ಆರ್. ಅಶೋಕ್, ವಿಜಯೇಂದ್ರ ಸ್ಥಾನ ಪಲ್ಲಟ ಖಚಿತ, ಸುನೀಲ್ ಕುಮಾರ್ʼಗೆ ಆಯಕಟ್ಟಿನ ಜಾಗ ಗ್ಯಾರಂಟಿ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷವನ್ನು ಬಲಪಡಿಸಲು ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಳನ್ನು ಮಾಡಲು ವರಿಷ್ಠರು ತೀರ್ಮಾನ ಮಾಡಿದ್ದಾರೆ.
ಈ ಸಂಬಂಧ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ವರಿಷ್ಠರು ನವದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.
ಪ್ರಮುಖರೊಂದಿಗೆ ಸಮಾಲೋಚನೆ
ರಾಜ್ಯ ಉಸ್ತುವಾರಿ ಹರೀಶ್ ಚಂದ್ರ ದ್ವಿವೇದಿ ಒಂದು ವಾರ ನಗರದಲ್ಲೇ ಬಿಡಾರ ಹೂಡಿ ಪಕ್ಷದ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪ್ರಮುಖರೊಂದಿಗೆ ಸಮಾಲೋಚಿಸಿ, ಸಂಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದರು.
ದ್ವಿವೇದಿ ನೀಡಿರುವ ವರದಿ ಆಧರಿಸಿ ವರಿಷ್ಠರು ರಾಜ್ಯ ನಾಯಕತ್ವದಲ್ಲಿ ಕೆಲವು ಬದಲಾವಣೆ ತೀರ್ಮಾನ ಕೈಗೊಳ್ಳಲಿದ್ದು, ಒಂದೆರಡು ದಿನದಲ್ಲೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಅವಧಿ ನವೆಂಬರ್ ಮೂರನೇ ವಾರಕ್ಕೆ ಅಂತ್ಯಗೊಳ್ಳಲಿದ್ದು, ಅವರನ್ನೇ ಎರಡನೇ ಅವಧಿಗೆ ಮುಂದುವರಸುವರೇ ಅಥವಾ ಹೊಸಬರನ್ನು ಆ ಸ್ಥಾನಕ್ಕೆ ತರಬೇಕೇ ಎಂಬ ಕುರಿತು ನಿರ್ಧಾರವಾಗಲಿದೆ.
ಯಡಿಯೂರಪ್ಪ ಕಡೆಗಣನೆಗೆ ಧೈರ್ಯ ಇಲ್ಲ
ಕರ್ನಾಟಕದ ಬಿಜೆಪಿಯ ಕೆಲವು ಹಿರಿಯ ನಾಯಕರು ವಿಜಯೇಂದ್ರ ಬದಲಾವಣೆಗೆ ಒತ್ತಾಯ ತರುತ್ತಿದ್ದಾರೆ, ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿ ವಿಧಾನಸಭೆ ಚುನಾವಣೆ ಎದುರಿಸುವ ಧೈರ್ಯ ವರಿಷ್ಠರಿಗಿಲ್ಲ ಎನ್ನಲಾಗಿದೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದನ್ನು ಮನಗಂಡ ವರಿಷ್ಠರು ವಿಜಯೇಂದ್ರ ಅವರನ್ನು ಪ್ರಮುಖ ಸ್ಥಾನದಲ್ಲಿ ಉಳಿಸಿಕೊಂಡೇ ರಾಜ್ಯ ಬಿಜೆಪಿಯನ್ನು ಬಲಿಷ್ಠಗೊಳಿಸಲು ಮುಂದಾಗಿದ್ದಾರೆ.
ಹೊಸ ಮುಖಗಳಿಗೆ ಅವಕಾಶ
ಪಕ್ಷ ಬಲಪಡಿಸುವಲ್ಲಿ ಬಿಜೆಪಿ ಪುನಾರಚನೆ ವೇಳೆ ಕೆಲವರು ಅಧಿಕಾರ ಕಳೆದುಕೊಳ್ಳಲಿದ್ದು, ಹೊಸ ಮುಖಗಳಿಗೆ ಅವಕಾಶ ದೊರೆಯಲಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕನ ಬದಲಾವಣೆ ಬಗ್ಗೆಯೂ ದೆಹಲಿಯ ಬಿಜೆಪಿ ಅಂಗಳದಲ್ಲಿ ಬಿರುಸಿನ ಚರ್ಚೆ ನಡೆದಿದ್ದು, ಯಾರು ಯಾವ ಸ್ಥಾನಕ್ಕೆ ಬರುತ್ತಾರೆ ಎಂಬ ಚಿತ್ರಣ ಒಂದೆರಡು ದಿನದಲ್ಲಿ ಹೊರಬೀಳಲಿದೆ. ಸದ್ಯಕ್ಕೆ ಆ ಸ್ಥಾನದಲ್ಲಿರುವ ಆರ್. ಅಶೋಕ್ ಬದಲಾವಣೆ ಬಹುತೇಕ ಕನ್ಫರ್ಮ್ ಎಂದು ಗೊತ್ತಾಗಿದೆ.
ವಿಜಯೇಂದ್ರ ಅವರನ್ನು ಕೆಳಗಿಳಿಸಿ ಆ ಸ್ಥಾನ ಪಡೆಯುವ ರೇಸಿನಲ್ಲಿ ವಿ.ಸೋಮಣ್ಣ, ಸುನೀಲ್ ಕುಮಾರ್, ಮುರುಗೇಶ್ ನಿರಾಣಿ, ಮಹೇಶ್ ಟೆಂಗಿನಕಾಯಿ ಹೆಸರುಗಳು ಚಾಲ್ತಿಯಲ್ಲಿವೆ. ರಾಜ್ಯ ಬಿಜೆಪಿ ಅಧ್ಯಕ್ಷನ ಸ್ಥಾನಕ್ಕೆ ಮಹೇಶ್ ಟೆಂಗಿನಕಾಯಿ ಅವರನ್ನು ತರುವ ಬಗ್ಗೆ ವರಿಷ್ಠರು ಆಲೋಚನೆ ಮಾಡುತ್ತಿದ್ದಾರೆ. ಪ್ರತಿಪಕ್ಷ ಸ್ಥಾನಕ್ಕೆ ವಿಜಯೇಂದ್ರ ಅಥವಾ ಸುನೀಲ್ ಕುಮಾರ್ ಎನ್ನಲಾಗಿದೆ.
ಮತ್ತೊಂದು ದೆಹಲಿ ಮೂಲದ ಪ್ರಕಾರ, ಸುನೀಲ್ ಕುಮಾರ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ವಿಜಯೇಂದ್ರ ಅವರನ್ನು ಪ್ರತಿಪಕ್ಷ ನಾಯಕರನ್ನಾವಗಿ ಮಾಡುವ ದಿಕ್ಕಿನಲ್ಲಿಯೂ ವರಿಷ್ಠರ ಚಿಂತನೆ ನಡೆದಿದೆ ಎನ್ನಲಾಗಿದೆ.
ನವೆಂಬರ್ ೧೯ರಂದು ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆ ಭೇಟಿ ಸಂದರ್ಭದಲ್ಲಿ ಹಿರಿಯೂರು ಉಪ ಚುನಾವಣೆ ವಿಷಯಕ್ಕಿಂತ ರಾಜ್ಯ ಬಿಜೆಪಿ ಸರ್ಜರಿ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದೆ ಎಂದು ಮಾಹಿತಿ ಸಿಕ್ಕಿದೆ.

















