ಅತಿ ವೇಗದ ಚಾಲನೆ, ಆಗುತ್ತಿಲ್ಲ ಚಾಲಕರ ನಿಯಮ ಪಾಲನೆ; ಅಪಾಯದಲ್ಲಿ ಐತಿಹಾಸಿಕ ಕೆರೆಕಟ್ಟೆ
by GS Bharath Gudibande
ಗುಡಿಬಂಡೆ: ಪೆರೇಸಂದ್ರ ಕಡೆಯಿಂದ ಅತಿವೇಗವಾಗಿ ಬಂದ ಟಿಪ್ಪರ್ ಲಾರಿಯು ಇಲ್ಲಿನ ಅಮಾನಿ ಭೈರಸಾಗರ ಕೆರೆಯ ಏರಿಯ ಮೇಲಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆ ಕಟ್ಟೆಗೆ ಡಿಕ್ಕಿ ಹೊಡೆದಿದೆ.
ವೇಗವಾಗಿ ಬಂದ ಟಿಪ್ಪರ್ ಲಾರಿ ಕೆರೆ ಕಟ್ಟೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಗೋಡೆಯೂ ಸಂಪೂರ್ಣವಾಗಿ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಢಿಕ್ಕಿಯ ರಭಸಕ್ಕೆ ಕೆರೆಕಟ್ಟೆಗೆ ಹಾನಿಯಾಗಿದ್ದು, ಟಿಪ್ಪರ್ ಲಾರಿ ಕೂಡ ಜಖಂಗೊಂಡಿದೆ. ಈ ಘಟನೆಯಿಂದಾಗಿ ಕೆರೆ ಏರಿ ರಸ್ತೆಯ ಮೇಲೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಟಿಪ್ಪರ್ ಲಾರಿಗಳ ಹಾವಳಿ
ಗುಡಿಬಂಡೆ ತಾಲ್ಲೂಕಿನಲ್ಲಿ ಇತ್ತೀಚೆಗೆ ಕ್ವಾರಿಗಳಿಗೆ ಬರುವ ಟಿಪ್ಪರ್ ಲಾರಿಗಳು ಅತಿವೇಗವಾಗಿ ಚಲಿಸುತ್ತಿರುವ ದೃಶ್ಯಗಳು ಸಾಮಾನ್ಯ ಎನ್ನುವಂತಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಾಚಾರಿಗಳು ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ. ಇತ್ತೀಚಿಗೆ ಕೆಲ ಅಪಘಾತಗಳು ಸಂಭವಿಸಿದ್ದು, ಟಿಪ್ಪರ್‌ಗಳ ವೇಗಕ್ಕೆ ಪೊಲೀಸರು ಕಡಿವಾಣ ಹಾಕಿದರೂ ಪ್ರಯೋಜನವಾಗುತ್ತಿಲ್ಲ. ಟಿಪ್ಪರ್ ಗಳ ಉಪಟಳ ಮುಂದುವರಿದರೆ ಪ್ರತಿಭಟನೆ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ನಾಗರಾಜ್, ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದುರಸ್ತಿಯಾಗದ ಕೆರೆ ಏರಿ
ಗುಡಿಬಂಡೆ ಪಟ್ಟಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸುಂದರವಾದ ಕೆರೆ ಕಾಣುತ್ತದೆ. ಆದರೆ ಕೆರೆ ಏರಿಯ ರಸ್ತೆ ಅಂಕುಡೊಂಕಾಗಿದ್ದು, ಅದನ್ನು ಸರಿಪಡಿಸುವ ಕೆಲಸ PWD ಇಲಾಖೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಭಾರತದ ಭೂಪಟದಂತೆ ಕಾಣುವ ಈ ಕೆರೆ ರಾಜ್ಯದಲ್ಲಿಯೇ ವಿಶೇಷವಾಗಿದ್ದು, ಆ ಕೆರೆ ಕಟ್ಟೆಯನ್ನು ಸಂರಕ್ಷಣೆ ಮಾಡುವ ಹಾಗೂ ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯವನ್ನು ಲೋಕೋಪಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಮಾಡುತ್ತಿಲ್ಲ. ಈ ಬಗ್ಗೆ ಸಿಕೆನ್ಯೂಸ್ ನೌ ಕೆಲವು ಬಾರಿ ವರದಿ ಮಾಡಿದೆ.
ಪಾದಾಚಾರಿಗಳೇ ಎಚ್ಚರ
ಗುಡಿಬಂಡೆ ಪಟ್ಟಣದ ಹಲವು ಸಾರ್ವಜನಿಕರು ಬೆಳಗಿನಜಾವದಿಂದಲೇ ಉತ್ತಮ ಆರೋಗ್ಯಕ್ಕಾಗಿ ಈ ಕೆರೆ ಏರಿ ಜಾಗದಲ್ಲಿ ವಾಕಿಂಗ್ ಮಾಡಲು ಬರುತ್ತಾರೆ, ಆ ವೇಳೆಯಲ್ಲಿಯೂ ವಾಹನಗಳು ಅತಿವೇಗವಾಗಿ ಸಂಚರಿಸುತ್ತಿರುತ್ತವೆ. ಹೀಗಾಗಿ ವಾಕಿಂಗ್ ಮಾಡಲು ಜನರು ಭಯವಾಗುತ್ತದೆ ಎಂದು ದೂರುತ್ತಿದ್ದಾರೆ. ಅದರಲ್ಲಿಯೂ ಚಾಲಕರು ಮೊಬೈಲ್ ನಲ್ಲಿ ಮಾತನಾಡುತ್ತಲೇ ಭಾರೀ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಅತ್ಯಂತ ಸೂಕ್ಷ್ಮ, ಪಾರಂಪರಿಕ ಹಿನ್ನೆಲೆಯುಳ್ಳ, ಪಟ್ಟಣದ ಜನತೆಗೆ ಪೂಜನೀಯವಾಗಿರುವ ಕೆರೆಕಟ್ಟೆಯನ್ನು ಆಡಳಿತ ನಿರ್ಲಕ್ಷ್ಯದಿಂದ ಅಪಾಯಕ್ಕೆ ದೂಡಲಾಗಿದೆ.
ಭಾರೀ ಬ್ಲಾಸ್ಟಿಂಗ್ ಕೆರೆಗೆ ಆಪತ್ತು
ಸಂಜೆ ಸಮಯದಲ್ಲಿ ಕ್ವಾರಿಗಳಿಂದ ಭಾರೀ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಬ್ಲಾಸ್ಟಿಂಗ್ ಸಂದರ್ಭದಲ್ಲಿ ಬರುವ ಶಬ್ದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಬೀತರಾಗುತ್ತಿದ್ದು, ಇದರ ಬಗ್ಗೆ ಹಲವು ದೂರುಗಳಿವೆ.ಆದರೆ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವುದು ಬಾಕಿ ಇದೆ. ಈ ಬ್ಲಾಸ್ಟಿಂಗ್ ನಿಂದ ಕೆರೆಕಟ್ಟೆಗೆ ಭಾರೀ ಆಪತ್ತು ಸಂಭವಿಸುವ ಸೂಚನೆಗಳು ಹೆಚ್ಚು ಕಾಣುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ತಾಲ್ಲೂಕಿನಲ್ಲಿ ಟಿಪ್ಪರ್ ವಾಹನಗಳ ಸಂಚಾರದ ವೇಗಕ್ಕೆ ಮಿತಿ ಹಾಕಬೇಕು. ಪೊಲೀಸರು ಇದರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಿ ತಾಲ್ಲೂಕಿನಲ್ಲಿ ಸಂಚಾರ ಮಾಡುವ ಲಾರಿಗಳ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಆ ಮೂಲಕ ಅಪಘಾತಗಳನ್ನು ತಪ್ಪಿಸಬಹುದು.
ನವೀನ್ ರಾಜ್ ಕನ್ನಡಿಗ, ಅಧ್ಯಕ್ಷ ಕೆಪಿಸಿಸಿ, ಸಾಮಾಜಿಕ ಜಾಲತಾಣ