ಮುಂದಿನ ವರ್ಷ ಏಪ್ರಿಲ್-ಮೇನಲ್ಲಿ ಮಂತ್ರಿಮಂಡಲಕ್ಕೆ ಹೊಸರೂಪ
ಬೆಂಗಳೂರು: ಉತ್ತರ ಪ್ರದೇಶ, ಗುಜರಾತ್, ಗೋವಾ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮಂತ್ರಿಮಂಡಲ ಪುನಾರಚನೆ ಮಾಡಲಿದ್ದಾರೆ.
2027ರ ಏಪ್ರಿಲ್-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ ಮಾಡಲಿದ್ದು, ಸಂಪುಟದಲ್ಲಿರುವ ನಾಲ್ವರು ಹಿರಿಯ ಸಚಿವರನ್ನು ಕೈಬಿಟ್ಟು ಹೊಸದಾಗಿ ಆರು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
ನಾಲ್ಕು ಸಚಿವರು ಹೊರಕ್ಕೆ
ನಾಲ್ಕು ಕಂದಾಯ ವಲಯದ ಒಬ್ಬೊಬ್ಬರು ಸಚಿವರನ್ನು ಬಿಟ್ಟು, ಅವರಿಗೆ ಕೆಪಿಸಿಸಿಯಲ್ಲಿ ಕಾರ್ಯಾಧ್ಯಕ್ಷ ಸ್ಥಾನ ಕಲ್ಪಿಸಿ, ಪಕ್ಷದ ಸಂಘಟನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ತೊಡಗಿಸಿಕೊಳ್ಳಲಿದೆ.ಇವರಿಂದ ತೆರವಾಗುವ ಸ್ಥಾನಕ್ಕೆ ಇಬ್ಬರು ಮಹಿಳೆಯರೂ ಸೇರಿದಂತೆ ಆರು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಜಿಎಸ್‌ಟಿ ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ, ಇಂದಿರಾ ಭವನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಪ್ರತ್ಯೇಕ ಭೇಟಿ ಮಾಡಿ ಸಂಪುಟ ವಿಸ್ತರಣೆ ಇಲ್ಲವೆ ಪುನಾರಚನೆಗೆ ಇದು ಸೂಕ್ತ ಕಾಲವಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಪಂಚರಾಜ್ಯಗಳ ಚುನಾವಣೆ ನಂತರ ಪುನಾರಚನೆ
ಶಿವಕುಮಾರ್ ಸಲಹೆಗೆ ಸಮ್ಮತಿಸಿರುವ ಉಭಯ ನಾಯಕರು, ಪಂಚರಾಜ್ಯಗಳ ಚುನಾವಣೆ ಹಾಗೂ ಕರ್ನಾಟಕದಲ್ಲಿ ಜನವರಿಯಲ್ಲಿ ನಡೆಯುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಂತರವೇ ರಾಜಕೀಯ ನಿರ್ಧಾರ ಕೈಗೊಳ್ಳಲು ಹಸಿರು ನಿಶಾನೆ ತೋರಿದ್ದಾರೆ.
ರಾಜ್ಯ ವಿಧಾನಸಭೆಗೆ 2028ರ ಏಪ್ರಿಲ್‌ಗೆ ಚುನಾವಣೆ ನಡೆಯಲಿದ್ದು, ಹೊಸದಾಗಿ ಮಂತ್ರಿ ಆಗುವವರಿಗೆ ಒಂದು ವರ್ಷ ಅಧಿಕಾರ ನಿರ್ವಹಿಸಲು ಅವಕಾಶ ದೊರೆಯಲಿದೆ.
ಜಮೀರ್ ಅಹ್ಮದ್ ಖಾನ್, ಶಿವರಾಜ್ ತಂಗಡಗಿ ಅವರನ್ನು ಕೈಬಿಟ್ಟು ಬಸವರಾಜ ನೀಲಪ್ಪ ಶಿವಣ್ಣನವರ್ ಹಾಗೂ ಅನ್ನಪೂರ್ಣ ತುಕಾರಾಂ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಮತ್ತು ಎಐಸಿಸಿ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡ ಹೇರಿದ್ದರು.
ಸುರ್ಜೇವಾಲ ಪಟ್ಟುಇದರ ಜತೆಗೆ ಪಕ್ಷದ ಹಿರಿಯ ಶಾಸಕ ಎಂ.ಕೃಷ್ಣಪ್ಪ ಅವರನ್ನು ಮಂತ್ರಿ ಮಾಡಲೇಬೇಕೆಂದು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸಹಾ ಪಟ್ಟು ಹಿಡಿದಿದ್ದರು.
ಸದ್ಯಕ್ಕೆ ಎಲ್ಲಾ ಒತ್ತಡಗಳಿಂದ ಪಾರಾಗಿರುವ ಮುಖ್ಯಮಂತ್ರಿ, ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಗಳ ನೇಮಕವನ್ನು ಯಾವುದೇ ಸಂದರ್ಭದಲ್ಲಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಮೂಲಗಳ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ಅವರು ಪಟ್ಟು ಹಿಡಿಯುವ ಸಾಧ್ಯತೆ ಇದೆ ಎಂಬ ಅಂಶವನ್ನು ಮೊದಲೇ ಗ್ರಹಿಸಿ ಅದಕ್ಕೆ ಚೆಕ್ಮೀಟ್ ಇಡುವ ಉದ್ದೇಶದಿಂದ ಡಿಕೆಶಿ ಮುಂದಿನ ವರ್ಷ ಪುನಾರಚನೆ ಮಾಡೋಣ ಎಂದು ವರಿಷ್ಠರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಆದರೆ, ಚುನಾವಣೆ ಬರುವುದಕ್ಕೆ ಮೊದಲ ಕೇವಲ ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಮಂತ್ರಿ ಸ್ಥಾನ ಸಿಕ್ಕಿದರೆ ಉಪಯೋಗ ಇಲ್ಲ. ಅಂತಹ ಸಚಿವಗಿರಿ ಪಡೆಯುವ ಬದಲು ಶಾಸಕರಾಗಿಯೇ ಇರುವುದು ಮೇಲು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

















