ಕವಿತೆ

– ಬಿ ಎಸ್ ಜಯಪ್ರಕಾಶ ನಾರಾಯಣ
ಕನ್ನಡವೆಂದರೆ ಬರಿ ನಾನಲ್ಲ ಎಂದರು ಹಿರಿಯರು ನೋಡು/
ಬಾಳಲಿ ಮುದವನು ತರುವುದು ಸಹಜ, ಕನ್ನಡವನು ನೀ ಆಡು//
*
ಅಂತರಂಗದಲಿ ಅರಳುವ ಹೂವು, ಕನ್ನಡ ತಾಯಿಯ ಕುಡಿಯು/
ಆಡುತ ಹಾಡುತ ನಲಿವು ಹಬ್ಬುವುದು, ನಾವು ಕಟ್ಟಿದ ಗುಡಿಯು//
*
ಶತಶತಮಾನದ ಚರಿತೆಯ ಪರಿ ಇದೆ, ಹೃದಯಕೆ ಪುಷ್ಟಿಯ ಸೊದೆಯು/
ಅಮೃತವ ಸವಿದ ಖುಷಿಯಲಿ ಕುಣಿವುದು, ಮಕ್ಕಳ ಪ್ರಾಂಜಲ ಎದೆಯು//
*
ಕೊರಳಲಿ ಭಾವ, ಅರಳಲಿ ಜೀವ, ಮಿಡಿಯಲಿ ಕನ್ನಡ ರವವು/
ಬಿದ್ದರೆ ನೀರು ಬೆಳೆವುದು ಗಿಡವು, ನುಡಿಗೆ ಮಿಡಿಯಲಿ ಭವವು//
*
ಹಿಂದಿನ ಹಾದಿಯ ಮಾದರಿ ಮುಂದಿದೆ, ಎಂದಿದೆ ಒಳಗಿನ ಲೋಕ/
ಮುಂದಿನ ದಾರಿಯ ತೊಡರನು ಕಂಡು, ದಾರಿ ಕಾಣದೆ ಮೂಕ! //
*
ನಮ್ಮ ನುಡಿಯನು ನುಂಗಿ ನೊಣೆಯುತಿದೆ ಮನಸಿನೊಳಗಿನ ದಾಸ್ಯ/
ಕಲಿವ ತಾಣದಲಿ ಇರಲಿ ಕನ್ನಡ, ಉಳಿದು ಬೆಳೆಯಲಿ ಲಾಸ್ಯ//
*
ಕನ್ನಡ ಸೊಲ್ಲಲಿ ತುಂಬಿ ಇರುವುದು ಸಹಜ ಖುಷಿಯ ಭಾಷ್ಯ/
ಎಲ್ಲರ ಸಂಗಡ ಹರಿಯಲಿ ಕನ್ನಡ, ನಾಡಿಗೆ ತರಲದು ಭಾಗ್ಯ//
*
ಕನ್ನಡವೆಂದರೆ ಅಮ್ಮನ ಹಾಗೆ, ಅಭಯವಿರುವ ಮಡಿಲು/
ಅವಳು ಉಳಿದರೆ ನಾವು ಉಳಿವೆವು, ಅಮೃತ ಮಥನದ ಕಡಲು//















