ಹಂಪಿ ವಿವಿ ಕುಲಪತಿ ಪ್ರೊ.ಎಸ್.ರಮೇಶ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಭಾಷಿಣಿ ಡಿಜಿಟಲ್ ಸಂಸ್ಥೆಯ ಡಾ.ಶಿವಕುಮಾರ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ.
ಆರಂಭ ಹಂತದಿಂದಲೇ ಕನ್ನಡ ಕಲಿಕೆ;
ಶಿಕ್ಷಣ ನೀತಿಯೊಂದಿಗೆ ಜಾರಿ ಎಂದ ಡಿಸಿಎಂ
ಬೆಂಗಳೂರು: ಕನ್ನಡ ರಾಜ್ಯೋತ್ಸವ ನಿಮಿತ್ತ ಸಮಸ್ತ ಕನ್ನಡಿಗರಿಗೆ ಅಪರೂಪದ ಕಾಣಿಕೆಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಂಪಾದಿಸಿ ಹೊರತಂದಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ ಮೊದಲ ಎಂಟು ಸಂಪುಟಗಳ ಮುದ್ರಣ ಮತ್ತು ಡಿಜಿಟಲ್ ಆವೃತ್ತಿಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬೆಂಗಳೂರಿನಲ್ಲಿ ಭಾನುವಾರ ಲೋಕಾರ್ಪಣೆ ಮಾಡಿದರು.
ನಾಲ್ವರು ಕುಲಪತಿಗಳ ಅಧಿಕಾರ ಅವಧಿಯಲ್ಲಿ ಸಾಗಿದ ಈ ಯೋಜನೆಗೆ ಉಪ ಮುಖ್ಯಮಂತ್ರಿ ವೇಗ ನೀಡಿದ್ದರಲ್ಲದೆ, ಸ್ವತಃ ಕಾಳಜಿ ವಹಿಸಿ ಮೊದಲ ಎಂಟು ಸಂಪುಟಗಳು ಹೊರಬರುವಂತೆ ಮಾಡಿದ್ದಾರೆ. ಉಳಿದ ಹತ್ತು ಸಂಪುಟಗಳನ್ನು ಆದಷ್ಟು ಬೇಗ ಹೊರತರುವುದಾಗಿ ಅವರು ಹೇಳಿದರಲ್ಲದೆ, ಈ ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ ನೀಡುತ್ತಿರುವ ಅತ್ಯುತ್ತಮ ಕೊಡುಗೆ ಇದಾಗಿದೆ ಎಂದರು.
ಹಂಪಿ ವಿವಿ ಕುಲಪತಿ ಪ್ರೊ.ಎಸ್.ರಮೇಶ್, ಡಾ.ಸಿ.ಎನ್.ಅಶ್ವತ್ಥನಾರಾಯಣ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಒತ್ತು
ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಸಿಎಂ ಅವರಿಗೂ ಮೊದಲು ಮಾತನಾಡಿದ ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು, “ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಕನ್ನಡವನ್ನು ಕಡಾಯವಾಗಿ ಬೋಧನೆ ಮಾಡಬೇಕು” ಎಂದು ಸಲಹೆ ಮಾಡಿದರು. ಈ ಸಲಹೆಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಸಿಯಿಸಿದ ಡಾ.ಅಶ್ವತ್ಥನಾರಾಯಣ; “ಪ್ರಾಥಮಿಕ ಶಿಕ್ಷಣ ಹಂತದಿಂದ ಅಲ್ಲ, ಶಿಶು ವಿಹಾರದ ಹಂತದಿಂದಲೇ ಕನ್ನಡ ಕಲಿಸುವ ಪ್ರಯತ್ನ ಆರಂಭವಾಗುತ್ತಿದೆ. ಆಯಾ ರಾಜ್ಯದ, ಅಂದರೆ; ಪ್ರಾದೇಶಿಕ ಭಾಷೆಯಲ್ಲಿಯೇ ಕಿರಿಯ ಮತ್ತು ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬ ಅಂಶ ಕೇಂದ್ರ ಸರಕಾರ ಪ್ರಕಟಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಕವಾಗಿದೆ. ರಾಜ್ಯ ಸರಕಾರವೂ ಶೀಘ್ರದಲ್ಲಿಯೇ ಈ ನೀತಿಯನ್ನು ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಿ ಹೆಜ್ಜೆ ಇಟ್ಟಿದೆ” ಎಂದು ಪ್ರಕಟಿಸಿದರು.
ಬಾಲ್ಯದಲ್ಲಿ, ಅಂದರೆ; 3ರಿಂದ 6ವರ್ಷದ ವಯೋಮಿತಿಯ ಮಕ್ಕಳಿಗೆ 13 ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಇರುತ್ತದೆ. ಅದಕ್ಕೆ ಸರಕಾರ ಆಗತ್ಯ ವೇದಿಕೆ ಕಲ್ಪಿಸಬೇಕಿದೆ. ಅದನ್ನು ಶಿಕ್ಷಣ ನೀತಿ ಜಾರಿ ಮೂಲಕ ಸರಕಾರ ಮಾಡುತ್ತಿದೆ.
ಕನ್ನಡಕ್ಕೆ ತಂತ್ರಜ್ಞಾನದ ಬಲ
ಕನ್ನಡಕ್ಕೆ ಸದೃಢವಾದ ನೆಲೆ ಇದೆ. ನಮ್ಮ ಭಾಷೆಯನ್ನು ಮಾತನಾಡುವ ಅಗಾಧ ಜನಸಮೂಹವಿದೆ. ದೊಡ್ಡ ಪ್ರಮಾಣದ ಶ್ರೇಷ್ಟ ಸಾಹಿತ್ಯವಿದೆ. ಇಂಥ ಭಾಷೆಗೆ ತಂತ್ರಜ್ಞಾನವೂ ಜತೆಯಾದರೆ, ಕನ್ನಡಕ್ಕಾಗಿ ಇನ್ನೂ ಅನೇಕ ಅದ್ಭುತ ಕೆಲಸಗಳು ಆಗಲಿವೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ನೀಡಲು ಸರಕಾರ ಸದಾ ಸಿದ್ಧವಿದೆ ಎಂದರು ಡಿಸಿಎಂ.
ಬೆಂಗಳೂರಿನಲ್ಲಿ ಹಂಪಿ ವಿವಿ ಕ್ಯಾಂಪಸ್
ರಾಜಧಾನಿ ಬೆಂಗಳೂರಿನಲ್ಲೂ ಹಂಪಿ ವಿಶ್ವವಿದ್ಯಾಲಯದ ಕ್ಯಾಂಪಸ್ ಮಾಡಿ ಎಂದು ಇದೇ ವೇಳೆ ವಿವಿ ಕುಲಪತಿ ಪ್ರೊ.ಎಸ್.ರಮೇಶ್ ಅವರಿಗೆ ಸೂಚಿಸಿದ ಅವರು; ಈಗಾಗಲೇ 12 ಎಕರೆ ಭೂಮಿ ಇದೆ. ನೀವು ಯೋಜನೆಯನ್ನು ಹಾಕಿಕೊಳ್ಳಿ, ಅಗತ್ಯಬಿದ್ದರೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸಹಯೋಗದಲ್ಲಿ ಮಾಡಿ. ಇಲ್ಲವಾದರೆ ಸ್ವತಂತ್ರ್ಯವಾಗಿಯೇ ಮಾಡಿ. ಸರಕಾರ ನಿಮ್ಮ ಜತೆಯಲ್ಲಿರುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಹಂಪಿ ಕುಲಪತಿಗೆ ಭರವಸೆ ನೀಡಿದರು.
advt
ಕಾರ್ಯಕ್ರಮದಲ್ಲಿ ಮೊದಲು ಕುವೆಂಪು ಸಮಗ್ರ ಸಂಪುಟಗಳ ಸಂಪಾದಕ ಡಾ.ಕೆ.ಸಿ.ಶಿವಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ್, ಹಂಪಿ ವಿವಿ ಕುಲಪತಿ ಪ್ರೊ.ಎಸ್.ರಮೇಶ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ, ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ ಮಾತನಾಡಿದರು. ಆನ್ಲೈನ್ ಮೂಲಕ ಮೈಸೂರಿನ ಉದಯರವಿಯಿಂದಲೇ ಸಭೆಯಲ್ಲಿ ಭಾಗಿಯಾಗಿದ್ದ ವಿಶ್ರಾಂತ ಕುಲಪತಿ ಹಾಗೂ ಕುವೆಂಪು ಅವರ ಅಳಿಯ ಡಾ.ಚಿದಾನಂದ ಗೌಡ, ಅವರ ಪತ್ನಿ ಹಾಗೂ ಕುವೆಂಪು ಅವರ ಪುತ್ರಿ ತಾರಿಣಿ ಇಬ್ಬರೂ ಮಾತನಾಡಿದರು. ಹಾಗೆಯೇ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಹಾಗೂ ಡಿಜಿಟಲ್ ಕನ್ನಡಕ್ಕಾಗಿ ಅನೇಕ ಆವಿಷ್ಕಾರಗಳನ್ನು ಮಾಡುತ್ತಿರುವ ಡಾ.ಎ.ಜಿ.ರಾಮಕೃಷ್ಣನ್; ತಂತ್ರಜ್ಞಾನದಲ್ಲಿ ಕನ್ನಡಕ್ಕಾಗಿ ಐಐಎಸ್ಸ್ಸಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ಕನ್ನಡ ತಾಂತ್ರಿಕ ಅಭಿವೃದ್ಧಿ ಮಂಡಳಿ ವಿಷನ್ ಗ್ರೂಪ್ ಅಧ್ಯಕ್ಷ ಡಾ.ಸಮೀರ್ ಕಾಗಲ್ಕರ್, ಜಗತ್ತಿನ ಇತರೆ ಭಾಷೆಗಳ ಜನರಿಗೂ ಕನ್ನಡ ಸಾಹಿತ್ಯವನ್ನು ಮುಟ್ಟಿಸುವುದ್ಹೇಗೆ ಎಂಬ ಬಗ್ಗೆ ಮಾತನಾಡಿದರು.
ಒಂದೇ ವಾರದಲ್ಲಿ ಸಿದ್ಧವಾದ ಡಿಜಿಟಲ್ ಆವೃತ್ತಿ
ಭಾಷಿಣಿ ಡಿಜಿಟಲ್ ಸಂಸ್ಥೆಯ ಡಾ.ಶಿವಕುಮಾರ್ ಮತ್ತು ಭಾರ್ಗವಿ ಅವರ ಶ್ರಮದಿಂದ ಕೇವಲ ಒಂದೇ ವಾರದಲ್ಲಿ 12 ಸಂಪುಟಗಳ 12,000 ಪುಟಗಳ ಕುವೆಂಪು ಸಾಹಿತ್ಯದ ಡಿಜಿಟಲ್ ಆವೃತ್ತಿ ಸಿದ್ಧವಾಗಿದೆ. ಅದರ ಬಳಕೆ, ಓದು ಅತ್ಯಂತ ಸರಳವಾಗಿದೆ.
ರಾಜ್ಯೋತ್ಸವದ ನಿಮಿತ್ತ ಹಂಪಿ ವಿವಿ ತನ್ನೆಲ್ಲ ಪುಸ್ತಕಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಈಗ ಬಿಡುಗಡೆ ಆಗಿರುವ ಕುವೆಂಪು ಸಮಗ್ರ ಸಾಹಿತ್ಯ ಸಂಪುಟವು 5 ಸಾವಿರ ರೂ.ಗಳಿಗೆ ಲಭ್ಯವಿದೆ ಎಂದು ಇದೇ ವೇಳೆ ಕುಲಪತಿ ಪ್ರೊ. ರಮೇಶ್ ಪ್ರಕಟಿಸಿದರು.