ಸೋನಿಯಾ ಆತ್ಮಕಥನ ‘ಬಿಲಾಂಗಿಂಗ್’ ನಲ್ಲಿ ರೋಚಕ ಅಂಶಗಳ ಉಲ್ಲೇಖ: ಪ್ರಧಾನಿ ಹುದ್ದೆ ನಿರಾಕರಣೆಯ ರಹಸ್ಯ ಬಹಿರಂಗ
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ ಸಮರಕ್ಕೆ ಕಾರಣವಾದ ಪುಸ್ತಕ
*
ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ದೇಶಾದ್ಯಂತದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ನವೆಂಬರ್ 10, 2026ರಂದು ಬಿಡುಗಡೆಯಾಗಿರುವ ಈ ಕೃತಿಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
*
ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಮಂಗಳವಾರ (ನವೆಂಬರ್ 10) ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಈ ಕೃತಿಯು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದೇಶದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಹಾಗೂ ಆನ್‌ಲೈನ್ ವೇದಿಕೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಅವರ ಬದುಕಿನ ಅನೇಕ ಘಟನೆಗಳನ್ನು ಒಳಗೊಂಡಿರುವ ಈ ಪುಸ್ತಕವು ದೇಶದ ಜನತೆಯ ಗಮನ ಸೆಳೆದಿದೆ.
ಪ್ರಧಾನಿ ಪಟ್ಟ ನಿರಾಕರಣೆಯ ರಹಸ್ಯ ಬಿಚ್ಚಿಟ್ಟ ಸೋನಿಯಾ
ಈ ಆತ್ಮಕಥನದಲ್ಲಿ ಸೋನಿಯಾ ಗಾಂಧಿ ಅವರು ಭಾರತೀಯ ರಾಜಕಾರಣದ ಅತ್ಯಂತ ಪ್ರಮುಖ ಘಟ್ಟಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಮುಖ್ಯವಾಗಿ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಜಯಗಳಿಸಿದಾಗ, ತಮಗೆ ಒಲಿದುಬಂದಿದ್ದ ಪ್ರಧಾನಿ ಹುದ್ದೆಯನ್ನು ತಾವು ಏಕೆ ನಿರಾಕರಿಸಿದೆ ಎಂಬ ಕೌತುಕದ ರಹಸ್ಯವನ್ನು ಇದೇ ಮೊದಲ ಬಾರಿಗೆ ವಿವರವಾಗಿ ಬರೆದಿದ್ದಾರೆ.
ಆ ಸಮಯದಲ್ಲಿ ನಡೆದ ಆಂತರಿಕ ರಾಜಕೀಯ ವಿದ್ಯಮಾನಗಳು ಮತ್ತು ಗೊಂದಲಗಳ ಕುರಿತು ಅವರು ಬೆಳಕು ಚೆಲ್ಲಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.




ವೈಯಕ್ತಿಕ ಬದುಕು, ಸಾರ್ವಜನಿಕ ಜೀವನದ ಅನಾವರಣ
544 ಪುಟಗಳ ಈ ಪುಸ್ತಕವು ಸೋನಿಯಾ ಗಾಂಧಿ ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ಸುದೀರ್ಘ ಪಯಣವನ್ನು ಒಳಗೊಂಡಿದೆ. ಇಟಲಿಯ ಒರ್ಬಸ್ಸಾನೊದಲ್ಲಿ ಕಳೆದ ಬಾಲ್ಯ, 1965ರಲ್ಲಿ ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಅವರೊಂದಿಗೆ ನಡೆದ ಭೇಟಿ ಮತ್ತು ಪ್ರೇಮ ವಿವಾಹದ ದಿನಗಳನ್ನು ಅವರು ಸ್ಮರಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಗಾಂಧಿ ಕುಟುಂಬವನ್ನು ಕಾಡಿದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಯ ಭೀಕರ ದುರಂತಗಳು, ಆ ಬಳಿಕ ಎದುರಾದ ತೀವ್ರ ಒಂಟಿತನ ಮತ್ತು ಅನಿವಾರ್ಯವಾಗಿ ರಾಜಕೀಯಕ್ಕೆ ಪ್ರವೇಶಿಸಬೇಕಾಗಿ ಬಂದ ಕಠಿಣ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ರಾಜಕೀಯ ವಲಯದಲ್ಲಿ ವಾಗ್ವಾದ
ಪುಸ್ತಕ ಬಿಡುಗಡೆಯಾದ ಬೆನ್ನಲ್ಲೇ ದೇಶದ ರಾಜಕೀಯ ರಂಗದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.
ಆಡಳಿತಾರೂಢ ಬಿಜೆಪಿಯು ಈ ಪುಸ್ತಕವನ್ನು ‘ನೆಹರೂ-ಗಾಂಧಿ ಪರಿವಾರದ ಐತಿಹಾಸಿಕ ಪ್ರಮಾದಗಳನ್ನು ಮುಚ್ಚಿಹಾಕುವ ಪ್ರಯತ್ನ’ (ವೈಟ್ ವಾಷಿಂಗ್) ಎಂದು ಕಟುವಾಗಿ ಟೀಕಿಸಿದೆ. 1984ರ ಸಿಖ್ ದಂಗೆ ಮತ್ತು ತುರ್ತು ಪರಿಸ್ಥಿತಿಯಂತಹ ವಿಷಯಗಳ ಉಲ್ಲೇಖವನ್ನು ಮುಂದಿಟ್ಟುಕೊಂಡು ಬಿಜೆಪಿ ವಾಗ್ದಾಳಿ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು, ‘ಇದು ಮಾಧ್ಯಮಗಳ ಮೂಲಕ ಸೃಷ್ಟಿಸಿದ ಕಥೆಯಲ್ಲ, ಸೋನಿಯಾ ಗಾಂಧಿ ಅವರ ಸ್ವಂತ ಬದುಕಿನ ಪ್ರಾಮಾಣಿಕ ಪಯಣ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ಪುಸ್ತಕ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದ್ದರೂ ನವದೆಹಲಿಯ ಪ್ರಸಿದ್ಧ ಖಾನ್ ಮಾರ್ಕೆಟ್ ನಲ್ಲಿರುವ ಪುಸ್ತಕ ಮಳಿಗೆಗಳು ಸೇರಿದಂತೆ ದೇಶದ ಪ್ರಮುಖ ನಗರಗಳ ಪುಸ್ತಕ ಮಳಿಗೆಗಳಲ್ಲಿ ಪುಸ್ತಕವನ್ನು ಖರೀದಿಸಲು ಸಾರ್ವಜನಿಕರು ಮತ್ತು ರಾಜಕೀಯ ಆಸಕ್ತರು ಮುಗಿಬೀಳುತ್ತಿದ್ದಾರೆ.
ಪುಸ್ತಕವು ಸೋನಿಯಾ ಗಾಂಧಿ ಅವರ ಅನೇಕ ವೈಯಕ್ತಿಕ ಹಾಗೂ ರಾಜಕೀಯ ಸಂಗತಿಗಳನ್ನು ಒಳಗೊಂಡಿದ್ದು, ಇದು ಸಂಪೂರ್ಣವಾಗಿ ಕೇವಲ ಒಂದು ರಾಜಕೀಯ ಪುಸ್ತಕವಲ್ಲ, ಬದಲಾಗಿ ಅವರ ವೈಯಕ್ತಿಕ ಅನುಭವಗಳು ಮತ್ತು ಜೀವನದ ಕಥನವಾಗಿದೆ.
ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪ್ರೇಮ ಸಂಬಂಧ ಹಾಗೂ ಅವರ ಸುದೀರ್ಘ ಪಯಣದ ಬಗ್ಗೆ ವಿವರವಾದ ಉಲ್ಲೇಖಗಳಿವೆ.
ಅಲ್ಲದೆ, ಅನೇಕ ಪ್ರಮುಖ ರಾಜಕೀಯ ಘಟನೆಗಳನ್ನು ಸೋನಿಯಾ ಅವರ ಪುಸ್ತಕದಲ್ಲಿ ಚಿತ್ರಿತವಾಗಿವೆ. ಮುಖ್ಯವಾಗಿ 90 ಮತ್ತು ಆ ನಂತರದ ಘಟ್ಟಗಳು ಉಲ್ಲೇಖವಾಗಿವೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರುಗಳ ಹತ್ಯೆ ಘಟನೆಗಳ ಬಗ್ಗೆ ಅನೇಕ ಅಂಶಗಳು ಉಲ್ಲೇಖವಾಗಿವೆ ಹಾಗೂ ಈ ಸಂದರ್ಭದಲ್ಲಿ ಇಂದಿರಾ ಸೊಸೆಯಾಗಿ ಮತ್ತು ರಾಜೀವ್ ಪತ್ನಿಯಾಗಿ ಸೋನಿಯಾ ಗಾಂಧಿ ಅನುಭವಿಸುವ ತಲ್ಲಣಗಳ ಬಗ್ಗೆ ಬರವಣಿಗೆ ಇದೆ.





















