ಗುಡಿಬಂಡೆ: ಇತ್ತಿಚೆಗೆ ನಡೆದ ಪ.ಪಂ ಚುನಾವಣೆಯಲ್ಲಿ ಅಭಿವೃದ್ಧಿ ಹಾಗೂ ಸಮಾಜ ಸೇವೆಗಿಂತ ದುಡ್ಡಿಗೆ ಹೆಚ್ಚಿನ ಬೆಲೆ ಕೊಟ್ಟು ಮತದಾರರು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆಂದು ಮಾಜಿ ಪ.ಪಂ ಸದಸ್ಯೆ ಆಶಾ ಜಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು; ಮೂರನೇ ವಾರ್ಡ್ ಬೆಟ್ಟದ ಕೆಳಗಿನ ಪೇಟೆಯನ್ನು ಮಾದರಿ ವಾರ್ಡ್‌ನ್ನಾಗಿ ಅಭಿವೃದ್ಧಿಪಡಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೆ. ಅದೆ ರೀತಿ ರಸ್ತೆ ಅಗಲಿಕರಣದ ವೇಳೆ ಈ ವಾರ್ಡಿನ ಜನತೆ ಮನೆ ಕಳೆದು ಕೊಂಡಿದ್ದರು. ಅವರಿಗೆ ಸೂರು ಕಲ್ಪಿಸಲು ವಿಶೇಷ ಪ್ಯಾಕೇಜ್ ತರಲು ಶಾಸಕರೊಂದಿಗೆ ಚರ್ಚಿಸಿದ್ದು, ಸರಕಾರದ ಮಟ್ಟದಲ್ಲಿ ಹೋರಾಟ ಮಾಡಿ ಅವರಿಗೆ ನಿವೇಶನ ಒದಗಿಸಲು ಇಚ್ಚಿಸಿದ್ದೆ. ಆದರೆ ಅದರೆ ಜನ ಕೈ ಹಿಡಿಯಲಿಲ್ಲ ಎಂದರು.
ಮೂಲಭೂತವಾಗಿ 3ನೇ ವಾರ್ಡ್ ಅಭಿವೃದ್ಧಿಯಾಗಿಲ್ಲ ಎಸ್ಸಿ ಕಾಲೋನಿಯಲ್ಲಿ ಚರಂಡಿ, ವಿದ್ಯುತ್ ದೀಪ, ರಸ್ತೆಗಳು ಇಲ್ಲ. ಅವುಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದಿದ್ದೆ. ಆದರೆ ಜನ ದುಡ್ಡಿಗೆ ಬೆಲೆಕೊಟ್ಟು ಅಭಿವೃದ್ಧಿಗೆ ಸೊಲು ಕೊಟ್ಟರು ಎಂದು ಅವರು ದೂರಿದರು.
ಗುಡಿಬಂಡೆ ಪ.ಪಂಚಾಯತಿಯಲ್ಲಿ ಇತ್ತೀಚೆಗೆ ತುಂಬಾ ಅರಾಜಕತೆ ನಡೆಯುತ್ತಿದೆ. ಒಂದು ಇ-ಸೋತ್ತು ಮಾಡಿಕೊಡಲು ಬಡವರಿಂದ 39 ರಿಂದ 40 ಸಾವಿರ ರೂ. ಹಣವನ್ನು ವಸೂಲಿ ಮಾಡಲಾಗುತ್ತಿದೆ. ಇಂತಹ ಭ್ರಷ್ಟಾಚಾರವನ್ನು ತಡೆದು ಬಡವರಿಗೆ ಉಚಿತ ಸೇವೆ ಒದಗಿಸಬೇಕೆಂಬ ಕನಸು ಕಂಡಿದ್ದೆ. ಅದರೆ ಮತದಾರರು ಅದಕ್ಕೆ ತಣ್ಣೀರು ಎರಚಿದರು ಎಂದು ಅವರು ಬೇಸರ ವ್ಯಕ್ತಪಡಿಸಿದರು.
30 ವರ್ಷಗಳ ನನ್ನ ರಾಜಕೀಯದಲ್ಲಿ ಎಲ್ಲೂ ಭ್ರಷ್ಟಾಚಾರ ಮಾಡಿಲ್ಲ. ತಾ.ಪಂ ಅಧ್ಯಕ್ಷೆಯಾಗಿ, ಪ.ಪಂ ಸದಸ್ಯೆಯಾಗಿ ಉತ್ತಮ ಕೆಲಸ ಮಾಡಿದ್ದು, ಒಳ್ಳೆಯ ಅನುಭವ ಇತ್ತು. ಆದರೆ ಮೂರನೇ ವಾರ್ಡಿನ ಜನತೆ ನನ್ನನ್ನು ಸೋಲಿಸಿದರು.
-ಆಶಾ ಜಯಪ್ಪ
ಬೆಟ್ಟಿಂಗ್ ದಂಧೆ, ಮಟ್ಕ, ಅಂದರ್-ಬಾಹರ್ ಮತ್ತಿತರೆ ಅನೈತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿಗೆ ಜನತೆ ಓಟು ಕೊಟ್ಟಿದ್ದಾರೆ. ಎಲ್ಲಿದೆ ಪ್ರಜಾಪ್ರಭುತ್ವ? ಎಂದು ಅವರು ಪ್ರಶ್ನಿಸಿದರು. ಈ ವಾರ್ಡಿನಲ್ಲಿ ಗೆದ್ದ ಆಭ್ಯರ್ಥಿ ಮಟ್ಕ, ಬೆಟ್ಟಿಂಗ್ ದಂಧೆಯಿಂದ ಅನೈತಿಕವಾಗಿ ಸಂಪಾದಿಸಿರುವ ಹಣದಿಂದ ಕಾಂಗ್ರೆಸ್‌ನ ಕೆಲ ನಾಯಕರಿಗೆ ದುಡ್ಡು ಕೊಟ್ಟು ಟಿಕೆಟ್ ಪಡೆದಿರುವುದ ಎಲ್ಲರಿಗೂ ಗೊತ್ತಿದೆ. ಗೆದ್ದಿರುವ ಆಭ್ಯರ್ಥಿ ವಾರ್ಡ್ ಅಭಿವೃದ್ಧಿ ತನ್ನ ಕೊಡುಗೆ ಏನು ಎಂಬುವುದು ಹೇಳಲಿ ಎಂದು ಆಶಾ ಜಯಪ್ಪ ಸವಾಲು ಹಾಕಿದರು.