ದೇಶದ ಹಲವು ಭಾಗಗಳಲ್ಲಿ ಭಾರೀ ನೆಟ್ವರ್ಕ್ ಹೊಂದಿರುವ ಈ ಮಹಿಳೆ, ಕೆಲ ಯುವತಿಯರನ್ನು ದೇಶದ ವಿವಿಧೆಡೆ ವೇಶ್ಯಾವಾಟಿಕೆಗೆ ತಳ್ಳಿದರೆ, ಇನ್ನು ಕೆಲವರನ್ನು ಅರಬ್ ದೇಶಗಳಿಗೆ ರವಾನಿಸಿರುವ ಅನುಮಾನವೂ ಇದೆ.
M Krishnappa Chikkaballapura
ಚಿಕ್ಕಬಳ್ಳಾಪುರ/ಬಂಗಾರಪೇಟೆ: ಮುಗ್ಧ ಬಾಲಕಿಯರು ಹಾಗೂ ಯುವತಿಯರನ್ನು ಬಣ್ಣದ ಮಾತುಗಳಿಂದ ನಂಬಿಸಿ, ವಂಚಿಸಿ ದೆಹಲಿ ಮತ್ತಿತರೆ ಕಡೆಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುತ್ತಿದ್ದ ಖತರ್ನಾಕ್ ಮಹಿಳೆಯೊಬ್ಬಳು ಚಿಕ್ಕಬಳ್ಳಾಪುರ ಸೆನ್ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
2016-17ರಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಬಂಗಾರಪೇಟೆ ರಾಮಕೃಷ್ಣ ಹೆಗಡೆ ಕಾಲೋನಿ ನಿವಾಸಿ ಶ್ಯಾಮಲಾ (60-62) ಎಂಬ ಮಹಿಳೆ ಕೊನೆಗೂ ನಾಲ್ಕು ವರ್ಷಗಳ ನಂತರ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಶನಿವಾರ (ಏಪ್ರಿಲ್ 17) ಬೆಳಗ್ಗೆಯೇ ಆ ಮಹಿಳೆಯ ಮನೆಗೆ ಲಗ್ಗೆ ಇಟ್ಟ ಪೊಲೀಸರು, ಅಕ್ಕಪಕ್ಕದವರಿಗೂ ಗೊತ್ತಾಗದಂತೆ ಬಲೆಗೆ ಬೀಳಿಸಿಕೊಂಡಿದ್ದಾರೆ. ಶುಕ್ರವಾರವೇ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯಕ್ಕೆ ಶ್ಯಾಮಲಾ ಚಿಂತಾಮಣಿಯ ಮಹಿಳಾ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾಳೆ.
ಚಿಕ್ಕಬಳ್ಳಾಪುರ, ಕೋಲಾರ, ಬಂಗಾರಪೇಟೆ ಮುಂತಾದ ಕಡೆಗಳಲ್ಲಿ ಬಡತನದಲ್ಲಿರುವ ಹೆಣ್ಣು ಮಕ್ಕಳಿಗೆ ಹಣದ ಆಮಿಷವೊಡ್ಡಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಶ್ಯಾಮಲಾ; ಆ ಯುವತಿಯರನ್ನು ಮುಂಬಯಿ, ದೆಹಲಿ ಸೇರಿದಂತೆ ದೇಶದ ನಾನಾ ಕಡೆಗಳಿಗೆ ಕರೆದುಕೊಂಡು ಹೋಗಿ ಅವರನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ತಳ್ಳುತ್ತಿದ್ದಳು. ಅನೇಕ ಯುವತಿಯರು ಈಕೆಯ ಬಲೆಗೆ ಬಿದ್ದು ಬದುಕು ಹಾಳು ಮಾಡಿಕೊಂಡಿದ್ದು, ಅದೆಲ್ಲ ವಿಷಯವನ್ನೂ ಚಿಕ್ಕಬಳ್ಳಾಪುರ ಪೊಲೀಸರು ಹೊರಗೆಳೆಯುವುದು ಪಕ್ಕಾ.
ದೇಶದ ಹಲವು ಭಾಗಗಳಲ್ಲಿ ಭಾರೀ ನೆಟ್ವರ್ಕ್ ಹೊಂದಿರುವ ಈ ಕಿಲಾಡಿ ಮಹಿಳೆ ಕೆಲ ಯುವತಿಯರನ್ನು ದೇಶದ ವಿವಿಧೆಡೆ ವೇಶ್ಯಾವಾಟಿಕೆಗೆ ತಳ್ಳಿದರೆ, ಇನ್ನು ಕೆಲವರನ್ನು ಅರಬ್ ದೇಶಗಳಿಗೆ ರವಾನಿಸಿರುವ ಅನುಮಾನವೂ ಇದೆ. ಮಾನವ ಕಳ್ಳಸಾಗಾಣಿಕೆಯ ಆಯಾಮದಲ್ಲೂ ಆಕೆಯ ವಿರುದ್ಧ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ.
ಬಲೆಗೆ ಬಿದ್ದಿದ್ದು ಹೇಗೆ?
ಕೆಲ ದಶಕಗಳಿಂದಲೂ ಇದೇ ದಂಧೆ ಮಾಡುತ್ತಿದ್ದ ಈಕೆಯ ಬಗ್ಗೆ ಬಂಗಾರಪೇಟೆಯಲ್ಲಿ ಅಲ್ಲಲ್ಲಿ ಗುಸುಗುಸು ಇತ್ತು. ಸದ್ದಿಲ್ಲದೆ ನಡೆಸುತ್ತಿದ್ದ ಈ ಕತ್ತಲ ದಂಧೆ ಸ್ಥಳೀಯ ಪೊಲೀಸರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಈ ನಡುವೆ 2017ರಲ್ಲೇ ಈಕೆಯ ಗ್ಯಾಂಗ್‌ನ ಕೆಲವರನ್ನು ಸೆರೆ ಹಿಡಿದಿದ್ದ ಪೋಲೀಸರಿಂದ ಶ್ಯಾಮಲಾ ಕೂದಲೆಳೆಯಂತರದಲ್ಲಿ ತಪ್ಪಿಸಿಕೊಂಡಿದ್ದಳು. ಆಗಿನಿಂದಲೂ ಪೊಲೀಸರು ಆಕೆಗಾಗಿ ಬಲೆ ಬೀಸಿ ಕಾಯುತ್ತಿದ್ದರು. ಬಂಗಾರಪೇಟೆಯಲ್ಲಿ ಆಕೆಯ ಮನೆಯ ಆಸುಪಾಸಿನಲ್ಲಿ ಮಫ್ತಿ ರೌಂಡ್ಸ್ ಕೂಡ ಹೊಡೆದಿದ್ದರು. ಕೊನೆಗೂ ಶನಿವಾರ ಬೆಳಗ್ಗೆ ಪೊಲೀಸರು ಶ್ಯಾಮಲಾ ಮನೆ ಬಾಗಿಲು ಬಡಿದಿದ್ದಾರೆ.
ದೂರು ಕೊಟ್ಟಿದ್ದ ಸಂತ್ರಸ್ಥ ಯುವತಿ
ಕೆಲ ವರ್ಷಗಳಿಂದ ಚಿಕ್ಕಬಳ್ಳಾಪುರ ಮೂಲದ ಯುವತಿಯೊಬ್ಬರು ನಾಪತ್ತೆಯಾಗಿದ್ದರು. ಆಕೆಯ ಪೋಷಕರು ಮಗಳಿಗಾಗಿ ಹುಡುಕಾಡಿ ಸುಸ್ತಾಗಿದ್ದರು. ಆದರೆ, ಈ ದುಷ್ಟ ಹೆಣ್ಣು ಆ ಮುಗ್ಧ ಬಾಲಕಿಗೆ ಬಣ್ಣದ ಮಾತುಗಳನ್ನು ಹೇಳಿ ಕರೆದುಕೊಂಡು ಹೋಗಿದ್ದಳು. ಪಾಪಿ ಮಹಿಳೆಯ ಜತೆ ಮುಂಬಯಿ, ದೆಹಲಿ ಸುತ್ತಿದ್ದ ಆ ಯುವತಿಗೆ ಅಲ್ಲಿನ ಕರಾಳತೆಯ ದರ್ಶನವಾಗಿತ್ತು. ಪೋಷಕರನ್ನು ಸೇರಿಕೊಳ್ಳಲು ಆ ಯುವತಿ ಮಾಡಿದ್ದ ಎಲ್ಲ ಪ್ರಯತ್ನಗಳನ್ನು ದುಷ್ಟ ಮಹಿಳೆ ವಿಫಲಗೊಳಿಸಿ ಅಮಾನುಷವಾಗಿ ನಡೆದುಕೊಂಡಿದ್ದಳು. ರಕ್ಕಸರೂಪಿಯಾಗಿ ಆಕೆಗೆ ಕಾಟ ಕೊಟ್ಟಿದ್ದಳೆಂಬ ಮಾಹಿತಿ ಸಿಕ್ಕಿದೆ. ಕೆಲ ತಿಂಗಳ ಹಿಂದೆ ಹೇಗೋ ತಪ್ಪಿಕೊಂಡು ಬಂದ ಯುವತಿ ಚಿಕ್ಕಬಳ್ಳಾಪುರದಲ್ಲಿ ತನ್ನ ಪೋಷಕರ ಮಡಿಲು ಸೇರಿಕೊಂಡಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೋಷಕರು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಯುವತಿಯು ಪೊಲೀಸರಿಗೆ ಶ್ಯಾಮಲಾಳ ಫೊಟೋ ನೀಡಿದ್ದಾಳೆ. ಹಳೆಯ ಚೆರಿತ್ರೆಯನ್ನೆಲ್ಲ ಕೆದಕಿದ ಮೇಲೆ ಆ ಖತರ್ನಾಕ್ ಲೇಡಿ ಶ್ಯಾಮಲಾ ಎನ್ನುವುದು ಖಾಕಿಗಳಿಗೆ ಕನ್‌ಫರ್ಮ್ ಆಗಿದೆ. ಅಲ್ಲಿಗೆ ಪೊಲೀಸರ ಭರ್ಜರಿ ಸ್ಕೆಚ್ ರೆಡಿಯಾಯಿತಲ್ಲದೆ, ಬಂಗಾರಪೇಟೆಗೆ ಸೆನ್ ಪೊಲೀಸರ ಪ್ರವೇಶವೂ ಆಯಿತು.
ಬಂಗಾರಪೇಟೆಯಲ್ಲಿ ದಾದಾಗಿರಿ ಮಾಡಿದ್ದಳು!!
ಪೊಲೀಸರು ಸಂತ್ರಸ್ಥ ಯುವತಿಯಿಂದ ಎಲ್ಲ ಮಾಹಿತಿ ಕಲೆಹಾಕಿದ ಮೇಲೆ ಬಹಳ ದಿನದ ಹಿಂದೆ ಒಂದು ದಿನ ಶ್ಯಾಮಲಾ ಮನೆಯ ಬಾಗಿಲು ಬಡಿದಿದ್ದಾರೆ. ಆದರೆ, ಪೊಲೀಸರ ಜತೆ ಬರಲು ನಿರಾಕರಿಸಿದ ಆಕೆ ಖಾಕಿಗಳ ಮೇಲೆಯೇ ದಾದಾಗಿರಿ ಮಾಡಿದ್ದಳು. ಮನೆಯಲ್ಲಿ ರಂಪಾಟ ಮಾಡಿ, ವಾರಂಟ್ ಇಲ್ಲದೆ ನನ್ನ ಮನೆಗೆ ಬರಲು ನಿಮಗೆಷ್ಟು ಧೈರ್ಯ ಎಂದು ಧಮ್ಕಿ ಬೇರೆ ಹಾಕಿದ್ದಳು. ಆದರೆ, ಆಕೆಯ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆವತ್ತು ಸೈಲಂಟಾಗಿಯೇ ಮನೆಯಿಂದ ಹೊರಬಂದು ಬರೋಬ್ಬರಿ ಕೆಲ ತಿಂಗಳ ಕಾಲ ಸ್ಕೆಚ್ ಹಾಕಿ ಪಕ್ಕಾ ಆಪರೇಷನ್‌ಗೆ ಇಳಿದಿದ್ದರು.
ಚಿಕ್ಕಬಳ್ಳಾಪುರಕ್ಕೆ ಬಂದಿದ್ದಳಾ ಖತರ್ನಾಕ್ ಲೇಡಿ
ಸಂತ್ರಸ್ಥ ಯುವತಿ ತಪ್ಪಿಸಿಕೊಂಡ ಮೇಲೆ ಚಿಕ್ಕಬಳ್ಳಾಪುರಕ್ಕೂ ಎಡತಾಕಿದ್ದ ಶ್ಯಾಮಲಾ ಇಡೀ ನಗರದಲ್ಲಿ ಯುವತಿಯನ್ನು ಶೋಧಿಸಿರಬಹುದು ಎಂಬ ಅನುಮಾನವೂ ಕಾಡುತ್ತಿದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯ ಗ್ಯಾಂಗ್ ಚಿಕ್ಕಬಳ್ಳಾಪುರದಲ್ಲಿ ಯುವತಿಗಾಗಿ ಹೆಜ್ಜೆ ಹೆಜ್ಜೆಗೂ ಶೋಧ ನಡೆಸಿರಬಹದು ಎನ್ನಲಾಗಿದೆ. ಈ ಕಾರಣದಿಂದ ಪೊಲೀಸರ ಬಲೆಗೆ ಬೀಳಬಹುದು ಎಂದು ಹೆದರಿದ್ದ ಶ್ಯಾಮಲಾ, ತನ್ನ ಕಾರ್ಯಕ್ಷೇತ್ರ ದೆಹಲಿಯಿಂದ ಬಂಗಾರಪೇಟೆಗೆ ಶಿಫ್ಟ್ ಆಗಿದ್ದಳು. ಅದೇ ಆಕೆಗೆ ಮುಳುವಾಯಿತು.
ದೆಹಲಿಯಲ್ಲೂ ಈಕೆ ವಿರುದ್ಧ ಕೇಸುಗಳಿವೆ!
ಕತ್ತಲ ದಂಧೆಯಲ್ಲಿ ಮುಳುಗೇಳುತ್ತಿದ್ದ ಶ್ಯಾಮಲಾ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಸಿಕೆನ್ಯೂಸ್ ನೌಗೆ ಸಿಕ್ಕಿದೆ. ಮುಖ್ಯವಾಗಿ ದಿಲ್ಲಿಯ ಕೆಲ ಠಾಣೆಗಳಲ್ಲಿ ಈಕೆಯ ವಿರುದ್ಧ ಕೇಸುಗಳಿದ್ದು, ಆಗಾಗ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾಳೆ ಎನ್ನಲಾಗಿದೆ. ಇವಳ ಇನ್ನೊಬ್ಬ ಸಹಚರ ಕುಖ್ಯಾತ ಅಪರಾಧಿ ಎಂಬ ಮಾಹಿತಿಯೂ ಇದೆ. ಉತ್ತರ ಭಾರತದಲ್ಲಿ ದೊಡ್ಡ ನೆಟ್‌ವರ್ಕ್ ಹೊಂದಿರುವ ಶ್ಯಾಮಲಾ ಅಲ್ಲಿಗೆಲ್ಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಬಡ ಯುವತಿರನ್ನೇ ಕಳಿಸುತ್ತಿದ್ದಳೆಂದು ಗೊತ್ತಾಗಿದೆ. ತನ್ನ ಸಂಬಂಧಿಕರಲ್ಲಿ ಕೆಲ ಹೆಣ್ಣು ಮಕ್ಕಳನ್ನೇ ಈ ಪಾಪಕೂಪಕ್ಕೆ ತಳ್ಳಿದ್ದಳೆನ್ನಲಾದ ಈ ಹೆಂಗಸು, ಬಂಗಾರಪೇಟೆಯಲ್ಲೂ ತನ್ನ ಕಬಂಧಬಾಹುಗಳನ್ನು ಚಾಚಿದ್ದಳು ಎಂದು ಗೊತ್ತಾಗಿದೆ. ವಿಚಿತ್ರವೆಂದರೆ, ಬಂಗಾರಪೇಟೆ ಠಾಣೆಯಲ್ಲಿ ಈಕೆಯ ಬಗ್ಗೆ ಒಂದು ಪ್ರಕರಣವೂ ದಾಖಲಾಗಿಲ್ಲ!!
****
Lead Photo by lalesh aldarwish from Pexels / ಈ ಚಿತ್ರವನ್ನು ಕೇವಲ ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ.