lead photo courtesy: Telangana Masapatrika
- 1991ರಲ್ಲಿ ದಿವಾಳಿಯ ಅಂಚಿನಲ್ಲಿದ್ದ ಭಾರತವನ್ನು ಆ ಸಂಕಷ್ಟದಿಂದ ಪಾರು ಮಾಡಿದ ಸಾಹಸಿಯೆಂದರೆ, ಪಿ.ವಿ.ನರಸಿಂಹರಾವ್. ನೆಹರು-ಗಾಂಧಿ ಕುಟುಂಬದ ಕುಡಿಯಲ್ಲದ ಪಿವಿಎನ್, ಐದು ವರ್ಷಗಳ ಕಾಲ ಭಾರತದ ಚುಕ್ಕಾಣಿ ಹಿಡಿದು, ದೇಶವನ್ನು ಹೊಸ ಮನ್ವಂತರಕ್ಕೆ ಕೊಂಡೊಯ್ದ ಚಾಣಾಕ್ಷ. ಆದರೆ, ಸಮಕಾಲೀನ ಚರಿತ್ರೆಯಲ್ಲಿ ಅವರಿಗೆ ಸಿಗಬೇಕಾಗಿದ್ದ ಸ್ಥಾನ ಸಿಕ್ಕಿಲ್ಲ. ಇದು ಅವರ ಜನ್ಮಶತಾಬ್ದಿಯ ವರ್ಷ. ಈ ಸಂದರ್ಭದಲ್ಲಿ ಅವರನ್ನು ಕುರಿತ ಪಿವಿಎನ್: ಪರ್ವಕಾಲದ ಪುರುಷೋತ್ತಮ ಎನ್ನುವ ಅನುವಾದಿತ ಕೃತಿ ಈಚೆಗಷ್ಟೇ ಲೋಕಾರ್ಪಣೆಗೊಂಡಿದೆ. ಸಂಜಯ ಬರೂ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವವರು ಖ್ಯಾತ ಅನುವಾದಕ ಬಿ.ಎಸ್.ಜಯಪ್ರಕಾಶ ನಾರಾಯಣ. ಈ ಗಮನಾರ್ಹ ಕೃತಿಯ ಒಂದು ಅಧ್ಯಾಯದ ಆಯ್ದ ಭಾಗವು ಸಿಕೆನ್ಯೂಸ್ ನೌ ಓದುಗರಿಗಾಗಿ ಇಲ್ಲಿದೆ. ಅಧ್ಯಾಯವು ದೀರ್ಘವಾಗಿರುವುದರಿಂದ ಅದನ್ನು ಕೆಲ ಕಂತುಗಳನ್ನಾಗಿ ವಿಭಜಿಸಿ ಪ್ರಕಟಿಸಲಾಗುತ್ತಿದೆ. ಇದು 3ನೇ ಕಂತು.
ನಾನು ಮತ್ತು ಪಿವಿಎನ್ ಇಬ್ಬರೂ ಹೈದರಾಬಾದಿಗೆ ಸೇರಿದವರು. ಆದರೆ, ನಾನು ವೃತ್ತಿಯ ಸಲುವಾಗಿ 1990ರಲ್ಲಿ ದೆಹಲಿಯನ್ನು ಸೇರುವವರೆಗೂ ಅವರೊಂದಿಗಿನ ನನ್ನ ಸಂಬಂಧ ಗಾಢವೇನೂ ಆಗಿರಲಿಲ್ಲ. ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಬೋಧಕನಾಗಿ ಕೆಲಸ ಮಾಡಿದ ಮೇಲೆ, ನಾನು ಆ ವೃತ್ತಿಯನ್ನು ತೊರೆದು, 1990ರ ಜುಲೈನಲ್ಲಿ ದೆಹಲಿಯಲ್ಲಿ ʼಎಕನಾಮಿಕ್ ಟೈಮ್ಸ್ʼ ಪತ್ರಿಕೆಯನ್ನು ಸೇರಿದೆ. ಅದಾದ ಮೇಲೆ ನಾನು ಅನೇಕ ಸಲ ಪಿವಿಎನ್ ಅವರನ್ನು ಭೇಟಿ ಮಾಡಿದ್ದುಂಟು. ಆ ದಿನಗಳಲ್ಲಿ ಅವರು ದೆಹಲಿಯಿಂದ ಹೈದರಾಬಾದ್‌ಗೆ ವಾಪಸ್ಸಾಗಲು ಅಣಿಯಾಗುತ್ತಿದ್ದರು. ಈ ಬಗ್ಗೆ ಆಮೇಲೊಂದು ದಿನ ನನ್ನ ಬಳಿ ಮಾತನಾಡಿದ ಪಿವಿಎನ್ ಅವರ ನಿಕಟವರ್ತಿಗಳೂ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದಾಗ ಅವರ ಕಾರ್ಯದರ್ಶಿಗಳೂ ಆಗಿದ್ದ ನನ್ನ ಬಂಧು ಪಿ.ವಿ.ಆರ್.ಕೆ.ಪ್ರಸಾದ್ ಅವರು “1991ರ ಆ ದಿನಗಳಲ್ಲಿ ನರಸಿಂಹರಾವ್ ಅವರು ಆಂಧ್ರಕ್ಕೆ ವಾಪಸ್ಸಾಗಿ, ಕೋರ್‌ತಲ್ಲಂ ಅಧ್ಯಾತ್ಮ ಪೀಠದಲ್ಲಿ ಅರ್ಚಕರಾಗುವ ಬಗ್ಗೆ ಯೋಚಿಸುತ್ತಿದ್ದರು. ಇದರ ಜೊತೆಗೆ ಅವರು ಭಾರತೀಯ ವಿದ್ಯಾಭವನದ ರಾಜಾಜಿ ಇನ್ಸ್ಟಿಟ್ಯೂಟ್ ಮತ್ತು ಸ್ವಾಮಿ ರಮಾನಂದತೀರ್ಥ ರೂರಲ್ ಇನ್ಸ್ಟಿಟ್ಯೂಟ್‌ನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸಿದ್ದರು,” ಎಂಬ ಸಂಗತಿಯನ್ನು ಹಂಚಿಕೊಂಡರು. ಅವರ ಮಾತುಗಳಲ್ಲಿ ನಿಜಾಂಶವಿತ್ತು. ಏಕೆಂದರೆ, ಆ ದಿನಗಳಲ್ಲಿ ಪಿವಿಎನ್ ಅವರು ಈ ಸಂಬಂಧ ನಮ್ಮ ತಂದೆಯವರೊಂದಿಗೆ ಸಂಪರ್ಕದಲ್ಲಿದ್ದರು. ಅಂದಂತೆ, ಪಿವಿಎನ್ ತಾವು 1957ರಲ್ಲಿ ಮೊಟ್ಟಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ನಮ್ಮ ತಂದೆಯವರನ್ನು ಬಲ್ಲವರಾಗಿದ್ದರು. ಆಗ ನಮ್ಮ ತಂದೆ ಆಂಧ್ರಪ್ರದೇಶದ ಕರೀಂನಗರದ ಜಿಲ್ಲಾಧಿಕಾರಿಯಾಗಿದ್ದು, ಪಿವಿಎನ್ ಪ್ರತಿನಿಧಿಸುತ್ತಿದ್ದ ಮಂತಾನಿ ವಿಧಾನಸಭಾ ಕ್ಷೇತ್ರವು ಈ ಜಿಲ್ಲೆಯ ಭಾಗವಾಗಿತ್ತು.
1959ರ ಆ ದಿನಗಳಲ್ಲಿ ಕೇಂದ್ರ ಸರಕಾರದ ಜನ ಸಮುದಾಯಗಳ ಅಭಿವೃದ್ಧಿ ಮಂತ್ರಾಲಯವು ಹೈದರಾಬಾದಿನಲ್ಲಿ ʼಜನ ಸಮುದಾಯಗಳ ಕಲ್ಯಾಣಾಧಿಕಾರಿಗಳ ತರಬೇತಿ ಕೇಂದ್ರವನ್ನು ಸ್ಥಾಪಿಸಿತ್ತು. ಆಗ ನಮ್ಮ ತಂದೆಯೇ ಇದರ ಪ್ರಾಂಶುಪಾಲರಾಗಿದ್ದರು. ಆ ವರ್ಷ ಪಿವಿಎನ್ ಕೂಡ ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಲೆಂದು ಈ ಕೇಂದ್ರವನ್ನು ಸೇರಿದ್ದರು. ಆಗ ಪ್ರತಿದಿನವೂ ಸಂಜೆಯ ಹೊತ್ತು ನಮ್ಮ ತಂದೆ ಮತ್ತು ಪಿವಿಎನ್ ಇಬ್ಬರೂ ಸಂಸ್ಥೆಯ ಆವರಣದಲ್ಲಿ ವಾಯುವಿಹಾರ ನಡೆಸುತ್ತ, ಆರ್ಥಿಕ ವ್ಯವಸ್ಥೆ, ರಾಜಕೀಯ, ಪುಸ್ತಕಗಳು, ತಮ್ಮ ಇಷ್ಟದ ಲೇಖಕರು ಮತ್ತು ರಾಷ್ಟ್ರೀಯ ಮಹತ್ತ್ವದ ಹತ್ತಾರು ವಿಚಾರಗಳನ್ನು ಕುರಿತು ಚರ್ಚಿಸುತ್ತಿದ್ದರಂತೆ. ವರ್ಷಗಳುರುಳಿದಂತೆ ಅವರಿಬ್ಬರ ನಡುವೆ ಬಹಳ ಆತ್ಮೀಯವಾದ ಗೆಳೆತನ ಬೆಳೆಯಿತು. ಪಿವಿಎನ್ ಅವರು ಎಷ್ಟೋ ಸಲ ತುಂಬಾ ಖಾಸಗಿಯಾದ ವಿಚಾರಗಳನ್ನು ಕೂಡ ನಮ್ಮ ತಂದೆಯೊಂದಿಗೆ ಹಂಚಿಕೊಳ್ಳುತ್ತಿದ್ದರು. ಪಿವಿಎನ್ ಮತ್ತು ನಮ್ಮ ತಂದೆಯ ನಡುವೆ ನಿಜಕ್ಕೂ ಇಂತಹ ಸಲುಗೆ ಇತ್ತು.
ಚೆನ್ನಾರೆಡ್ಡಿ ಬದಲು ಪಿವಿಎನ್
1971ರ ಹೊತ್ತಿಗೆ ಆಂಧ್ರ ಪ್ರದೇಶವನ್ನು ವಿಭಜಿಸಿ, ಹೊಸದಾದ ತೆಲಂಗಾಣ ರಾಜ್ಯವನ್ನು ರಚಿಸಬೇಕೆಂಬ ಬೇಡಿಕೆ ತಾರಕಕ್ಕೇರಿತು. ಆಗ ನಡೆದ ಒಪ್ಪಂದದಂತೆ, ಈ ಹೋರಾಟವನ್ನು ತಣ್ಣಗಾಗಿಸುವ ಉದ್ದೇಶದಿಂದ ಆಗಿನ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಪ್ರಬಲ ಕಾಂಗ್ರೆಸ್ ನಾಯಕ ಕಾಸು ಬ್ರಹ್ಮಾನಂದ ರೆಡ್ಡಿಯವರನ್ನು ಆ ಹುದ್ದೆಯಿಂದ ಕೆಳಗಿಳಿಸಿ, ನರಸಿಂಹರಾವ್ ಅವರನ್ನು ಪಟ್ಟಕ್ಕೇರಿಸಲಾಯಿತು. ಆಗ, ತೆಲಂಗಾಣ ರಚನೆಗೆ ನಡೆಯುತ್ತಿದ್ದ ಹೋರಾಟದ ನೇತೃತ್ವವನ್ನು ವಹಿಸಿದ್ದವರು ಯಾರೆಂದರೆ ಮತ್ತೊಬ್ಬ ಕಾಂಗ್ರೆಸ್ ನಾಯಕ ಚೆನ್ನಾರೆಡ್ಡಿ. ಸಹಜವಾದ ಪರಿಸ್ಥಿತಿಯಲ್ಲಿ ಆಗ ಇವರೇ ಮುಖ್ಯಮಂತ್ರಿಯಾಗಬೇಕಾಗಿತ್ತು. ಆದರೆ, ಇಂದಿರಾ ಗಾಂಧಿಯವರು ಚೆನ್ನಾರೆಡ್ಡಿಯವರನ್ನು ಪಕ್ಕಕ್ಕೆ ಸರಿಸಿ, ನರಸಿಂಹರಾವ್ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದರು. ಆಮೇಲೆ ಚೆನ್ನಾರೆಡ್ಡಿಯವರು ‘ತೆಲಂಗಾಣ ಪ್ರಜಾ ಸಮಿತಿ’ಯನ್ನು ರಚಿಸಿದ್ದು ಈಗ ಇತಿಹಾಸ.
ಅಂದಹಾಗೆ, ಇಂದಿರಾ ಗಾಂಧಿಯವರು ಪಿವಿಎನ್ ಅವರನ್ನು ಮುಖ್ಯಮಂತ್ರಿ ಗಾದಿಯ ಮೇಲೆ ಪ್ರತಿಷ್ಠಾಪಿಸಿದ್ದರ ಹಿಂದೆ ಇದ್ದ ಕಾರಣಗಳೇ ಬೇರೆ. ಅದೇನೆಂದರೆ, ಪಿವಿಎನ್ ಜಾತಿಯಿಂದ ಬ್ರಾಹ್ಮಣರಾಗಿದ್ದರು; ಹೀಗಾಗಿ ಅವರಿಗೊಂದು ಜಾತಿಯ ಬಲವಿರಲಿಲ್ಲ. ಈ ಎರಡು ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡ ಇಂದಿರಾ ಗಾಂಧಿ, ಆರ್ಥಿಕವಾಗಿ ಬಲಾಢ್ಯರೂ ರಾಜಕೀಯವಾಗಿ ಪ್ರಬಲರೂ ಆಗಿದ್ದ ರೆಡ್ಡಿ ಸಮುದಾಯದ ಬಲ ಹೊಂದಿದ್ದ ಚೆನ್ನಾರೆಡ್ಡಿಯವರನ್ನು ಮುಖ್ಯಮಂತ್ರಿ ಮಾಡುವುದಕ್ಕಿಂತ, ಜಾತಿ ಮತ್ತು ದುಡ್ಡಿನ ಬಲ ಎರಡೂ ಇಲ್ಲದ ಪಿವಿಎನ್ ಅವರನ್ನು ಆ ಕುರ್ಚಿಯ ಮೇಲೆ ಕೂರಿಸುವುದೇ ತಮ್ಮ ದೃಷ್ಟಿಯಿಂದ ಕ್ಷೇಮ ಎಂಬ ತೀರ್ಮಾನಕ್ಕೆ ಬಂದಿದ್ದರು.
ಮುಖ್ಯಮಂತ್ರಿಯಾದ ಮೇಲೆ ಪಿವಿಎನ್ ಅವರು ತೆಲಂಗಾಣ ಸೀಮೆಯಲ್ಲಿ ಭಾರೀ ಹಿಡುವಳಿಗಳನ್ನು ಹೊಂದಿದ್ದ ರೆಡ್ಡಿ ಮತು ವೇಲಮ ಜಾತಿಗಳ ರಾಜಕೀಯ ನೆಲೆಯನ್ನು ಭಾಗಶಃವಾದರೂ ಛಿದ್ರಗೊಳಿಸುವ ಉದ್ದೇಶದಿಂದ ಭೂ ಸುಧಾರಣೆ ನೀತಿಯನ್ನು ಜಾರಿಗೆ ತಂದರು. ಅವರ ಈ ನಿಲುವನ್ನು ಹಿಂದುಳಿದ ಜಾತಿಗಳು, ದಲಿತರು, ಮುಸ್ಲಿಮರು ಮತ್ತು ಬ್ರಾಹ್ಮಣರು ಬೆಂಬಲಿಸಿದರು. ಆದರೆ, ಆಂಧ್ರಪ್ರದೇಶದ ಕರಾವಳಿ ಸೀಮೆ ರಾಜಕಾರಣಿಗಳು, ಅದರಲ್ಲೂ ರೆಡ್ಡಿಗಳು ಮತ್ತು ಕಮ್ಮಾ ಜಾತಿಯ ಜನಗಳು ತುಂಬಾ ಜಾಣರಾಗಿದ್ದರು. ಹೀಗಾಗಿ ಅವರು ಕೂಡಲೇ ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ರಚನೆಗೆ ಆಗ್ರಹಿಸಿ ಹೋರಾಟ ಶುರು ಹಚ್ಚಿಕೊಂಡರು. ಪಿವಿಎನ್ ಅವರಿಗೆ ಈ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಆಗಲಿಲ್ಲ. ಹೀಗಾಗಿ ಕೇಂದ್ರ ಸರಕಾರವು 1973ರ ಜನವರಿಯಲ್ಲಿ ಆಂಧ್ರ ಪ್ರದೇಶ ಸರಕಾರವನ್ನು ವಜಾ ಮಾಡಿ, ರಾಷ್ಟ್ರಪತಿಗಳ ಆಡಳಿತವನ್ನು ಹೇರಿತು. ಇದಾದ ಮೇಲೆ ಪಿವಿಎನ್ ಅವರು ಆಂಧ್ರದ ರಾಜಕೀಯದಿಂದ ದೂರವಾಗಿ, ರಾಷ್ಟ್ರ ರಾಜಕಾರಣ ಸೇರಿಕೊಂಡು ದೆಹಲಿಯಲ್ಲಿ ಬೀಡು ಬಿಟ್ಟರು. ಆಗ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು.
1974-76ರ ನಡುವೆ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದೆ. ಆ ದಿನಗಳಲ್ಲಿ ಪಿವಿಎನ್ ಅವರು ನಮ್ಮ ರಾಜಕೀಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ರಶೀದುದ್ದೀನ್ ಖಾನ್ ಅವರ ಮನೆಗೆ ಪದೇಪದೇ ಬರುತ್ತಿದ್ದರು. ಅವರು ಹಾಗೆ ಬಂದಾಗಲೆಲ್ಲ ನಾನು ನಮ್ಮ ಗುರುಗಳ ಮನೆಗೆ ಓಡಿಹೋಗುತ್ತಿದ್ದೆ. ಆಗ ರಶೀದುದ್ದೀನ್ ಖಾನ್ ಅವರು ರಾಜ್ಯಸಭಾ ಸದಸ್ಯರಾಗಿದ್ದರಲ್ಲದೆ, ಪಿವಿಎನ್ ಅವರು ಇವರನ್ನು ಚೆನ್ನಾಗಿ ಬಲ್ಲವರಾಗಿದ್ದರು. ಆ ದಿನಗಳಲ್ಲಿ ಪಿವಿಎನ್ ಅವರು ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೂ ನಮ್ಮಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣಗಳಿಗೂ ಆಗಿಂದಾಗ್ಗೆ ಬರುತ್ತಿದ್ದರು. ಇಷ್ಟರ ಮಧ್ಯೆ ನಾನು 1975ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ವೈಭವದ ಪಥ ಸಂಚಲನವನ್ನು ನೋಡಲೆಂದು ಗೆಳೆಯರೊಂದಿಗೆ ಹೋಗಿದ್ದೆ. ನಾವು ಅಂದು ಕೂರಲು ಜಾಗ ಸಿಕ್ಕುವುದಿಲ್ಲವೆಂದು ತುಂಬಾ ಬೇಗನೇ ರಾಜಪಥವನ್ನು ತಲುಪಿದ್ದೆವು. ಆ ಸಮಾರಂಭಕ್ಕೆ ತಡವಾಗಿ ಆಗಮಿಸಿದ ಪಿವಿಎನ್ ಅವರಿಗೆ ಕೂರಲು ಕುರ್ಚಿಯೇ ಸಿಗಲಿಲಲ್ಲ. ಇದನ್ನು ಕಂಡ ನಾನು, ʼಸರ್, ಬನ್ನಿ. ಕೂತುಕೊಳ್ಳಿ,ʼ ಎಂದು ನನಗೆ ಸಿಕ್ಕಿದ್ದ ಕುರ್ಚಿಯನ್ನೇ ಬಿಟ್ಟುಕೊಟ್ಟೆ. ಅದು ನಮ್ಮಿಬ್ಬರಿಗೂ ಮುಜುಗರದ ಕ್ಷಣವಾಗಿತ್ತು. ಏಕೆಂದರೆ, ಅಷ್ಟು ಹೊತ್ತಿಗಾಗಲೇ ಅವರೊಬ್ಬ ಮಾಜಿ ಮುಖ್ಯಮಂತ್ರಿಯಾಗಿದ್ದರು. ಆದರೆ, ಅವರನ್ನು ಗುರುತಿಸುವ ಯಾರೊಬ್ಬರೂ ನಮ್ಮ ಸುತ್ತಮುತ್ತ ಇರಲಿಲ್ಲ.
ರಾಜೀವ್‌ಗೆ ಬೇಡವಾಗಿದ್ದರಾ ಪಿವಿಎನ್
ನರಸಿಂಹರಾಯರು ತುರ್ತುಪರಿಸ್ಥಿತಿಯ ದಿನಗಳಲ್ಲೂ ಆಮೇಲೂ ಇಂದಿರಾ ಗಾಂಧಿಯವರಿಗೆ ನಿಷ್ಠರಾಗಿದ್ದರು. ಆ ದಿನಗಳಲ್ಲಿ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅಪಾರ ಜ್ಞಾನ ಸಂಪಾದಿಸಿಕೊಂಡರು. ಪಿವಿಎನ್ ಅವರಲ್ಲಿ ಒಬ್ಬ ಒಳ್ಳೆಯ ಲೇಖಕನೂ ಇದ್ದ. ಇದನ್ನು ಗುರುತಿಸಿದ್ದ ಕಾಂಗ್ರೆಸ್ ಪಕ್ಷವು ಅವರ ಕೈಯಿಂದಲೇ ತನ್ನ ಪ್ರಣಾಳಿಕೆಯನ್ನೂ ನಿರ್ಣಯಗಳನ್ನೂ ಬರೆಸುತ್ತಿತ್ತು. 1980ರಲ್ಲಿ ಅಧಿಕಾರಕ್ಕೆ ಮರಳಿದ ಇಂದಿರಾ ಗಾಂಧಿಯವರು ಪಿವಿಎನ್‌ಗೆ ವಿದೇಶಾಂಗ ಖಾತೆಯ ಉಡುಗೊರೆ ಕೊಟ್ಟರು. 1980ರ ದಶಕದಲ್ಲಿ ನರಸಿಂಹರಾಯರು ದೆಹಲಿಯ ರೈಸಿನಾ ಹಿಲ್‌ನಲ್ಲಿರುವ ಎಲ್ಲ ಪ್ರಮುಖ ಸಚಿವಾಲಯಗಳನ್ನೂ ಅಲಂಕರಿಸಿದರು. ದೆಹಲಿ ರಾಜಕಾರಣದ ಶಕ್ತಿಕೇಂದ್ರಗಳಾದ ಸೌತ್ ಮತ್ತು ನಾರ್ತ್ ಬ್ಲಾಕ್‌ಗಳಿರುವ ರೈಸಿನಾ ಹಿಲ್, ಹಣಕಾಸು ಸಚಿವಾಲಯವೊಂದನ್ನು ಹೊರತುಪಡಿಸಿ ಮಿಕ್ಕೆಲ್ಲ ಬಲಾಢ್ಯ ಖಾತೆಗಳ ಬೀಡಾಗಿದೆ.
ಪಿ.ವಿ.ನರಸಿಂಹರಾವ್ ವಿದೇಶಾಂಗ ಮಂತ್ರಿಗಳಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿ, ಒಳ್ಳೆಯ ಹೆಸರು ಸಂಪಾದಿಸಿದರು. ಆದರೆ, ಅವರು ಗೃಹ ಖಾತೆಯಲ್ಲಿದ್ದಾಗ ಇಂದಿರಾ ಗಾಂಧಿಯವರ ಹತ್ಯೆಯಾಗಿ, ಸಿಖ್-ವಿರೋಧಿ ಹಿಂಸಾಚಾರ ಭುಗಿಲೆದ್ದಿತು. ಇದನ್ನು ಸರಿಯಾಗಿ ನಿಭಾಯಿಸುವಲ್ಲಿ ಪಿವಿಎನ್ ಸೋತರು. ಆದರೂ ಇಂದಿರಾ ಗಾಂಧಿಯವರ ಸಾವಿನ ನಂತರ ಪ್ರಧಾನಿಯಾದ ರಾಜೀವ್ ಗಾಂಧಿಯವರು ನರಸಿಂಹರಾವ್ ಅವರನ್ನು ತಮ್ಮ ಸಂಪುಟದಲ್ಲಿ ಉಳಿಸಿಕೊಂಡು, ಮೊದಲಿಗೆ ರಕ್ಷಣಾ ಸಚಿವರನ್ನಾಗಿ ಮಾಡಿದರು; ಬಳಿಕ ಹೊಸದಾಗಿ ಸೃಷ್ಟಿಸಲಾದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗೆ ವರ್ಗಾಯಿಸಿದರು; ಕೊನೆಗೆ ವಿದೇಶಾಂಗ ಖಾತೆಯನ್ನು ವಹಿಸಿಕೊಟ್ಟರು. ಆದರೆ, ರಾಜೀವ್ ಗಾಂಧಿಯವರು ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಪಿವಿಎನ್ ಅವರ ಸಲಹೆಯನ್ನು ಕೇಳುತ್ತಿರಲಿಲ್ಲ. ಏಕೆಂದರೆ, ಆ ದಿನಗಳಲ್ಲಿ ರಾಜೀವ್ ಗಾಂಧಿಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಅವರ ಹತ್ತಾರು ಪರಮಾಪ್ತರು ಮತ್ತು ನೆಹರು-ಗಾಂಧಿ ಕುಟುಂಬದ ಒಂದಿಷ್ಟು ಜನರೇ ‘ಸಮಸ್ತ ಚಟುವಟಿಕೆಗಳನ್ನೂ’ ನಡೆಸುತ್ತಿದ್ದರು. ಇದಕ್ಕಿಂತ ಮಿಗಿಲಾಗಿ, ರಾಜೀವ್ ಗಾಂಧಿ ಮತ್ತು ಪಿವಿಎನ್ ನಡುವೆ ತಲೆಮಾರಿನ ಅಂತರವಿತ್ತು. ಹೀಗಾಗಿ ರಾಜೀವ್ ಅವರು ಈ ಹಿರಿಯ ನಾಯಕನಿಂದ ಅಂತರವನ್ನು ಕಾಪಾಡಿಕೊಂಡಿದ್ದರು ಎನಿಸುತ್ತದೆ. ಇದರ ಜೊತೆಗೆ ರಾಜೀವ್ ಅವರನ್ನು ಮೇಲ್ಮಧ್ಯಮ ವರ್ಗದಿಂದ ಬಂದಿದ್ದ ಅವರ ಡೂನ್ ಸ್ಕೂಲ್‌ನ ಮಿತ್ರರು ಸುತ್ತುವರಿದಿದ್ದು, ಇವರೆಲ್ಲರೂ ಪಿವಿಎನ್ ಅವರಂತಹ ಹಳೆಯ ಕಾಲದ, ಸಂಪ್ರದಾಯಸ್ಥ ಹಿರಿಯ ನಾಯಕರೆಲ್ಲರ ಬಗ್ಗೆ ಪೂರ್ವಗ್ರಹವನ್ನು ಬೆಳೆಸಿಕೊಂಡಿದ್ದರು. ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಆಗಂತೂ ರಾಜೀವ್ ಅವರೂ ಅವರ ಗೆಳೆಯರೂ ಸದಾ ಚುಚ್ಚು ಚಮಚೆಗಳಲ್ಲಿ ತಿನ್ನುತ್ತ, ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದರು. ಆದರೆ, ನರಸಿಂಹರಾವ್ ಅವರು ಹಿಂದಿನ ಕಾಲದ ಹಿರಿಯರಂತೆ ಸಾಂಪ್ರದಾಯಿಕವಾಗಿ ಊಟ-ತಿಂಡಿ ಸೇವಿಸುತ್ತಿದ್ದವರಾಗಿದ್ದರು.
ಪಿವಿಎನ್ ಭಾರತದ ಡೆಂಗ್
ಪಿವಿಎನ್ ಅವರು ಪ್ರಧಾನಿಯಾದಾಗ ಅನುಷ್ಠಾನಕ್ಕೆ ತಂದ ಆರ್ಥಿಕ ಸುಧಾರಣೆಗಳನ್ನು ಮನೋಜ್ಞವಾಗಿ ಗುರುತಿಸಿರುವ ಲೇಖಕ ಗುರುಚರಣ್ ದಾಸ್ ಅವರು “ಪಿವಿಎನ್ ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯವಾಗಿದ್ದ ಸುಧಾರಣೆಗಳನ್ನು ಜಾರಿಗೆ ತಂದರು, ನಿಜ. ಆದರೆ ಅವರು ಈ ಕೆಲಸದಲ್ಲಿ ಎಂದೂ ಚೀನಾದ ಡೆಂಗ್ ಶಿಯಾವೋಪಿಂಗ್‌ನಷ್ಟು ಕ್ರಾಂತಿಕಾರಿಯಾಗಿರಲಿಲ್ಲ,” ಎಂದು ವಿಶ್ಲೇಷಿಸಿದ್ದಾರೆ. ಈ ಟೀಕೆ ಏನೇ ಇರಲಿ, ಡೆಂಗ್ ಮತ್ತು ಪಿವಿಎನ್ ನಡುವೆ ಒಂದು ವಿಷಯದಲ್ಲಂತೂ ಹೋಲಿಕೆ ಇದೆ. ಅದೇನೆಂದರೆ, ಇಬ್ಬರೂ ತಮ್ಮತಮ್ಮ ನಾಯಕರ ಅವಕೃಪೆಗೆ ತುತ್ತಾದವರೇ! ಚೀನಾದಲ್ಲಿ ಡೆಂಗ್‌ನನ್ನು ಮಾವೋ ಜೆಡಾಂಗ್ ದಶಕಗಳ ಕಾಲ ರಾಜಕೀಯ ವನವಾಸಕ್ಕೆ ದೂಡಿದರೆ, ರಾಜೀವ್ ಗಾಂಧಿಯವರು ಪಿವಿಎನ್ ಅವರನ್ನು ಕೆಲವರ್ಷಗಳ ಮಟ್ಟಿಗೆ ಅಂಚಿಗೆ ದೂಡಿದರು. ಅಲ್ಲಿ ಡೆಂಗ್ ಕೊನೆಗೆ ಮಾವೋನನ್ನು ಕೆಳಗುರುಳಿಸಿ, ಮತ್ತೆ ಅಧಿಕಾರಕ್ಕೇರಿದ; ಇಲ್ಲಿ ಪಿವಿಎನ್ ಕೂಡ ಪ್ರಧಾನಿಯಾಗಿ, ರಾಜೀವ್ ಅವರು ಪೂರೈಸಲಾಗದೆ ಅರ್ಧಂಬರ್ಧಕ್ಕೇ ಬಿಟ್ಟಿದ್ದ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಿದರು. ಇಲ್ಲೊಂದು ಘಟನೆಯನ್ನು ನೆನಪಿಸಿಕೊಳ್ಳಬೇಕು. ಅದೇನೆಂದರೆ, ರಾಜೀವ್ ಅವರು ಭಾರತದ ಪ್ರಧಾನಿಯಾಗಿ 1988ರಲ್ಲಿ ಬೀಜಿಂಗ್‌ಗೆ ಭೇಟಿ ಕೊಟ್ಟು, ಡೆಂಗ್ ಜೊತೆ ಮಾತುಕತೆ ನಡೆಸಿದ್ದರು. ನಿಜಕ್ಕೂ ಅವರಿಬ್ಬರ ಭೇಟಿಯು ಸಾಕಷ್ಟು ಹೆಸರು ಮಾಡಿತು. ಆದರೆ, ಆ ಸಮಯದಲ್ಲಿ ಚೀನಾದಲ್ಲಿ ನಡೆದ ಪ್ರತಿಯೊಂದು ಮಾತುಕತೆಗಳಿಂದಲೂ ಸ್ವತಃ ವಿದೇಶಾಂಗ ಸಚಿವರಾಗಿದ್ದ ನರಸಿಂಹರಾವ್ ಅವರನ್ನು ರಾಜೀವ್ ಗಾಂಧಿ ಬೇಕೆಂದೇ ಹೊರಗಿಟ್ಟಿದ್ದರು. ವ್ಯಂಗ್ಯದ ಸಂಗತಿಯೆಂದರೆ, ಇದಾದ ಕೆಲವು ವರ್ಷಗಳ ನಂತರ ಪಿವಿಎನ್ ಅವರನ್ನೇ ಸಮಕಾಲೀನ ಇತಿಹಾಸವು ʼಭಾರತದ ಪಾಲಿನ ಡೆಂಗ್ʼ ಎಂದು ಬಣ್ಣಿಸಿತು!
ನರಸಿಂಹರಾವ್ ಅವರು 1984 ಮತ್ತು 1989ರಲ್ಲಿ ಮಹಾರಾಷ್ಟ್ರದ ರಾಮ್‌ಟೇಕ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ದುರಂತವೆಂದರೆ, 1991ರಲ್ಲಿ ಕಾಂಗ್ರೆಸ್ ಪಕ್ಷ ಮೊದಲು ಇವರಿಗೆ ಟಿಕೆಟ್ಟನ್ನೇ ಕೊಟ್ಟಿರಲಿಲ್ಲ. ರಾಜೀವ್ ಗಾಂಧಿಯವರು ಪ್ರಣಬ್ ಮುಖರ್ಜಿಯವರನ್ನು ಅಂಚಿಗೆ ತಳ್ಳಿದಂತೆಯೇ ತಮ್ಮನ್ನೂ ತಳ್ಳಲಿದ್ದಾರೆ ಎನ್ನುವುದನ್ನು ಅರಿತ ಪಿವಿಎನ್, ರಾಜಕೀಯ ನಿವೃತ್ತಿಯ ಬಗ್ಗೆ ಆಲೋಚಿಸಲು ಶುರು ಮಾಡಿದ್ದರು. ಕೆಲವರ್ಷಗಳ ಹಿಂದೆ ರಾಜೀವ್ ಅವರನ್ನು ಪಕ್ಷದಿಂದಲೇ ಹೊರಹಾಕುವ ತಂತ್ರವನ್ನು ಅನುಸರಿಸಿದ್ದರೆ, ಈಗ ಪಿವಿಎನ್ ಅವರಿಗೆ ಟಿಕೆಟ್ ಕೊಡದೆ ತಮ್ಮ ʼಸಂದೇಶ’ವನ್ನು ರವಾನಿಸುವ ಉಪಾಯವನ್ನು ಮಾಡಿದರು. ಆದರೆ, 1991ರಲ್ಲಿ ಚುನಾವಣೆ ನಡೆಯುತ್ತಿದ್ದಾಗಲೇ ರಾಜೀವ್ ಗಾಂಧಿಯವರು ಬಾಂಬ್ ಸ್ಫೋಟಕ್ಕೆ ಬಲಿಯಾದರು. ಆಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಪಿವಿಎನ್ ಅವರೇ ವಹಿಸಬೇಕಾಯಿತು. ಇದು ಇನ್ನೊಂದು ವ್ಯಂಗ್ಯ!
ರಾಜೀವ್ ಗಾಂಧಿ ಮತ್ತು ಪಿವಿಎನ್ ತಮ್ಮತಮ್ಮದೇ ಆದ ಜಗತ್ತುಗಳಲ್ಲಿ ಬದುಕಿದ್ದರೆ, ಪಿವಿಎನ್ ಮತ್ತು ಸೋನಿಯಾ ಗಾಂಧಿ ಬೇರೆಬೇರೆ ಗ್ರಹಗಳಿಂದ ಬಂದವರಾಗಿದ್ದರು. ಇವರಿಬ್ಬರೂ ಎಂದೂ ಒಬ್ಬರಿಗೊಬ್ಬರು ಆತ್ಮೀಯರಾಗಲೇ ಇಲ್ಲ. ಹೀಗಾಗಿ, ಪಿವಿಎನ್ ಅವರು ತಮಗೆ ಸೋನಿಯಾ ಅವರ ಬೆಂಬಲ ಸಿಗುತ್ತದೆಂದು ನಿರೀಕ್ಷಿಸುವಂತೆಯೂ ಇರಲಿಲ್ಲ. ಈ ಸಂದರ್ಭದಲ್ಲಿ ಅವರು ಪ್ರಧಾನಿಯಾಗಲು ಕಾಂಗ್ರೆಸ್‌ನ ಚುನಾಯಿತ ಸಂಸದರನ್ನೇ ನೆಚ್ಚಿಕೊಳ್ಳಬೇಕಾಯಿತು. ಅದರಲ್ಲೂ ದಕ್ಷಿಣ ಭಾರತದಿಂದ ಗೆದ್ದು ಬಂದಿದ್ದ ಸಂಸದರಲ್ಲೇ ಅವರು ಈ ವಿಷಯದಲ್ಲಿ ಹೆಚ್ಚು ಅವಲಂಬಿಸಿದ್ದರು.
1991ರ ಜೂನ್ 20ರಂದು ಬೆಳಿಗ್ಗೆ ನಾನು ನರಸಿಂಹರಾವ್ ಅವರ ಮನೆಗೆ ಹೋದಾಗ ಅಲ್ಲಿ ಅವರು ಕೇವಲ ಒಬ್ಬೇಒಬ್ಬ ಗೆಳೆಯನೊಂದಿಗೆ ಮಾತನಾಡುತ್ತ ಕೂತಿದ್ದರೆಂಬ ಸಂಗತಿಯು ಒಂದು ತಪ್ಪು ಚಿತ್ರಣವನ್ನು ಕೊಡಬಹುದು. ಇನ್ನೂ ದೊಡ್ಡ ಸತ್ಯವೆಂದರೆ, ಅಂದು ಅವರೊಂದಿಗಿದ್ದ ಭಗವತ್ ಪ್ರಸಾದ್ ಝಾ ಕೂಡ ಕಾಂಗ್ರೆಸ್‌ನಲ್ಲಿ ತುಂಬಾ ಮುಖ್ಯವಾದ ನಾಯಕರೇನೂ ಆಗಿರಲಿಲ್ಲ. ಆದರೆ, ನಂತರ ಪ್ರಕಟವಾದ ನಟವರ್ ಸಿಂಗ್, ಶರದ್ ಪವಾರ್, ಫೋತೇದಾರ್ ಮತ್ತು ದಿವಂಗತ ಪಿ.ಸಿ.ಅಲೆಕ್ಸಾಂಡರ್ ಅವರ ಆತ್ಮವೃತ್ತಾಂತಗಳನ್ನು ನೋಡಿದಾಗ, ಆ ದಿನಗಳಲ್ಲಿ ದೆಹಲಿಯ ರಾಜಕೀಯ ವರ್ತುಲಗಳಲ್ಲೂ ಕಾಂಗ್ರೆಸ್‌ನ ಒಳಗೂ ಎಷ್ಟೊಂದು ರಾಜಕೀಯ ಚಟುವಟಿಕೆಗಳನು ನಡೆಯುತ್ತಿದ್ದವು ಎನ್ನುವುದು ಹೊರಜಗತ್ತಿಗೆ ಗೊತ್ತಾಯಿತು. ಆಗ ಪಿವಿಎನ್ ಅವರ ಗೆಳೆಯರೆಲ್ಲರೂ ತುಂಬಾ ಸಕ್ರಿಯರಾಗಿ ಅಖಾಡಕ್ಕೆ ಧುಮುಕಿ, ಅವರ ಪರವಾಗಿ ರಾಜಕಾರಣಿಗಳನ್ನೂ ಉದ್ಯಮಿಗಳನ್ನೂ ಒಲಿಸಿಕೊಳ್ಳುತ್ತಿದ್ದರು. ಮಹಾರಾಷ್ಟ್ರದವರಾದ ಪವಾರ್, ಮುಂಬೈನ ಉದ್ಯಮಿಗಳೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎನ್ನುವುದು ಇವರಿಗೆಲ್ಲ ಗೊತ್ತಿತ್ತು. ಹೀಗಾಗಿ, ಆ ಉದ್ಯಮಿಗಳನ್ನೆಲ್ಲ ಭೇಟಿಯಾದ ಈ ʼಗೆಳೆಯರ ಗುಂಪು,ʼ ಪ್ರಧಾನಿ ಹುದ್ದೆಗೆ ಪಿವಿಎನ್ ಅವರನ್ನು ಬೆಂಬಲಿಸುವಂತೆ, ಅದು ಸಾಧ್ಯವಾಗದೆ ಇದ್ದರೆ ತಟಸ್ಥವಾಗಿ ಉಳಿಯುವಂತೆ ಮನವೊಲಿಸತೊಡಗಿತು.
ರಾಷ್ಟ್ರೀಯ ಸರಕಾರದ ಕಲ್ಪನೆ
1991ರ ಜೂನ್ 20ರ ಸಂಜೆಯ ಹೊತ್ತಿಗೆ ಕಾಂಗ್ರೆಸ್ ಸಂಸದೀಯ ಪಕ್ಷವು ಪಿವಿಎನ್ ಅವರನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿತು. ಬಳಿಕ ರಾಷ್ಟ್ರಪತಿ ವೆಂಕಟರಾಮನ್ ಅವರು ತಾವು ಲೋಕಸಭೆಯಲ್ಲಿ ಅತ್ಯಂತ ಹೆಚ್ಚಿನ ಸಂಸದರನ್ನು ಹೊಂದಿರುವ ಪಕ್ಷದ ನಾಯಕನನ್ನು ಮಾತ್ರ ಸರಕಾರ ರಚಿಸಲು ಆಹ್ವಾನಿಸುವುದಾಗಿ ಹೇಳಿ, ಒಂದು ಸತ್ಸಂಪ್ರದಾಯವನ್ನು ರೂಢಿಗೆ ತಂದರು. ಜೊತೆಗೆ, ಹೊಸದಾಗಿ ಬರುವ ಸರಕಾರವು ಸಂಸತ್‌ನಲ್ಲಿ ತನಗಿರುವ ಬಹುಮತವನ್ನು ಸಾಬೀತುಪಡಿಸಲು ಒಂದು ತಿಂಗಳ ಕಾಲಾವಕಾಶ ಕೊಡುವುದಾಗಿಯೂ ಅವರು ಹೇಳಿದರು, ದೇಶವು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದ ಆ ಸಂದರ್ಭದಲ್ಲಿ ರಾಜಕೀಯ ಸ್ಥಿರತೆ ಇರುವಂತೆ ನೋಡಿಕೊಳ್ಳುವ ಕಡೆಗೆ ವೆಂಕಟರಾಮನ್ ಅವರು ತುಂಬಾ ಗಮನ ಕೊಟ್ಟಿದ್ದರು. ಆಗ ಅವರು ʼದೇಶದಲ್ಲಿ ಒಂದು ರಾಷ್ಟ್ರೀಯ ಸರಕಾರ ಇರಬೇಕು,ʼ ಎನ್ನುವ ಹೊಸ ಕಲ್ಪನೆಯನ್ನು ತೇಲಿಬಿಟ್ಟರು. ʼರಾಷ್ಟ್ರೀಯ ಸರಕಾರʼವೆಂದರೆ, ಚಾಲ್ತಿಯಲ್ಲಿರುವ ರಾಜಕೀಯ ಪಕ್ಷಗಳ ಪೈಕಿ ಎಲ್ಲ ಪಕ್ಷಗಳ ಬೆಂಬಲವೂ ಇರುವ, ಇಲ್ಲದಿದ್ದರೆ ಆದಷ್ಟೂ ಹೆಚ್ಚಿನ ಪಕ್ಷಗಳ ಬೆಂಬಲವಾದರೂ ಇರುವಂತಹ ಸರಕಾರ. ಆದರೆ, ವೆಂಕಟರಾಮನ್ ಅವರ ಈ ಚಿಂತನೆಗೆ ಯಾರ ಬೆಂಬಲವೂ ಸಿಕ್ಕಲಿಲ್ಲ ಆಗ. ಅವರು, ಸರಕಾರ ರಚಿಸುವಂತೆ ಪಿವಿಎನ್ ಅವರನ್ನು ಆಹ್ವಾನಿಸಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಅವರು, ಪ್ರತಿಪಕ್ಷಗಳ ನಾಯಕರನ್ನೆಲ್ಲ ಕರೆದು “ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವವರೆಗಾದರೂ ಹೊಸ ಸರಕಾರವು ಉಳಿಯಬೇಕು. ಇದಕ್ಕೆ ನೀವೆಲ್ಲರೂ ಬದ್ಧರಾಗಿರಬೇಕು,” ಎಂದು ಅನೌಪಚಾರಿಕವಾಗಿ ತಿಳಿಸಿದರು. ಪಿವಿಎನ್ ಅಂದು ರಾತ್ರಿ 7.30ಕ್ಕೆ ವೆಂಕಟರಾಮನ್ ಅವರನ್ನು ಭೇಟಿಯಾದರು. ಆಗ ರಾಷ್ಟ್ರಪತಿಗಳು ಕೂಡ ಪಿವಿಎನ್ ಅವರಿಗೆ ಸರಕಾರ ರಚಿಸುವಂತೆ ಆಹ್ವಾನ ನೀಡಿದರು. ಇದಾದ ಮರುದಿನ, ಅಂದರೆ 1991ರ ಜೂನ್ 21ರಂದು ಪಿವಿಎನ್ ಈ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆಗ ಅವರ 70ನೇ ಹುಟ್ಟುಹಬ್ಬಕ್ಕೆ ಇನ್ನು ಒಂದೇಒಂದು ವಾರ ಬಾಕಿಯಿತ್ತಷ್ಟೆ!
ಆದರೆ, ಇತ್ತೀಚೆಗೆ ಬಂದಿರುವ ಆತ್ಮಕತೆಯೊಂದು ಬೇರೆಯದೇ ಕತೆಯನ್ನು ಹೇಳಿದೆ. ಇದರ ಪ್ರಕಾರ, “ಸೋನಿಯಾ ಗಾಂಧಿ ಮತ್ತು ನೆಹರು-ಗಾಂಧಿ ಕುಟುಂಬದ ನಿಷ್ಠರು ಪ್ರಧಾನಿ ಸ್ಥಾನಕ್ಕೆ ಪವಾರ್ ಮತ್ತು ಅರ್ಜುನ್ ಸಿಂಗ್ ಅವರನ್ನು ಬಿಟ್ಟು, ಪಿ.ವಿ.ನರಸಿಂಹರಾವ್ ಅವರನ್ನು ಬೆಂಬಲಿಸಿದರು. ಇಲ್ಲದೆ ಹೋಗಿದ್ದರೆ ಅವರು ಪ್ರಧಾನಿಯಾಗುತ್ತಿರಲಿಲ್ಲ!” 1991ರ ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್ಸಿನವರಲ್ಲೆಲ್ಲ “ಈ ಬಾರಿ ನಮ್ಮ ಪಕ್ಷ ಗೆದ್ದು ಬರಲಿದ್ದು, ರಾಜೀವ್ ಗಾಂಧಿಯವರು ಪ್ರಧಾನಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಇಂದಿರಾ ಗಾಂಧಿಯವರು 1980ರಲ್ಲಿ ಮತ್ತೆ ಹೇಗೆ ಪುಟಿದೆದ್ದು ಬಂದಂತೆಯೇ ಈ ಸಲ ರಾಜೀವ್ ತಮ್ಮ ಕೈಚಳಕವನ್ನು ತೋರಿಸಲಿದ್ದಾರೆ,” ಎಂದುಕೊಂಡಿದ್ದರು. ಆದರೆ, ಅವರು ಹಠಾತ್ತನೆ ಸಾವಿಗೆ ತುತ್ತಾದ ಮೇಲೆ, ಯಾರು ದೇಶದ ಮುಂದಿನ ಪ್ರಧಾನಿಯಾಗಬೇಕೆನ್ನುವುದನ್ನು ಅವರ ವಾರಸುದಾರರು ತೀರ್ಮಾನಿಸಬೇಕಾಗಿ ಬಂತು. ಆಗ ಅವರು “ಇತರರಿಗಿಂತ ನರಸಿಂಹರಾವ್ ಅವರೇ ಮೇಲು. ಏಕೆಂದರೆ, ಇವರು ತಾವು ಹೇಳಿದಂತೆ ಕೇಳಿಕೊಂಡಿರುತ್ತಾರೆ. ಏಕೆಂದರೆ, ಇವರಿಗೆ ಈಗಾಗಲೇ ಎಪ್ಪತ್ತು ವರ್ಷವಾಗಿದೆ. ಜೊತೆಗೆ ಇವರ ಹಿಂದೆ ಯಾವುದೇ ದೊಡ್ಡ ಬಲವೂ ಇಲ್ಲ,” ಎಂದುಕೊಂಡರು ಎನಿಸುತ್ತದೆ. ಆದರೆ, ಇದು ತೀರಾ ಸರಳವಾದ ವಿವರಣೆಯಾಯಿತು. ದಶಕಗಳ ಕಾಲ ಕಾಂಗ್ರೆಸ್ಸಿನಲ್ಲಿದ್ದು, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯನ್ನು ಸೇರಿದ ಹಿರಿಯ ನಾಯಕ ನಟವರ್ ಸಿಂಗ್ ಅವರ ಪ್ರಕಾರ “1991ರಲ್ಲಿ ಸೋನಿಯಾ ಗಾಂಧಿಯವರ ಮನಸ್ಸಿನಲ್ಲಿ ಬೇರೆ ಹೆಸರುಗಳಿದ್ದವು. ಮುಖ್ಯವಾಗಿ ಅವರು ಶಂಕರ್ ದಯಾಳ್ ಶರ್ಮ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸುವ ಆಲೋಚನೆಯನ್ನು ಹೊಂದಿದ್ದರು. ಆದರೆ, ಶರ್ಮ ಅವರು ತಮ್ಮ ಅನಾರೋಗ್ಯದ ಕಾರಣವನ್ನು ನೀಡಿ ಈ ಪ್ರಸ್ತಾಪವನ್ನು ನಿರಾಕರಿಸಿದರು. ಇದಕ್ಕಿಂತ ಹೆಚ್ಚಾಗಿ ಶರ್ಮ ಅವರು ಆಗ ಉಪರಾಷ್ಟ್ರಪತಿಗಳಾಗಿದ್ದು, ಇನ್ನೂ ಒಂದು ವರ್ಷ ಅವರ ಅಧಿಕಾರಾವಧಿ ಬಾಕಿ ಇತ್ತು. ಹೀಗಿದ್ದಾಗ, ಆ ಸುರಕ್ಷಿತ ಅಧಿಕಾರವನ್ನು ಬಿಟ್ಟು, ಒಂದು ಅಲ್ಪಮತದ ಸರಕಾರವನ್ನು ಮುನ್ನಡೆಸುವುದು ಅವರಿಗೆ ಇಷ್ಟವಾಗಲಿಲ್ಲ ಎನಿಸುತ್ತದೆ. ಇಷ್ಟೇ ಅಲ್ಲ, ತಾವು ಉಪರಾಷ್ಟ್ರಪತಿ ಹುದ್ದೆಯಲ್ಲೇ ಮುಂದುವರಿದೆ ಸಹಜವಾಗಿಯೇ ರಾಷ್ಟ್ರಪತಿಯೂ ಆಗಬಹುದು; ಹಾಗೇನಾದರೂ ಆದರೆ ಯಾವ ರಗಳೆಯೂ ಇಲ್ಲದೆ ಐದು ವರ್ಷಗಳ ಕಾಲ ಹಾಯಾಗಿ ಅಧಿಕಾರದಲ್ಲಿರಬಹುದಲ್ಲ ಎಂದು ಶರ್ಮ ಯೋಚಿಸಿರಬೇಕು.”
ಸಾಮಾನ್ಯವಾಗಿ ಇತಿಹಾಸಜ್ಞರು ಸಂಭಾವ್ಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಅರ್ಥಶಾಸ್ತ್ರಜ್ಞರು ಮಾತ್ರ ಸಂಭವಿಸಬಹುದಾಗಿದ್ದ ಘಟನೆಗಳನ್ನೂ ಗಂಭೀರವಾಗಿ ಪರಿಗಣಿಸುತ್ತಾರೆ. ರಾಜಕೀಯ ವಿಶ್ಲೇಷಕರ ಪೈಕಿ ಎಲ್ಲೋ ಕೆಲವರು ಮಾತ್ರ ಆಶ್ಚರ್ಯ ಹುಟ್ಟಿಸುವಂತೆ 1991ರಲ್ಲಿ ನಡೆಯಬಹುದಾಗಿದ್ದ ಘಟನೆಗಳ ಬಗ್ಗೆ ಕೇಳುತ್ತಾರೆ. ರಾಜೀವ್ ಗಾಂಧಿಯವರು ಆಗ ಬಾಂಬ್ ಸ್ಫೋಟಕ್ಕೆ ಬಲಿಯಾಗದೆ ಇದ್ದಿದ್ದರೆ ಏನಾಗುತ್ತಿತ್ತು? ಆಗಲೂ ಕಾಂಗ್ರೆಸ್(ಐ) ಮತ್ತೆ ಅಧಿಕಾರಕ್ಕೆ ಬರುತ್ತಿತ್ತೇ? ಒಂದು ವೇಳೆ ಆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಲು ವಿಫಲವಾಗಿದ್ದರೆ ರಾಜೀವ್ ಗಾಂಧಿಯವರು ತಮ್ಮ ಪಕ್ಷದ ನೇತೃತ್ವದಲ್ಲಿ ಮೈತ್ರಿ ಸರಕಾರ ರಚಿಸಿ, ತಾವು ಅದರ ಚುಕ್ಕಾಣಿಯನ್ನು ಹಿಡಿಯುತ್ತಿದ್ದರೆ? ಇಂತಹ ಪ್ರಶ್ನೆಗಳು ಇಲ್ಲಿವೆ. ಆದರೆ ಅಂದಿನ ವಸ್ತುಸ್ಥಿತಿಯನ್ನು ಗಮನಿಸಿದರೆ, ರಾಜೀವ್ ಅವರು ಮೈತ್ರಿ ಸರಕಾರವನ್ನು ರಚಿಸುತ್ತಿರಲಿಲ್ಲ ಎನಿಸುತ್ತದೆ.
ಏಕೆಂದರೆ, ಇದಕ್ಕಿಂತ ಎರಡು ವರ್ಷ ಮೊದಲು, ಅಂದರೆ 1989ರ ಚುನಾವಣೆಯಲ್ಲಿ ರಾಜೀವ್ ನೇತೃತ್ವದ ಕಾಂಗ್ರೆಸ್ ತನ್ನ ಇತಿಹಾಸದಲ್ಲೇ ಕಂಡುಕೇಳರಿಯದ ರೀತಿಯಲ್ಲಿ, ಅತ್ಯಂತ ದಯನೀಯವಾಗಿ ಮಣ್ಣು ಮುಕ್ಕಿತ್ತು. 1984ರ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇಕಡ 49.1ರಷ್ಟು ಮತಗಳನ್ನು ಗಳಿಸಿದ್ದ ಈ ಪಕ್ಷದ ಮತಗಳಿಕೆಯು ಕೇವಲ ಐದು ವರ್ಷಗಳಲ್ಲಿ ಶೇಕಡ 39.5ಕ್ಕೆ ಕುಸಿದಿತ್ತು. ಹಿಂದಿನ ಚುನಾವಣೆಯಲ್ಲಿ ಲೋಕಸಭೆಯಲ್ಲಿ 404 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಟಿಕೆಟ್ ಮೇಲೆ 1989ರಲ್ಲಿ ಗೆದ್ದು ಬಂದವರು ಕೇವಲ 197ಮಂದಿ ಮಾತ್ರ. ಪ್ರಜಾಸತಾತ್ಮಕ ರಾಜಕಾರಣದಲ್ಲಿ ಇಂತಹ ಸೋಲುಗಳುಂಟಾದರೆ ಪಕ್ಷದ ಅಧ್ಯಕ್ಷರು ಸಾಮಾನ್ಯವಾಗಿ ತಮ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ. ಆದರೆ, 1989ರಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ರಾಜೀವ್ ಗಾಂಧಿ ಮಾತ್ರ ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆಯಲಿಲ್ಲ.
ಕಾಂಗ್ರೆಸ್‌ನಲ್ಲಿ ರಾಜೀವ್ ಅವರ ನಾಯಕತ್ವಕ್ಕೆ ಸಡ್ಡು ಹೊಡೆದಿದ್ದವರೆಲ್ಲರೂ ಅಷ್ಟು ಹೊತ್ತಿಗಾಗಲೇ ಪಕ್ಷವನ್ನು ತೊರೆದು, ವಿಶ್ವನಾಥ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ಜನತಾದಳವನ್ನು ಕಟ್ಟಿಕೊಂಡಿದ್ದರು. ಆದರೆ, ಕಾಂಗ್ರೆಸ್‌ನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದವರಿಗೆ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠೆ ತೋರದೆ ಬೇರೆ ದಾರಿ ಇರಲಿಲ್ಲ. ಈ ನಿಷ್ಠಾವಂತರ ಗುಂಪಿನಲ್ಲಿ ನೆಹರು ಮತ್ತು ಇಂದಿರಾ ಗಾಂಧಿಯವರ ಕಾಲದಲ್ಲಿ ರಾಜಕೀಯಕ್ಕೆ ಬಂದವರೂ ಇದ್ದರು; ಆನಂತರ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿಯವರ ಸುತ್ತ ಗಿರಕಿ ಹೊಡೆದುಕೊಂಡಿದ್ದು, ಪಕ್ಷಕ್ಕೆ ಸೇರಿದವರೂ ಇದ್ದರು. ಆದರೆ, ಇವರೆಲ್ಲರೂ ರಾಜೀವ್ ಗಾಂಧಿಯೇ ತಮ್ಮ ಅಧಿನಾಯಕ ಎಂದು ಒಪ್ಪಿಕೊಂಡಿದ್ದರು.
ಜನಪ್ರಿಯತೆಯನ್ನು ಸಂಪಾದಿಸುವ ರಾಜಕಾರಣ, ಕೆಚ್ಚೆದೆಯ ನಾಯಕಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಮತ್ತು ಕೊನೆಗೆ ಅವರ ದುರಂತ ಸಾವು- ಈ ಮೂರೂ ಅಂಶಗಳು ಇಂದಿರಾ ಗಾಂಧಿಯವರ ಸುತ್ತ ಒಂದು ದೊಡ್ಡ ಪ್ರಭಾವಳಿಯನ್ನು ಸೃಷ್ಟಿಸಿದ್ದವು. ಹೀಗಾಗಿ, ಅದೆಷ್ಟೋ ಕಾಂಗ್ರೆಸ್ ನಾಯಕರು ʼಭಾರತೀಯ ರಾಷ್ಟ್ರೀಯ ಕಾಂಗ್ರೆಸ್ʼ ಪಕ್ಷವನ್ನು ಆ ಹೆಸರಿನಿಂದ ಕರೆಯದೆ ʼಇಂದಿರಾ ಕಾಂಗ್ರೆಸ್ʼ ಎಂದು ಕರೆಯಲು ಖುಷಿಪಡುತ್ತಿದ್ದರು. ಇಂದಿರಾ ಗಾಂಧಿಯವರ ಈ ವ್ಯಕ್ತಿತ್ವವು ರಾಜೀವ್ ಗಾಂಧಿಯವರಿಗೆ ಲಾಭವನ್ನು ತಂದುಕೊಟ್ಟಿತು. ಇಷ್ಟೇ ಅಲ್ಲದೆ, ರಾಜೀವ್ ಅವರಿಗೆ ಉಘೇಉಘೇ ಎನ್ನುತ್ತ, ಅವರನ್ನು ಪ್ರಶ್ನಾತೀತ ನಾಯಕನೆಂಬಂತೆ ಬಿಂಬಿಸುತ್ತಿದ್ದ ಅವರ ವಂದಿಮಾಗಧರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷದಲ್ಲಿದ್ದರು. ಆದರೆ, ಕಾಂಗ್ರೆಸ್‌ನ ಜನಬೆಂಬಲದ ನೆಲೆ ಕುಸಿದು, ಅದರ ಎದುರಾಳಿಗಳ ಪ್ರವರ್ಧಮಾನಕ್ಕೆ ಬಂದಾಗ ಈ ವಂದಿಮಾಗಧರ ʼರಾಜೀವ್ ಭಜನೆ’ಯು ಎಂತಹ ವ್ಯರ್ಥವಾದ ಕೆಲಸ ಎನ್ನುವುದು ಗೊತ್ತಾಯಿತು.
(ಮುಂದುವರಿಯುವುದು)
- ಪರ್ವಕಾಲದ ಪುರುಷೋತ್ತಮ ಕೃತಿಯ ಈ ರೋಚಕ ಅಧ್ಯಾಯದ ಹಿಂದಿನ ಭಾಗ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಬಿ.ಎಸ್. ಜಯಪ್ರಕಾಶ ನಾರಾಯಣ
- ಕನ್ನಡ ಸಾಹಿತ್ಯ ಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು, ಪತ್ರಕರ್ತರು ಕೂಡ. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ‘ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ’, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ‘ನಾನು ಮಲಾಲ’, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ‘ಭಾರತದ ಬೆಸುಗೆ’, ವಿಜಯ ಮಲ್ಯ ಕುರಿತ ‘ಸೊಗಸುಗಾರನ ಏಳುಬೀಳು’, ಓಂ ಸ್ವಾಮಿ ಅವರ ಆತ್ಮಕಥೆ ‘ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ’, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ‘ಕದಡಿದ ಕಣಿವೆ’, ಸೇರಿದಂತೆ ಹತ್ತಾರು ಮಹತ್ತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಈಗ ಓಶೋ ಅವರು ಶಿಕ್ಷಣದ ಕುರಿತು ಮಾಡಿರುವ ಅಪರೂಪದ ಭಾಷಣಗಳುಳ್ಳ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’ ಕೃತಿ ಕೆಲ ದಿನಗಳ ಹಿಂದೆ ಓದುಗರ ಕೈ ಸೇರಿದೆ. ಸಂಜಯ ಬರೂ ಅವರ ‘1991: ಹೌ ಪಿ.ವಿ.ನರಸಿಂಹರಾವ್ ಮೇಡ್ ಹಿಸ್ಟರಿʼ ಕೃತಿಯು ಕನ್ನಡದಲ್ಲಿ ’ʼಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವೀರ ಸಾವರ್ಕರ್ ಅವರನ್ನು ಕುರಿತ ʼಸಾವರ್ಕರ್-ಹಿಂದುತ್ವದ ಜನಕನ ನಿಜಕತೆʼ ಕೃತಿಯು ಲೋಕಾರ್ಪಣೆಯಾಗಿದೆ. ಸದ್ಯಕ್ಕೆ, ಇವರು ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಕುರಿತ ಬೃಹತ್ ಗ್ರಂಥವನ್ನು ಅನುವಾದಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಎರಡು ಸಲ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಜೇಪಿಗೆ ಸಂದಿವೆ.