ಆರೋಪಗಳನ್ನು ಮಾಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕರೆಂಟ್ ಕಳ್ಳ ಬ್ಯಾಕ್ ಫೈರ್ ಭೀತಿ
ದೀಪಾವಳಿ ದೀಪಾಲಂಕಾರಕ್ಕೆ ಕುಮಾರಸ್ವಾಮಿ ಅವರು ತಮ್ಮ ಮನೆ ಎದುರಿನ ವಿದ್ಯುತ್ ಕಂಬದಿಂದ ವಿದ್ಯುತ್ ಕಳವು ಮಾಡಿದ್ದಾರೆ ಎಂದು ಅವರ ವಿರುದ್ಧ FIR ಮಾಡಿ, 68,000 ರೂ. ದಂಡ ವಿಧಿಸಿದ್ದು ಕೂಡ ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣ ಆಗುವ ಸಾಧ್ಯತೆಯೇ ಹೆಚ್ಚು ಎಂದು ಕೆಲ ಅಧಿಕಾರಿಗಳೇ ಹೇಳುತ್ತಿದ್ದಾರೆ.
ಗೃಹಜ್ಯೋತಿ, ವಿದ್ಯುತ್ ದರ ಏರಿಕೆ, ವಿದ್ಯುತ್ ಕ್ಷಾಮ, ಲೋಡ್ ಶೆಡ್ಡಿಂಗ್, ಕೃಷಿ ಪಂಪ್ ಸೆಟ್ಟುಗಳಿಗೆ ನೂತನ ವಿದ್ಯುತ್ ಸಂಪರ್ಕ ಕಲ್ಪಿಸಲು ಕೊಡಲಾಗುತ್ತಿದ್ದ ಸಬ್ಸಿಡಿಗೆ ಕತ್ತರಿ ವಿರುದ್ಧ ಕುಮಾರಸ್ವಾಮಿ ಅವರು ದನಿ ಎತ್ತಿದ ಕಾರಣಕ್ಕೆ ಅವರ ವಿರುದ್ಧ ಸರಕಾರ ಸೇಡು ತೀರಿಸಿಕೊಂಡಿದೆ ಎಂದು ಆರೋಪ ಮಾಡಲಾಗುತ್ತಿದೆ.
ಇವೆಲ್ಲಾ ಅಂಶಗಳು ಜೆಡಿಎಸ್-ಬಿಜೆಪಿ ಇನ್ನೂ ಹತ್ತಿರ ಆಗುವಂತೆ ಮಾಡುತ್ತಿದ್ದು, ಈ ಮೈತ್ರಿಕೂಟ ಬಲವಾದಷ್ಟು ಕಾಂಗ್ರೆಸ್ ಗೆ ನಷ್ಟ ತಪ್ಪದು ಎಂದು ವರಿಷ್ಠರು ನಂಬಿದ್ದಾರೆ.