ಚದುರಿದ್ದ ಸಿದ್ದರಾಮಯ್ಯ ಟೀಮ್ ಮತ್ತೆ ಒಂದಾಗುತ್ತಿದೆ! ಮೈಸೂರಲ್ಲಿ ಹಿಡಿತ ಸಾಧಿಸಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಪಾರುಪತ್ಯ ಸಾಧಿಸಲು ಮುಂದಾಗಿದ್ದು, ದಸರಾ ಯಶಸ್ಸಿನ ನೆಪದಲ್ಲಿ ಹೊಸ ತಂತ್ರ ಹೆಣೆದಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಯಶಸ್ಸಿಗೆಂದು ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಜಿಲ್ಲೆಗೆ 30ಕ್ಕೂ ಹೆಚ್ಚು ಸಚಿವರನ್ನು ನಿಯೋಜಿಸಿ ಸಿಎಂ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.
11 ದಿನಗಳ ದಸರಾ ಮಹೋತ್ಸವಕ್ಕೆ ನಿತ್ಯ 3 ಸಚಿವರಂತೆ ಉಸ್ತುವಾರಿ ನೀಡಲಾಗಿದೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಅವರನ್ನು ಕುಗ್ಗಿಸುವ ಉದ್ದೇಶದ ಜತೆಗೆ, ಸಿದ್ದರಾಮಯ್ಯ ತವರಲ್ಲಿ ಅಪ್ಪ-ಮಗನ ಪ್ರಾಬಲ್ಯಕ್ಕೆ ಕಡಿವಾಣ ಹಾಕಿ ಮೈಸೂರು ಜಿಲ್ಲೆಯ ಮೇಲೆ ಹಿಡಿತ ಸಾಧಿಸುವುದು ಡಿಕೆಶಿ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ಸಚಿವರಾದ ಡಾ.ಯತೀಂದ್ರ ಮತ್ತು ಶಿವರಾಜ್ ತಂಗಡಗಿ ಜತೆ ಸೇರಿ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಇದು ಮೈಸೂರು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮೇಲಾಗಿ ಯತೀಂದ್ರ ಅವರನ್ನು ಡಮ್ಮಿ ಮಾಡಿ ತಾವೇ ಪ್ರಮುಖವಾಗಿ ಪ್ರೊಜೆಕ್ಟ್ ಮಾಡಿಕೊಳ್ಳಲು ಡಿಕೆಶಿ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಈ ವಿಷಯ ಯತೀಂದ್ರ ಅವರಿಗೆ ತೀವ್ರ ಅಸಮಾಧಾನ ಉಂಟು ಮಾಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಮತ್ತೊಂದು ಕಡೆ ಡಿಕೆಶಿ ಸರಕಾರ ಬಂದ ಮೇಲೆ ಚದುರಿಹೋಗಿದ್ದ ಸಿದ್ದರಾಮಯ್ಯ ಟೀಮ್ ಪುನಾ ಒಂದುಗೂಡುತ್ತಿದೆ. ತಡರಾತ್ರಿ ಹೊತ್ತಿನಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ತಮ್ಮ ಗುರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ನಂತರ ಜಮೀರ್ ಅವರು ಹೆಚ್.ಸಿ. ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಆಗಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಇನ್ನೊಂದು ಕಡೆ ಯತೀಂದ್ರ ಅವರು ಎಐಸಿಸಿ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿ ಡಿಕೆಶಿ ಅವರು ದಿನೇ ದಿನೇ ಸರಕಾರದಲ್ಲಿ ಹೆಚ್ಚಿನ ನಿಯಂತ್ರಣ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಎಚ್ಚೆತ್ತುಕೊಂಡಿದ್ದಾರೆ.
ಅದರಲ್ಲಿಯೂ ಹಿರಿಯ ರಾಜಕಾರಣಿಗೊಬ್ಬರದು ಎನ್ನ ಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲಿಯೇ ಮಾಜಿ ಮುಖ್ಯಮಂತ್ರಿಯ ಬಣ್ಣ ದಿಢೀರನೇ ಚುರುಕಾಗಿದೆ.
ಅಹಿಂದಕ್ಕೆ ಶಕ್ತಿ ತುಂಬಲು ಪ್ಲಾನ್
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ನಂತರ ಮಂಕಾಗಿದ್ದ ಅಹಿಂದ ಕೂಟಕ್ಕೆ ಬಲ ತುಂಬಲು ಇವರೆಲ್ಲ ಸಿದ್ಧತೆ ನಡೆಸಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ಇವರೆಲ್ಲರೂ ಡಿಕೆಶಿ ಹೊಡೆತಕ್ಕೆ ತತ್ತರಿಸಿದ್ದಾರೆ. ಕೊನೆಗೆ ಹಳೆಯ ಗಂಡನ ಪಾದವೇ ಗತಿ ಎನ್ನುವಂತೆ ಜಮೀರ್, ಜಾರಕಿಹೊಳಿ, ಮಹಾದೇವಪ್ಪ ಮುಂತಾದ ನಾಯಕರು ಅಂತಿಮವಾಗಿ ಸಿದ್ದರಾಮಯ್ಯ ಸನಿಹಕ್ಕೆ ಬಂದಿದ್ದಾರೆ.
ದಸರಾದಲ್ಲಿ ಸಚಿವರ ಉಸ್ತುವಾರಿ ಏನೇನು?
ಅ.11 (ಉದ್ಘಾಟನೆ ದಿನ): ಕೆ.ಜೆ.ಜಾರ್ಜ್, ಎಸ್.ಎಸ್. ಮಲ್ಲಿಕಾರ್ಜುನ್ – ದೀಪಾಲಂಕಾರ ಮತ್ತು ಫಲಪುಷ್ಪ ಪ್ರದರ್ಶನದ ಉಸ್ತುವಾರಿ.ಅ.12: ಕೆ.ಎಚ್. ಮುನಿಯಪ್ಪ, ಯು.ಟಿ. ಖಾದರ್, ಟಿ.ರಘುಮೂರ್ತಿಅ.13: ಕೆ.ಜೆ. ಜಾರ್ಜ್, ಎನ್. ಚಲುವರಾಯಸ್ವಾಮಿ, ಸಿ. ಪುಟ್ಟರಂಗಶೆಟ್ಟಿಅ.14: ಎಂ.ಬಿ. ಪಾಟೀಲ್, ಬೋಸರಾಜು, ಬೈರತಿ ಸುರೇಶ್ಅ.15: ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಎಚ್.ಸಿ. ಬಾಲಕೃಷ್ಣಅ.16: ರಾಮಲಿಂಗಾರೆಡ್ಡಿ, ಬಸವರಾಜ ರಾಯರೆಡ್ಡಿ, ಶಿವಲಿಂಗೇಗೌಡಅ.17: ಎಸ್.ಎಸ್. ಮಲ್ಲಿಕಾರ್ಜುನ್, ನರೇಂದ್ರಸ್ವಾಮಿ, ಅಜಯ್ ಸಿಂಗ್ಅ.18: ಕೃಷ್ಣ ಬೈರೇಗೌಡ, ಮಧು ಬಂಗಾರಪ್ಪ, ರುದ್ರಪ್ಪ ಲಮಾಣಿಅ.19: ಪ್ರಿಯಾಂಕ್ ಖರ್ಗೆ, ರಿಜ್ವಾನ್ ಅರ್ಷದ್, ಲಕ್ಷ್ಮಣ ಸವದಿಅ.20: ಶರಣಪ್ರಕಾಶ್ ಪಾಟೀಲ್, ಜಮೀರ್ ಅಹಮದ್, ಸಂತೋಷ್ ಲಾಡ್ಅ.21 (ವಿಜಯದಶಮಿ – ಜಂಬೂಸವಾರಿ): ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟ ಮತ್ತು ಶಾಸಕರು ಭಾಗವಹಿಸಲಿದ್ದಾರೆ.

















