ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಾಮರಾಜನಗರದಲ್ಲಿ ಆಕ್ಸಿಜನ್ ವೈಫಲ್ಯದಿಂದ ಉಂಟಾದ ದುರಂತಗಳ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಜಿಲ್ಲೆಯ ಆಡಳಿತ ಹೈ ಅಲರ್ಟ್ ಆಗಿದೆ.
ಯಾವುದೇ ಕಾರಣಕ್ಕೂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್ ಔಷಧಿ ಮತ್ತು ಆಮ್ಲಜನಕದ ಜತೆಗೆ ರೆಮಿಡಿಸ್ವೀರ್ ಕೊರತೆ ಆಗದಂತೆ ಜಿಲ್ಲಾಧಿಕಾರಿ ಆರ್.ಲತಾ ಬಹಳಷ್ಟು ಎಚ್ಚರಿಕೆ ವಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆರ್.ಲತಾ ಅವರು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಮ್ಲಜನಕದ ಅಗತ್ಯವನ್ನು ಮುನ್ನೆಚ್ಚರಿಕೆಯಾಗಿ ಮನಗಂಡು ಜಿಲ್ಲೆಯ ಸರಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ 393 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 125 ಜಂಬೊ ಆಮ್ಲಜನಕ ಸಿಲಿಂಡರ್ʼಗಳನ್ನು ತುಂಬಿಸಿ ಸಂಗ್ರಹಣೆ ಮಾಡಿಟ್ಟುಕೊಳ್ಳಲಾಗಿದೆ ಎಂದಿದ್ದಾರೆ.
ಲಭ್ಯವಿರುವ ಒಟ್ಟು 518 ಆಮ್ಲಜನಕ ಸಿಲಿಂಡರ್ʼಗಳಲ್ಲಿ 91 ಸಿಲಿಂಡರ್ʼಗಳು ಖಾಲಿಯಾಗಿದ್ದು, 427 ಸಿಲಿಂಡರ್ʼಗಳು ಬಳಕೆಗೆ ಲಭ್ಯವಿವೆ. ಪ್ರತಿದಿನ ಖಾಲಿಯಾದ ಸಿಲಿಂಡರ್ʼಗಳಿಗೆ ಆ ದಿನವೇ ಆಮ್ಲಜನಕವನ್ನು ಸಂಬಂಧಪಟ್ಟ ಅಧಿಕೃತ ಆಕ್ಸಿಜನ್ ಸರಬರಾಜು ಕಂಪನಿಗಳಿಂದ ತುಂಬಿಸಲಾಗುತ್ತಿದೆ. ಈ ಕುರಿತು ನಿಗಾ ವಹಿಸಿ ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಮ್ಲಜನಕ ಸರಬರಾಜು ಆಗಿರುವ ಬಗ್ಗೆ ನಾನು ಸಹ ನೋಡೆಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿದಿನ ಖಾತರಿಪಡಿಸಿಕೊಳ್ಳುತ್ತಿದ್ದೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿನ 2 ಆಮ್ಲಜನಕ ಘಟಕಗಳಲ್ಲಿ 3,500 ಲೀಟರ್ ಸಾಮರ್ಥ್ಯದ ಆಮ್ಲಜನಕವನ್ನು ಭರ್ತಿ ಮಾಡಿಸಿ ಸಂಗ್ರಹಣೆ ಮಾಡಲಾಗಿದೆ. ಆಮ್ಲಜನಕ ಉಪಯೋಗಿಸಿ ಖಾಲಿಯಾದ ದಿನವೇ ಆಮ್ಲಜನಕವನ್ನು ಪುನಾ ಸರಬರಾಜು ಮಾಡಿಸಿಕೊಂಡು ಮರುಪೂರಣ ಮಾಡಿಕೊಳ್ಳುವ ಮೂಲಕ ಯಾವಾಗಲು ಆಮ್ಲಜನಕ ದಾಸ್ತಾನು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಖಾಲಿಯಾದ ಕೂಡಲೇ ನಿಯಮಿತವಾಗಿ ತುಂಬಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರೆಮಿಡಿಸ್ವೀರ್ ಕೊರತೆಯೂ ಇಲ್ಲ
ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ 250 ವೈಲ್ ಮತ್ತು ಖಾಸಗಿ ಕೋವಿಡ್ ಆಸತ್ರೆಗಳಲ್ಲಿ 50 ವೈಲ್ ರೆಮಿಡಿಸ್ವೀರ್ ಔಷಧಿ ಸಂಗ್ರಹಣೆ ಇದ್ದು, ಪ್ರಸ್ತುತ ಪ್ರತಿದಿನ 30ರಿಂದ 40 ವೈಲ್ ಔಷಧಿ ಮಾತ್ರ ಬಳಕೆಯಾಗುತ್ತಿದ್ದು 270 ವೈಲ್‌ಗಳಷ್ಟು ರೆಮಿಡಿಸ್ವೀರ್ ಔಷಧಿ ಬಳಕೆಗೆ ಲಭ್ಯವಿದೆ. ಅಲ್ಲದೆ, ಔಷಧಿ ಖಾಲಿಯಾದಂತೆ ಅಂದೇ ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಆಕ್ಸಿಜನ್, ಐಸಿಯು ಹಾಸಿಗೆಗಳು, ವೆಂಟಿಲೇಟರ್ ಸೇರಿದಂತೆ ರೆಮಿಡಿಸ್ವೀರ್ ಔಷಧದ ದಾಸ್ತಾನು ಸಾಕಷ್ಟಿದ್ದು ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.