ಇನ್ನೊಂದು ಅವಧಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಮುಂದುವರಿಸಲು ಮಾಜಿ ಪ್ರಧಾನಿ ಜತೆ ಮಾಜಿ ಸಿಎಂ ಚರ್ಚಿಸಿದರಾ?
ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರುಗಳಾದ ಬಿ.ವೈ.ವಿಜಯೇಂದ್ರ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಮುಂಬರುವ ಚುನಾವಣೆಗಳನ್ನು ಎನ್ಡಿಎ ಮೈತ್ರಿಕೂಟ ಎದುರಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತಕ್ಕೆ ಕೊನೆ ಹಾಡಬಹುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ತಿಳಿಸಿದ್ದಾರೆ.
ದೇವೇಗೌಡ ಅವರನ್ನು ಕಳೆದ ಶುಕ್ರವಾರ ಸಂಜೆ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು ರಾಜ್ಯದಲ್ಲಿ ಮೈತ್ರಿ ರಾಜಕಾರಣ ಹಾಗೂ ಕಾಂಗ್ರೆಸ್ ಪಕ್ಷದ ದುರಾಡಳಿತದ ಬಗ್ಗೆ ಚರ್ಚೆ ನಡೆಸಿದರಲ್ಲದೆ, ಮುಂಬರುವ ಹಿರಿಯೂರು ವಿಧಾನಸಭೆ ಕ್ಷೇತ್ರದ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬುಡಸಮೇತ ಕಿತ್ತುಹಾಕಲು ಬಿ.ವೈ.ವಿಜಯೇಂದ್ರ ಮತ್ತೊಂದು ಅವಧಿಗೆ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಅನಿವಾರ್ಯ ಎಂದಿದ್ದಾರೆ ಎಂದು ಗೊತ್ತಾಗಿದ್ದು, ಈ ಬಗ್ಗೆ ಗೌಡರ ಜತೆ ಚರ್ಚೆ ನಡೆಸಿದ್ದಾರೆ.
ನವೆಂಬರ್ 11ಕ್ಕೆ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ಪೂರ್ಣಗೊಳ್ಳಲಿದ್ದು, ಮತ್ತೊಂದು ಅವಧಿಗೆ ಮುಂದುವರೆಯಲು ನಮ್ಮ ಪಕ್ಷಲ್ಲೇ ಭಿನ್ನಾಭಿಪ್ರಾಯಗಳಿವೆ. ಪಕ್ಷದ ಹಿತದೃಷ್ಟಿಯಿಂದ ವಿಜಯೇಂದ್ರ ಅವರನ್ನೇ ಮತ್ತೊಂದು ಅವಧಿಗೆ ಮುಂದುವರೆಸುವಂತೆ ನಾನು ಈಗಾಗಲೇ ವರಿಷ್ಠರಿಗೆ ಸಲಹೆ ಮಾಡಿದ್ದೇನೆ, ನೀವೂ ಸಹಾ ನನ್ನ ಧ್ವನಿಗೆ ಬೆಂಬಲ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲಹೆ ಮಾಡಿ ಎಂದಿದ್ದಾರೆ.
ಕುಮಾರಸ್ವಾಮಿ ಮತ್ತು ವಿಜಯೇಂದ್ರ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ, ಇದನ್ನೇ ಮುಂದಿಟ್ಟುಕೊಂಡು ವಿಜಯೇಂದ್ರ ಬದಲಾವಣೆಗೆ ಕೆಲವರು ಒತ್ತಡ ತರುತ್ತಿದ್ದಾರೆ.
ಮೈತ್ರಿಕೂಟಕ್ಕೆ ಕುಮಾರಸ್ವಾಮಿ ನಾಯಕತ್ವ
ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರನ್ನು ಕರೆದು ಸಲಹೆ ನೀಡಿ, ನಾನು ವಿಜಯೇಂದ್ರ ಅವರಿಗೆ ತಿಳಿಹೇಳುತ್ತೇನೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯೇ ಎನ್ಡಿಎ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲಿ, ಈ ಇಬ್ಬರೂ ನಾಯಕರು ಒಟ್ಟಿಗೆ ಶ್ರಮಿಸಿದರೆ ನಾವು ಜಯಗಳಿಸಬಹುದಾಗಿದೆ.
ನಿಮ್ಮ ಜೊತೆಗಿನ ಮಾತುಕತೆ ವೇಳೆ ಕುಮಾರಸ್ವಾಮಿ ಅವರಿಗೂ ಬರುವಂತೆ ಕೋರಿದ್ದೆ, ಆದರೆ, ಪುಣೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ಬರಲು ಸಾಧ್ಯವಾಗಲಿಲ್ಲ, ಆದರೆ ನಮ್ಮಗಳ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಒಟ್ಟಾಗಿ ಮುಂದುವರಿಯಬೇಕು
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಲವಾರು ವಿದ್ಯಮಾನಗಳು ನಡೆಯುತ್ತಿದ್ದು ಯಾವುದೇ ಕ್ಷಣ ಏನು ಬೇಕಾದರೂ ಆಗಬಹುದು, ಹೀಗಾಗಿ ನಾವಿಬ್ಬರು ಒಟ್ಟಾಗಿ ಮುಂದುವರಿಯಬೇಕು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಮೈತ್ರಿಕೂಟದಲ್ಲಿ ಗೊಂದಲಗಳು ಎದುರಾದರೆ ಕಾಂಗ್ರೆಸ್ ಇದನ್ನೇ ರಾಜಕೀಯ ಲಾಭವಾಗಿ ಬಳಸಿಕೊಳ್ಳಬಹುದು, ಆದ್ದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ತೋರಿದ ಒಗ್ಗಟ್ಟನ್ನೇ ಮುಂದುವರೆಸಲು ಉಭಯ ನಾಯಕರು ತೀರ್ಮಾನಿಸಿದ್ದಾರೆ.

















