ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿ ಎಂದ ಕೇಂದ್ರ ಗೃಹ ಸಚಿವ
ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿ ಪ್ರತಿಪಕ್ಷಗಳ ಕೈಗೆ ಅಸ್ತ್ರವಾಗದಂತೆ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ಮಾಡಿದ್ದಾರೆ.
ಅಧಿಕೃತ ಕಾರ್ಯಕ್ರದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿರುವ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರರು ಪ್ರಮುಖರು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ವೇಳೆ ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ಪರಿಹರಿಸಿ ಜನರ ವಿಶ್ವಾಸಗಳಿಸಬೇಕೆಂದು ಶಾ ಕಿವಿಮಾತು ಹೇಳಿದ್ದಾರೆ.
ಕಳೆದ 15 ದಿನಗಳ ಅವಧಿಯಲ್ಲಿ ಮಂಗಳೂರಿನಲ್ಲಿಯೇ ಮೂವರು ಯುವಕರ ಬರ್ಬರ ಕೊಲೆ, ಕಾನೂನು ಸುವ್ಯವಸ್ಥೆ, ಪಕ್ಷದ ಯುವ ಕಾರ್ಯಕರ್ತರು ರಾಜೀನಾಮೆ ನೀಡುತ್ತಿರುವುದೂ ಸೇರಿದಂತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅಮಿತ್ ಶಾ ರಾಜ್ಯ ನಾಯಕರಿಂದ ಮಾಹಿತಿ ಪಡೆದರು.
ಪ್ರತಿಪಕ್ಷಗಳು ಏನೇ ಆರೋಪಿಸಿದರೂ ಅದರ ಬಗ್ಗೆ ಹೆಚ್ಚು ಗಮನ ಕೊಡಬೇಡಿ. ಮೊದಲು ಪರಿಸ್ಥಿತಿಯನ್ನು ನಿಭಾಯಿಸಿ. ಗುಪ್ತಚರ, ಆಂತರಿಕ ಭದ್ರತೆಯನ್ನು ಬಲಪಡಿಸಿ ಸಮಾಜಘಾತುಕ ಶಕ್ತಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ಕೊಟ್ಟಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಳಾದರೆ ಸರ್ಕಾರದ ಮೇಲೆ ಸಾರ್ವಜನಿಕರು ಆಕ್ರೋಶಗೊಳ್ಳುತ್ತಾರೆ. ಪರಿಸ್ಥಿತಿ ಕೈ ತಪ್ಪುವ ಮೊದಲೇ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಮಿತ್ ಶಾ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ನಂತರದ ಪರಿಸ್ಥಿತಿ ಇಲ್ಲಿಯ ತನಕ ಬೆಳೆಯಲು ಬಿಟ್ಟಿದ್ದೇ ತಪ್ಪು ಎಂದು ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಾವಳಿ ಹಾಗೂ ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ಸಿಸಿ ಟಿವಿ ಅಳವಡಿಕೆ, ಚೆಕ್‍ಪೋಸ್ಟ್ ಗಳ ಹೆಚ್ಚಳ, ಸಮಾಜಘಾತುಕ ಶಕ್ತಿಗಳ ಮೇಲೆ ಹದ್ದಿನ ಕಣ್ಣಿಡುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಮಂಗಳೂರಿಗೆ ಅಗತ್ಯವಾದರೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು. ರಾಜ್ಯದ ಜನತೆಯ ಒತ್ತಾಸೆಯಂತೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳ ನಿಷೇಧ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.