ಚುನಾವಣೆ ಹೊತ್ತಿಗೆ ಶುರುವಾಗಲಿದೆ ಪಕ್ಷಾಂತರ ಪರ್ವ
ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಕೆಲವು ಸದಸ್ಯರೂ ಸೇರಿದಂತೆ ಸುಮಾರು 25 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಬಾಂಬ್ ಸಿಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕದಲ್ಲಿನ ರಾಜಕೀಯ ಪರಿಸ್ಥಿತಿ ಗಮನಿಸಿದರೆ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಛಿದ್ರಗೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಒಂದು ಹೆಜ್ಜೆ ಹೊರಗಿಟ್ಟಿದ್ದಾರೆಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ತಪ್ಪು ಮಾಹಿತಿಗಳಿಂದ ಮೋಸಹೋದ ಮತದಾರರು, ಕಾಂಗ್ರೆಸ್ ಮಿತ್ರಕೂಟಕ್ಕೆ ಮತ ಹಾಕಿದ್ದರು, ಆದರೆ, ಈ ಬಾರಿ ಹಾಗಾಗುವುದಿಲ್ಲ, ಇದನ್ನು ಅರಿತಿರುವ ಆಡಳಿತ ಪಕ್ಷದ ಸದಸ್ಯರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ಮೂರೂವರೆ ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಸದಸ್ಯರ ಕ್ಷೇತ್ರಗಳೇ ಅಭಿವೃದ್ಧಿ ಕಂಡಿಲ್ಲ, ಆ ಪಕ್ಷದ ಶಾಸಕರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಬಾಗಿಲಿಗೆ ಎಷ್ಟೇ ಸುತ್ತಡಿದರೂ ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಆಗಿಲ್ಲ. ಗ್ಯಾರಂಟಿ ಯೋಜನೆಗಳಿಂದಲೇ ಮತ ಬೀಳುತ್ತಿದೆ ಎಂಬ ಭ್ರಮೆ ಆ ಪಕ್ಷದ ನಾಯಕರಲ್ಲಿದೆ, ಆದರೆ, ಶಾಸಕರಿಗೆ ಸ್ಥಳೀಯ ರಾಜಕೀಯ ವಿದ್ಯಮಾನದ ಅರಿವು ಇರುವುದರಿಂದ ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ ಎಂದರು ಅವರು.
ಕೀಳುಮಟ್ಟದ ರಾಜಕಾರಣ
ಕರ್ನಾಟಕದ ರಾಜಕಾರಣ ಇಷ್ಟೊಂದು ಕೀಳು ಮಟ್ಟಕ್ಕೆ ಎಂದೂ ಇಳಿದಿರಲಿಲ್ಲ, ರಾಜಕಾರಣಿಗಳೆಂದರೆ ಜನ ಅಸಹ್ಯ ಪಡುವಂತಾಗಿದೆ, ಇಂತಹ ಸಮಯದಲ್ಲಿ ಸ್ಟಿಂಗ್ ಆಪರೇಷನ್ ಖಂಡಿತಾ ಒಳ್ಳೆಯದಲ್ಲ. ಕಾಂಗ್ರೆಸ್‍ನಲ್ಲಿ ಕೆಲವರು ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂಬ ವಿಚಾರಗಳು ಚರ್ಚೆಯಲ್ಲಿವೆ, ಪ್ರತೀದಿನ ಒಬ್ಬೊಬ್ಬ ಶಾಸಕರು, ಸಚಿವರು, ಮಾಜಿ ಮುಖ್ಯಮಂತ್ರಿಗಳು ಸ್ಟಿಂಗ್ ಆಪರೇಷನ್ ಬಗ್ಗೆಯೇ ಮಾತನಾಡುತ್ತಾರೆ.
ಮಂತ್ರಿಯಾಗಲು, ಮುಖ್ಯಮಂತ್ರಿಯಾಗಲು ಸ್ಟಿಂಗ್ ನಡೆದಿದೆಯಂತೆ, ಮುಂದಿನ ದಿನಗಳಲ್ಲಿ ಎಲ್ಲವೂ ಬಹಿರಂಗವಾಗಲಿದೆ, ಇದೊಂದು ರಾಜಕಾರಣದ ವ್ಯಭಿಚಾರ, ಇಂತಹ ಕೆಲಸ ಯಾರು ಮಾಡಿದ್ದಾರೋ, ಅವರು ಪರಿಣಾಮ ಅನುಭವಿಸುತ್ತಾರೆ.
ರೈತರಿಗೆ ಭಿಕ್ಷೆ
ರಾಜ್ಯದಲ್ಲಿ ಭೀಕರ ಬರಗಾಲ ಇದೆ, ರೈತರಿಗೆ ಭಿಕ್ಷೆ ನೀಡುವಂತೆ ₹2,500 ಪರಿಹಾರ ಘೋಷಣೆ ಮಾಡಲಾಗಿದೆ, ಆದರೆ ಇದುವರೆಗೂ ಹಣ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ಆಡಳಿತದ ವೇಳೆ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ್ದರು, ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ಪರಿಹಾರ ಕೊಡಲು ಸಾಧ್ಯವಾಗದೇ ಸ್ಟಿಂಗ್ ಆಪರೇಷನ್ ವಿಷಯ ಮುನ್ನೆಲೆಗೆ ತಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡುತ್ತಿದೆ.
ರಾಜ್ಯ ಆರ್ಥಿಕ ದಿವಾಳಿಯತ್ತ ತಲುಪಿದೆ, ದಿವಾಳಿ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಎದೆಗಾರಿಕೆ ಇಲ್ಲದೆ, ಕೇಂದ್ರದ ಮೇಲೆ ಆರೋಪ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಲಾಗುತ್ತಿದೆ.
ರಿಯಲ್ ಎಸ್ಟೇಟ್ ದಂಧೆ
ಸರ್ಕಾರ ತೈಲ ಕಂಪನಿಗಳಿಗೆ ಹಣ ನೀಡಲು ಆಗದೆ, ರಾಜ್ಯ ರಸ್ತೆ ಸಾರಿಗೆ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿ ಡಿಪೋಗಳಲ್ಲೇ ನಿಲ್ಲುತ್ತಿವೆ, ರಿಯಲ್ ಎಸ್ಟೇಟ್ ದಂಧೆಯ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ತಾಲೂಕುಗಳಲ್ಲಿ ರಿಂಗ್ ರಸ್ತೆ ನಿರ್ಮಾಣ ಹೆಸರಿನಲ್ಲಿ ಅಲ್ಲೂ ರಿಯಲ್ ಎಸ್ಟೇಟ್ ದಂಧೆ ಮಾಡಲು ಹವಣಿಸುತ್ತಿದೆ ಎಂದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ವಿಷಯ ಈಗಾಗಲೇ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಯಲ್ಲಿದ್ದರೂ, ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಭೇಟಿಗೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಮನವಿ ಮಾಡಿರುವುದು ಶೋಭೆ ತರುವುದಿಲ್ಲ. ದೇಶದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ, ಚುನಾವಣೆಯಲ್ಲಿನ ಸೋಲುಗಳಿಂದ ಆ ಪಕ್ಷ ಭ್ರಮನಿರಸನಗೊಂಡಿದೆ.
ಕಾಂಗ್ರೆಸ್ ಮುಖಂಡರ ಹಗಲುಗನಸು
ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಯುವಜನರಿಂದ (ಜೆನ್-ಜೀ) ಅರಾಜಕತೆ ನಿರ್ಮಾಣವಾಯಿತು, ಭಾರತದಲ್ಲೂ ಅದೇ ರೀತಿ ಆಗಲಿದೆ ಎಂಬುದು ಕಾಂಗ್ರೆಸ್ ಮುಖಂಡರು ಹಗಲುಗನಸು ಕಾಣುತ್ತಿದ್ದಾರೆ.
ಹೇಗಾದರೂ ಮಾಡಿ ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ನಡೆಸುತ್ತಿರುವ ಷಡ್ಯಂತ್ರ, ಪಿತೂರಿಯನ್ನು ದೇಶದ ಜನತೆ ಒಪ್ಪುವುದಿಲ್ಲ.ಕಾಂಗ್ರೆಸ್‌ಗೆ ಮಾನ-ಮರ್ಯಾದೆ, ತಾಖತ್ ಇದ್ದರೆ, ದೇಶದ ಜನರ ಮತ್ತು ಮತದಾರರ ವಿಶ್ವಾಸ ಗಳಿಸಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ಸವಾಲು ಹಾಕಿದರು.ಅರಾಜಕತೆ ಸೃಷ್ಟಿಸಿ, ಒಂದು ಸುಳ್ಳನ್ನು ನೂರು ಬಾರಿ ಹೇಳಿ ಗೊಂದಲ ವಾತಾವರಣ ನಿರ್ಮಾಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

















