ಚೆನ್ನೈ: ಗುರುವಾರ ಮಧ್ಯಾಹ್ನ ಒಂದು ಗಂಟೆ ನಾಲ್ಕು ನಿಮಿಷಕ್ಕೆ ಚೆನ್ನೈನ ಆಸ್ಪತ್ರೆಯಲ್ಲಿ ತಮ್ಮ ಭೌತಿಕ ಬದುಕು ಮುಗಿಸಿದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ, ಶುಕ್ರವಾರ 12.50ರ ಹೊತ್ತಿಗೆಲ್ಲ ಮಣ್ಣಲ್ಲಿ ಮಣ್ಣಾಗಿ ಶಾಶ್ವತನಿದ್ರೆಯತ್ತ ತೆರಳಿದರಲ್ಲದೆ, ತಮ್ಮ ಅಂಖ್ಯಾತ ಅಭಿಮಾನಿಗಳನ್ನು ಮತ್ತು ಸ್ವರಪ್ರೇಮಿಗಳನ್ನು ಅತೀವ ಶೋಕಕ್ಕೆ ತಳ್ಳಿಬಿಟ್ಟು, ಸ್ವರತಾಯಿಯ ಮಡಿಲಲ್ಲಿ ಐಕ್ಯರಾದರು.
ಒಕ್ಕಡೇ ರಾವಡಂ…
ಒಕ್ಕಡೈ ಪೋವಡಂ…
ನಡುಮ ಈ ನಾಟಕಂ, ವಿಧಿಲೀಲ
ವೆಂಟ ಏ ಬಂಧಮೂ…
ತೋಡುಗಾ ರಾದುಗಾ ತುದಿವೇಳ
ಮರಣಮನೇದಿ ಖಾಯಮನಿ…
ಮಿಗಿಲೆನು ಕೀರ್ತಿ ಕಾಯಮನಿ
ನೀ ಬರುವೂ.. ನೀ ಪರುವೂ ಮೋಸೇದಿ..
ಆ ನಲುಗುರು… ಆ ನಲುಗುರು… ಆ ನಲುಗುರು… ಆ ನಲುಗುರು…
(ಒಬ್ಬನಾಗೇ ಬರುವುದು…
ಒಬ್ಬನಾಗೇ ನಡೆವುದು….
ನಡುವೆ ಈ ನಾಟಕ, ವಿಧಿಲೀಲೆ
ಹಿಂದೆ ಯಾವ ಬಂಧವೂ
ರಕ್ತ ಸಂಬಂಧವೂ
ಜತೆಯಲಿ ಬಾರದು ಕೊನೆಗೆ
ಮರಣವೆಂಬುದು ಖಚಿತವು…
ಉಳಿವುದು ಕೀರ್ತಿ ಅಳಿಯದೇ
ನಿನ್ನ ಭಾರ, ನಿನ್ನ ಗೌರವ ಹೊರುವುದು
ಆ ನಾಲ್ವರು, ಆ ನಾಲ್ವರು, ಆ ನಾಲ್ವರು, ಆ ನಾಲ್ವರು)
2004ರಲ್ಲಿ ತೆಲುಗಿನಲ್ಲಿ ಬಂದಿದ್ದ ʼಆ ನಲುಗುರುʼ (ಆ ನಾಲ್ವರು) ಚಿತ್ರದ ಕ್ಲೈಮ್ಯಾಕ್ಸ್ ಗೀತೆ ಇದು. ಈ ಹಾಡನ್ನು ಎದೆತುಂಬಿ, ಆರ್ದ್ರವಾಗಿ ಹಾಡಿ ಎಲ್ಲರ ಕಂಗಳಲ್ಲಿ ಹನಿತುಂಬಿಸಿದ್ದರು ಬಾಲು. ಇವತ್ತು ನಡೆದ ಅವರ ಅಂತ್ಯಕ್ರಿಯೆಯಲ್ಲಿ ಈ ಹಾಡು ಅಕ್ಷರಶಃ ಸಾಕ್ಷಾತ್ಕಾರವಾಗಿತ್ತು. ಕೋವಿಡ್ ಎಂಬ ಮಾರಿಯನ್ನು ಲೆಕ್ಕ ಮಾಡದೇ ತಮ್ಮ ನೆಚ್ಚಿನ ಬಾಲುರನ್ನು ನೋಡಲು ಸೆಲೆಬ್ರಿಟಿಗಳಷ್ಟೇ ಅಲ್ಲ, ಸಾಮಾನ್ಯ ಅಭಿಮಾನಿಗಳು ಸಾಲುಗಟ್ಟಿ ಅವರನ್ನು ಬೀಳ್ಕೊಟ್ಟರು. ದಾರಿಯಲ್ಲಿ ಸಾಗಿದ ಅವರ ಭಾರಕ್ಕೆ (ಪಾರ್ಥೀವ ಶರೀರಕ್ಕೆ) ಹೆಗಲುಕೊಟ್ಟರು. ಅವರು ಮೂಡಿಸಿಟ್ಟುಹೋದ ಹೆಗ್ಗುರುತುಗಳಲ್ಲಿ ಸಾಗಿ ಹಿಡಿಮಣ್ಣು ಹಾಕಿ ಧನ್ಯರಾದರು.
ಸಪ್ತಸ್ವರಗಳ ಮುದ್ದುಮಗನಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಅಂಬೆಗಾಲಿಡುತ್ತಲೇ ಅನೇಕ ಭಾಷೆಗಳಲ್ಲಿ ನಲವತ್ತೈದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ, ಶಿಖರದೆತ್ತರಕ್ಕೆ ಬೆಳೆದುನಿಂತಿದ್ದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಅವರು ಚೆನ್ನೈಗೆ ಅನತಿದೂರದಲ್ಲಿರುವ ತಾಮರೈಪಾಕಂನಲ್ಲಿ ಹೀಗೆ ಶಾಶ್ವತ ಚಿರನಿದ್ರೆಗೆ ಜಾರಿದರು.
ಕೋವಿಡ್‌ನಿಂದ ಪೊಲೀಸರ ಸೂಚನೆ ಮೇರೆಗೆ ತಮ್ಮ ತಮ್ಮ ಮನೆಗಳಿಂದಲೇ ದಕ್ಷಿಣ ಭಾರತದ ಸೆಲೆಬ್ರಿಟಿಗಳೆಲ್ಲ ಅಂತಿಮ ನಮನ ಸಲ್ಲಿಸಿದರೆ, ಅಭಿಮಾನಿಗಳು ಮಾತ್ರ ದಕ್ಷಿಣ ಭಾರತದ ಉದ್ದಗಲದಿಂದ ಬಂದು ಬೆಳಕರಿಯುವ ಹೊತ್ತಿಗೆ ತಾಮರೈಪಾಕಂನಲ್ಲಿರುವ ರೆಡ್‌ಹಿಲ್ಸ್ ಫಾರಂಹೌಸ್ ಮುಂದೆ ಜಾತ್ರೆಯಂತೆ ಸೇರಿದ್ದರು. ಬಾಲು ಅವರ ಕೊನೆಕ್ಷಣಗಳನ್ನು ಕಣ್ತುಂಬಿಕೊಂಡು ಭಾರವಾದ ಮನಸ್ಸಿನೊಂದಿಗೆ ವಾಪಸ್ ಹೊರಟರು.
ಅಂತಿಮ ವಿಧಿ
ಚೆನ್ನೈಗೆ ಸಮೀಪದ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನಲ್ಲಿರುವ ರೆಡ್ ಹಿಲ್ಸ್ ಬಳಿಯ ತೋಟದಲ್ಲಿ ಬಾಲು ಅವರು ಮಣ್ಣು ಸೇರಿದರು. ಅದು ಅವರಿಗೆ ಅತ್ಯಂತ ಪ್ರಿಯವಾದ ತೋಟವಾಗಿತ್ತು. ಮೂಲತಃ ಆಂಧ್ರ ಪ್ರದೇಶದ ನೆಲ್ಲೂರಿನವರಾದ ಅವರ ಅಂತಿಮ ವಿಧಿವಿಧಾನಗಳು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರೆವೇರಿದವು. ಅದಕ್ಕಾಗಿ ಹೈದರಾಬಾದಿನಿಂದ ಪುರೋಹಿತರ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಬಾಲು ಅವರ ಪುತ್ರ ಎಸ್.ಪಿ.ಚರಣ್ ಅಂತಿಮ ವಿಧಿಗಳನ್ನು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಬಾಲು ಅವರಿಗೆ ಸಕಲ ಸರಕಾರಿ ಗೌರವಗಳನ್ನು ಸಲ್ಲಿಸಲಾಯಿತು. ತಮಿಳುನಾಡು ಪೊಲೀಸರು ಮೂರು ಸುತ್ತಿನ ಕುಶಾಲುತೋಪು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು
ಆಸ್ಪತ್ರೆಯಲ್ಲಿ ಹೋರಾಟ
ಕೋವಿಡ್‌ಗೆ ತುತ್ತಾಗಿದ್ದ ಬಾಲು ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರಾ ನಿಗಾಘಟಕದಲ್ಲಿ ಒಂದೂವರೆ ತಿಂಗಳು ಚಿಕಿತ್ಸೆ ಪಡೆದಿದ್ದರು ಬಾಲು. ಚೇತರಿಸಿಕೊಂಡೆ ಎಂದು ವಿಡಿಯೋದಲ್ಲಿ ಹೇಳಿದ್ದ ಅವರು ಮತ್ತೆ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಸೆಪ್ಟಂಬರ್ 25ರಂದು, ಅಂದರೆ ಗುರುವಾರ ಮಧ್ಯಾಹ್ನ 1.04ಕ್ಕೆ ಇಹಲೋಕ ತ್ಯಜಿಸಿದರು.
ತಮಿಳು ಚಿತ್ರರಂಗದ ಸ್ಟಾರ್‌ನಟ ದಳಪತಿ ವಿಜಯ್, ಎಸ್‌ಪಿಬಿ ಅವರ ಚಿರಕಾಲದ ಮಿತ್ರ, ನಿರ್ದೇಶಕ ಭಾರತೀರಾಜಾ, ಗಾಯಕ ಮನು, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್, ಹಾಸ್ಯನಟ ಮೈಲ್‌ಸಾಮಿ ಮುಂತಾದವರು ಬಾಲು ಅವರ ಅಂತಿಮ ದರ್ಶನ ಪಡೆದರು. ಇದೇ ವೇಳೆ ತೀವ್ರ ದುಃಖತಪ್ತರಾಗಿದ್ದ ಬಾಲು ಅವರ ಪತ್ನಿ ಸಾವಿತ್ರಿ, ಪುತ್ರಿ ಪಲ್ಲವಿ, ಸಹೋದರಿ ಎಸ್.ಪಿ. ಶೈಲಜಾ, ಭಾವಮೈದ ಹಾಗೂ ನಟ ಶುಭಲೇಖ ಸುಧಾಕರ್ ಮತ್ತು ಬಂಧುವರ್ಗದವರಿಗೆ ಬಂದಿದ್ದ ಗಣ್ಯರು ಸಾಂತ್ವನ ಹೇಳಿದರು.
ಮುಖ್ಯವಾಗಿ ಹೀರೋ ವಿಜಯ್ ಅವರು ಎಸ್.ಪಿ. ಚರಣ್ ಅವರಿಗೆ ಧೈರ್ಯ ತುಂಬಿದರಲ್ಲದೆ, ಬಾಲು ಅವರ ಅಂತಿಮ ವಿಧಿಗಳು ನಡೆಯುವವರೆಗೂ ಅಲ್ಲೇ ಇದ್ದು ಅಂತಿಮವಾಗಿ ಸಮಾಧಿಗೆ ಹಿಡಿಮಣ್ಣು ಅರ್ಪಿಸುವ ಮೂಲಕ ತಮ್ಮ ನೆಚ್ಚಿನ ಗಾಯಕನಿಗೆ ನಮನ ಸಲ್ಲಿಸಿದರು.
ಈ ವರದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…