ರಾಜ್ಯ ಸರಕಾರದ ದ್ವಂದ್ವ ನೀತಿ; ಆರ್. ಅಶೋಕ್ ಕಟು ಟೀಕೆ
ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರ ಗಂಜಿ ಕೇಂದ್ರಕ್ಕೆ ಸುಮಾರು 2,000 ಕೋಟಿ ರೂ. ಖರ್ಚು ಮಾಡುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ₹480 ಕೋಟಿ ನೀಡಲು ಆಗುತ್ತಿಲ್ಲಾ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮೇಲೆ ಎಲ್ಲರೂ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಶಾಸಕರೇ ಆನೆ ವಿಚಾರದಲ್ಲಿ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು ಮಳೆ ಚಳಿಯಲ್ಲಿ ಹೋರಾಟ ಮಾಡುತ್ತಿದ್ದರೂ ಅವರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಮುಖ್ಯಮಂತ್ರಿ ಜರ್ಮನಿ, ಜಪಾನ್ ಪ್ರವಾಸ ಮಾಡಲಿ. ಆದರೆ ಹೋರಾಟಗಾರರ ರಕ್ಷಣೆಗೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ಜಪಾನ್ ನ ರಸ್ತೆ, ಕಸ ವಿಲೇವಾರಿ ವ್ಯವಸ್ಥೆ ನೋಡುತ್ತಿದ್ದಾರೆ. ಆದರೆ ಬೆಂಗಳೂರನ್ನೇ ಇವರು ಸುತ್ತಾಡಿಲ್ಲ ಎಂದು ಟೀಕಿಸಿದರು.
ಇಷ್ಟು ವರ್ಷದಲ್ಲಿ ಇವರು ಬೆಂಗಳೂರಿಗೆ ಏನೂ ಮಾಡದೆ ಕಂಪನಿಗಳು ಮಹಾರಾಷ್ಟ್ರ, ಆಂಧ್ರಕ್ಕೆ ಹೋಗುತ್ತಿವೆ. ಆಶಾ ಕಾರ್ಯಕರ್ತೆಯರನ್ನು ಸಿಎಂ ಸಹೋದರಿ ಎಂದು ಕರೆಯುತ್ತಾರೆ. ಈಗ ಅವರೇ ಬಂಡೆ ಹೃದಯ ಎಂದು ಸಾಬೀತುಪಡಿಸಿದ್ದಾರೆ. ವೀಡಿಯೋ ಕಾಲ್ ಮಾಡುವ ಬದಲು ನೇರವಾಗಿ ಫ್ರೀಡಂ ಪಾರ್ಕ್ ಗೆ ಬಂದು ಅಹವಾಲು ಆಲಿಸಲಿ. ಇಲ್ಲವಾದರೆ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಸಾಬೀತಾಗುತ್ತದೆ ಎಂದು ಅಶೋಕ ಸವಾಲು ಹಾಕಿದರು.

ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆಗೆ ಎಲ್ಲಿಲ್ಲದ ಉತ್ಸಾಹ ತೋರಿದ್ದರು. ಪಕ್ಷದಲ್ಲಿ ಎಲ್ಲರೂ ಖರೀದಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸಚಿವ ಮುನಿಯಪ್ಪ ಹತ್ತು ಸಾವಿರ ಪುಸ್ತಕ ಖರೀದಿ ಮಾಡುವುದಾಗಿ ಹೇಳಿದ್ದಾರೆ. ಪುಸ್ತಕ ಮಾರಾಟಕ್ಕೂ ಮೊದಲು ಜನರ ಸಮಸ್ಯೆ ಆಲಿಸಬೇಕು. ಆ ಪುಸ್ತಕದ ಬರವಣಿಗೆ ಹೇಗೂ ಹಾಳಾಗಿದೆ. ಇದಕ್ಕೆ ತೋರುವ ಉತ್ಸಾಹವನ್ನು ಆಶಾ ಹೋರಾಟಗಾರರ ಸಮಸ್ಯೆ ಈಡೇರಿಸಲು ತೋರಿಸಲಿ ಎಂದು ಆಗ್ರಹಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮೋದಿ ₹1,000 ಸಹಾಯಧನ ನೀಡಿದ್ದರು. 50 ಲಕ್ಷ ರೂ. ವಿಮೆ ಮಾಡಿಸಿದ್ದರು. ಕೋವಿಡ್ ಸಮಯದಲ್ಲಿ ಒಂದು ಸಲ ₹3,000 ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ₹1,000 ಹೆಚ್ಚಿಸಲಾಗಿತ್ತು. ಬಳಿಕ ಬಜೆಟ್ ನಲ್ಲೇ ₹1,000 ಘೋಷಿಸಲಾಯಿತು. ಆದರೆ ಸಿದ್ದರಾಮಯ್ಯ ಸಿಎಂ ಆದ ಕೂಡಲೇ ಅದನ್ನು ಹಿಂಪಡೆಯಲಾಯಿತು ಎಂದು ದೂರಿದರು.
ಆಶಾ ಕಾರ್ಯಕರ್ತರು ಹೆಚ್ಚಾಗಿ ರಾಜ್ಯ ಸರ್ಕಾರದ ಆರೋಗ್ಯ ಕಾರ್ಯಕ್ರಮಗಳಿಗೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಪ್ರತಿಯೊಬ್ಬ ಮಹಿಳೆಗೆ ₹15,000 ಮಾತ್ರ ನೀಡಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರ ಶಾಪ ತಟ್ಟಲಿದೆ ಎಂದು ಅಶೋಕ ಎಚ್ಚರಿಸಿದರು.
ವಿನಯ್ ಕುಲಕರ್ಣಿ, ನಾಗೇಂದ್ರ ಜೈಲಿಗೆ ಹೋಗಿದ್ದು, ಇದೊಂದು ರೌಡಿಗಳ ಸರ್ಕಾರ ಎಂದು ಅವರು ಟೀಕಿಸಿದರು.
ನಯನ ಮೋಟಮ್ಮ ಸೇರಿದಂತೆ ಕಾಂಗ್ರೆಸ್ ಶಾಸಕರು ಜನರ ಕಣ್ಣಿಗೆ ಮಣ್ಣೆರಚಲು ರಾಜೀನಾಮೆ ನಾಟಕವಾಡಿದ್ದಾರೆ. ಇವರ ರಾಜೀನಾಮೆ ಪತ್ರ ಒಂದು ಸಾಲಿನಲ್ಲೇ ಇರಬೇಕು. ಆದರೆ ಅದು ಒಂದು ಸಾಲಿನಲ್ಲಿ ಬರೆದಿಲ್ಲ ಹಾಗೂ ನೇರವಾಗಿ ಸ್ಪೀಕರ್ ಗೆ ನೀಡಿಲ್ಲ. ಹೀಗೆ ಸುಮ್ಮನೆ ಮೊದಲೇ ಮಾತಾಡಿಕೊಂಡು ನಾಟಕ ಮಾಡಿದ್ದಾರೆ. ಅವರು ನಿಜಕ್ಕೂ ರಾಜೀನಾಮೆ ನೀಡಿದ್ದರೆ ಆನೆಗಾಗಿ ರಾಜೀನಾಮೆ ನೀಡಿದರು ಎಂದು ದಾಖಲೆಯಾಗುತ್ತಿತ್ತು ಎಂದು ಪ್ರತಿಪಕ್ಷ ನಾಯಕ ಕುಟುಕಿದರು.
•Lead cartoon | AI

















